ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನ ಪರಿಷತ್‌ | ಬಯಲು ಸೀಮೆ ಮಂಡಳಿ ಅವ್ಯವಹಾರ; ತನಿಖೆಗೆ ಆಗ್ರಹ

Published 14 ಫೆಬ್ರುವರಿ 2024, 14:35 IST
Last Updated 14 ಫೆಬ್ರುವರಿ 2024, 14:35 IST
ಅಕ್ಷರ ಗಾತ್ರ

ಬೆಂಗಳೂರು: ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಬುಧವಾರ ವಿಧಾನ ಪರಿಷತ್‌ ಕಲಾಪದಲ್ಲಿ ಪ್ರತಿಧ್ವನಿಸಿತು. ಕಾಂಗ್ರೆಸ್‌ನ ಎಂ.ಎಲ್‌.ಅನಿಲ್‌ ಕುಮಾರ್ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಸದಸ್ಯರು ಪಕ್ಷಭೇದ ಮರೆತು ಬೆಂಬಲ ಸೂಚಿಸಿದರು.

‘ಮಂಡಳಿ ವ್ಯಾಪ್ತಿಗೆ ಒಳಪಡುವ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ 99 ಸದಸ್ಯರಿಗೆ ಸರ್ಕಾರ ಪ್ರತಿ ವರ್ಷ ತಲಾ ₹1 ಕೋಟಿ ನೀಡುತ್ತದೆ. 2022–23ನೇ ಸಾಲಿನ ಕ್ರಿಯಾ ಯೋಜನೆಗೆ ಸರ್ಕಾರದ ಅನುಮೋದನೆ ಪಡೆಯದೇ ಮಂಡಳಿಯ ಕಾರ್ಯದರ್ಶಿ ಹಂತದಲ್ಲೇ ಆಡಳಿತಾತ್ಮಕ ಅನುಮೋದನೆ ನೀಡಿದ್ದ ಕಾರಣ ಸಮಸ್ಯೆಯಾಗಿದೆ. ಕಾಮಗಾರಿ ನಡೆಸಿದವರು ಹಣಕ್ಕಾಗಿ ನಮ್ಮನ್ನು ಪೀಡಿಸುತ್ತಾರೆ. ನಮಗೆ ಇರುವ ಅಲ್ಪ ಅನುದಾನವೂ ಸಿಗದಂತೆ ಆಗಿದೆ. 2023–24ನೇ ಸಾಲಿನಲ್ಲಿ ಕೇವಲ ₹35 ಲಕ್ಷ ದೊರೆತಿದೆ’ ಎಂದು ಅನಿಲ್‌ ಕುಮಾರ್ ಹೇಳಿದರು.

ನಿಯಮದಂತೆ ಕಾರ್ಯನಿರ್ವಹಿಸದೇ ಲೋಪ ಎಸಗಿದ ಮಂಡಳಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಹಾಗೂ ವಿಷಯ ನಿರ್ವಾಹಕರನ್ನು ಈಗಾಗಲೆ ಅಮಾನತು ಮಾಡಲಾಗಿದೆ. ಅವರ ಸೇವೆಯನ್ನು ಮಾತೃ ಇಲಾಖೆಗೆ ಹಿಂದಿರುಗಿಸಲಾಗಿದೆ. ಹೆಚ್ಚುವರಿ ಮಂಜೂರಾತಿ ನೀಡಿ ಕೈಗೊಂಡಿದ್ದ ₹224 ಕೋಟಿ ವೆಚ್ಚದ 2,374 ಕಾಮಗಾರಿಗಳನ್ನು ರದ್ದು ಮಾಡಲಾಗಿದೆ. ಮುಂದುವರಿದ ಕಾಮಗಾರಿಗಳಿಗೆ ₹150 ಕೋಟಿ ಹೆಚ್ಚುವರಿ ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಭಾನಾಯಕ ಎನ್.ಎಸ್. ಬೋಸರಾಜು ಉತ್ತರಿಸಿದರು.

ಕಾರ್ಯದರ್ಶಿಯು ಆಡಳಿತ ಲೋಪ ಎಸಗಿರುವುದಲ್ಲದೇ, ತನ್ನ ಮಗನ ಒಡೆತನದ ಖಾಸಗಿ ಶಿಕ್ಷಣ ಸಂಸ್ಥೆಗೆ ₹2 ಕೋಟಿ ಅನುದಾನ ನೀಡಿದ್ದಾರೆ. ವರ್ಷಕ್ಕೆ ಇಂತಿಷ್ಟು ಸಭೆ ನಡೆಸಬೇಕು ಎಂಬ ನಿಯಮವನ್ನೂ ಉಲ್ಲಂಘಿಸಿದ್ದಾರೆ. ಎಲ್ಲ ಅವ್ಯವಹಾರಗಳ ಕುರಿತು ತನಿಖೆಗೆ ಆದೇಶಿಸಬೇಕು. ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಹಲವು ಸದಸ್ಯರು ಒತ್ತಾಯಿಸಿದರು.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರ ಬಳಿ ಚರ್ಚಿಸಿದ ನಂತರ ತನಿಖೆಗೆ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೋಸರಾಜು ಭರವಸೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT