ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಷತ್‌ ಅಭ್ಯರ್ಥಿ ಆಯ್ಕೆ: ಕಾಂಗ್ರೆಸ್‌ ನಾಯಕರ ಸಭೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ದೆಹಲಿ ನಿವಾಸದಲ್ಲಿ ಚರ್ಚೆ
Published 29 ಮೇ 2024, 23:26 IST
Last Updated 29 ಮೇ 2024, 23:26 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ ಏಳು ಸ್ಥಾನಗಳನ್ನು ಗೆಲ್ಲುವ ಅವಕಾಶವಿದ್ದು, ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ದೆಹಲಿ ನಿವಾಸದಲ್ಲಿ ಬುಧವಾರ ರಾತ್ರಿ ಸಭೆ ನಡೆಯಿತು.

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಭಾಗವಹಿಸಿದರು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. 

ಏಳು ಸ್ಥಾನಗಳಿಗೆ ಕಾಂಗ್ರೆಸ್‌ನಿಂದ 300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಹಂಚಿಕೆ ಮಾನದಂಡವನ್ನು ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನಿ ಸಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಈಗಾಗಲೇ ಹೇಳಿದ್ದಾರೆ.

ಒಂದು ಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರನ್ನು ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆ ಇದೆ. ಯತೀಂದ್ರ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗಾಗಿ ವರುಣಾ ಕ್ಷೇತ್ರವನ್ನು ತ್ಯಾಗ ಮಾಡಿದ್ದರು. ಉಳಿದಂತೆ, ಸಚಿವ ಎನ್‌.ಎಸ್‌. ಬೋಸರಾಜು ಅವರ ಪುನರಾಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ. 

ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ‌ ಕಲ್ಪಿಸಬೇಕು: ಪರಮೇಶ್ವರ

‘ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನನ್ನ ಹೇಳಿಕೆಯನ್ನು ಯಾರೂ ತಪ್ಪಾಗಿ ಅರ್ಥೈಸಿ ಕೊಳ್ಳಬೇಕಾದ ಅಗತ್ಯ ಇಲ್ಲ. ಪ್ರಮುಖರ ಜೊತೆ ಸಮಾಲೋಚಿಸಿ ಆಯ್ಕೆ ಮಾಡುವುದು ಪ್ರಕ್ರಿಯೆ. ಕೆಪಿಸಿಸಿ‌ ಅಧ್ಯಕ್ಷನಾಗಿ‌ ಕೆಲಸ ಮಾಡಿದ ಅನುಭವದಿಂದ ಆ‌ ಮಾತು ಹೇಳಿದ್ದೇನೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಯಾರು ಪಕ್ಷಕ್ಕಾಗಿ ದುಡಿದಿದ್ದಾರೋ, ಯಾವ ಸಮುದಾಯ ಪಕ್ಷದ ಜೊತೆ ನಿಂತಿದೆಯೋ ಅಂಥವರಿಗೆ ಅವಕಾಶ‌ ಕಲ್ಪಿಸಬೇಕು. ಪಕ್ಷಕ್ಕಾಗಿ‌ ಕೆಲಸ‌ ಮಾಡಿದವರ ಜೊತೆ, ಸಮಾಲೋಚಿಸಿ ಅಭಿಪ್ರಾಯ ಪಡೆಯಬೇಕೆಂದು ನಾನು ಸಲಹೆ ನೀಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು‌.

‘ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಏಳು ಸ್ಥಾನಗಳು ನಮ್ಮ ಪಕ್ಷಕ್ಕೆ ಬರಲಿವೆ. ಆಯ್ಕೆ ಮಾಡುವುದು ಕಷ್ಟದ ಕೆಲಸ. ಉನ್ನತಮಟ್ಟದ ಸಮಿತಿ ರಚಿಸಿ, ಚರ್ಚಿಸಿದರೆ ಸಲಹೆಗಳು ಬರುತ್ತವೆ. ಆದರೆ, ಆ ಸಮಿತಿ ರಚಿಸುವ ಸಮಯ ಮೀರಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮುಖ್ಯಮಂತ್ರಿಯನ್ನು ನಾನು ಭೇಟಿ‌ ಮಾಡಿಲ್ಲ’ ಎಂದೂ ಹೇಳಿದರು.

ತಪ್ಪಿತಸ್ಥರ ಬಂಧನಕ್ಕೆ ಪಕ್ಷವಿಲ್ಲ: ‘ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ಬಂಧನಕ್ಕೆ ಪಕ್ಷ ಎಂಬುದು ಬರುವುದಿಲ್ಲ.‌ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಎಂಬುದಕ್ಕಿಂತ, ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆಂದು ಕಂಡು ಬರುತ್ತದೆಯೋ ಅಂಥವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ. ಈಗಾಗಲೇ‌ 11-12 ಜನರನ್ನು ಬಂಧಿಸಲಾಗಿದೆ’ ಎಂದರು.

ಜೂನ್ 3ಕ್ಕೆ ಮತದಾರರಿಗೆ ರಜೆ

ಜೂನ್ 3 ರಂದು ನಡೆಯುವ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತಗಳ ಚುನಾವಣೆಯ ಕಾರಣ ಅರ್ಹ ಮತದಾರರಿಗಷ್ಟೇ ಸೀಮಿತವಾಗಿ ಮತದಾನ ಮಾಡಲು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈಶಾನ್ಯ ಪದವೀಧರರ ಕ್ಷೇತ್ರ, ನೈರುತ್ಯ ಪದವೀಧರರ ಕ್ಷೇತ್ರ, ಬೆಂಗಳೂರು ಪದವೀಧರರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈ ಕ್ಷೇತ್ರದ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿನ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಈ ಆದೇಶ ಅನ್ವಯವಾಗಲಿದೆ. ಇಲ್ಲಿನ ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಮತ್ತು ಅನುದಾನ ರಹಿತ ವಿದ್ಯಾಸಂಸ್ಥೆಗಳು, ಎಲ್ಲ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು, ಕೈಗಾರಿಕಾ ಸಂಸ್ಥೆಗಳು, ಸಹಕಾರ ರಂಗದ ಸಂಘ ಸಂಸ್ಥೆಗಳಲ್ಲಿ ಕಾಯಂ ಅಥವಾ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ವಿಶೇಷ ಸಾಂದರ್ಭಿಕ ರಜೆ ನೀಡುವಂತೆ ನಿರ್ದೇಶನ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT