ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂದಿನ ವರ್ಷ ಕೌನ್ಸೆಲಿಂಗ್ ಮೂಲಕ ಪಿಡಿಒ ವರ್ಗಾವಣೆ: ಪ್ರಿಯಾಂಕ್‌ ಖರ್ಗೆ

Published 13 ಫೆಬ್ರುವರಿ 2024, 16:02 IST
Last Updated 13 ಫೆಬ್ರುವರಿ 2024, 16:02 IST
ಅಕ್ಷರ ಗಾತ್ರ

ಬೆಂಗಳೂರು: ಪಿಡಿಒ (ಪಂಚಾಯತ್‌ ಅಭಿವೃದ್ಧಿ ಅಧಿಕಾರಿ) ವರ್ಗಾವಣೆಯನ್ನು ಮುಂದಿನ ವರ್ಷದಿಂದ ಕೌನ್ಸೆಲಿಂಗ್‌ ಮೂಲಕ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಕಾಂಗ್ರೆಸ್‌ನ ಎಚ್‌.ಡಿ.ರಂಗನಾಥ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಅವರು ಈ ವಿಷಯ ತಿಳಿಸಿದರು.

ಪಿಡಿಒಗಳು ಸಚಿವರು, ಶಾಸಕರಿಗೆ ಆಪ್ತ ಸಹಾಯಕರಾಗಲು ಒಪ್ಪಿಗೆ ಕೊಡುತ್ತಿಲ್ಲ. ಇದರಿಂದ ಗ್ರಾಮಗಳಲ್ಲಿನ ಕೆಲಸ ಕಾರ್ಯಗಳಿಗೆ ತೊಂದರೆ ಆಗುತ್ತಿದೆ. 60ರಿಂದ 70 ಜನ ಪಿಡಿಒಗಳು ಆಪ್ತ ಸಹಾಯಕರಾಗಿ ಹೋದರೆ, ದೊಡ್ಡ ಮಟ್ಟದ ಕೊರತೆ ಆಗುತ್ತದೆ. ಆದ್ದರಿಂದ ಆಪ್ತ ಸಹಾಯಕರನ್ನಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸುವುದು ಒಳ್ಳೆಯದು ಎಂದು ಪ್ರಿಯಾಂಕ್‌ ಹೇಳಿದರು.

ಪಿಡಿಒಗಳ ವರ್ಗಾವಣೆಯಲ್ಲಿ ಸಮಸ್ಯೆ ಆಗುತ್ತಿದೆ. ಇದನ್ನು ತಪ್ಪಿಸಲು ಕೌನ್ಸೆಲಿಂಗ್‌ ಮೂಲಕವೇ ವರ್ಗಾವಣೆ ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ನೀರಿಗಾಗಿ ಮಹಾರಾಷ್ಟ್ರಕ್ಕೆ ಮನವಿ:

ಕಲಬುರಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿರುವುದರಿಂದ ನೀರು ಹರಿಸುವಂತೆ ಮಹಾರಾಷ್ಟ್ರಕ್ಕೆ ಮನವಿ ಮಾಡಲಾಗುವುದು ಎಂದು ಪ್ರಿಯಾಂಕ್‌ ಖರ್ಗೆ ಅವರು ಅಲ್ಲಮಪ್ರಭು ಪಾಟೀಲ ಅವರ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ ಬರ ನಿರ್ವಹಣೆ ಮತ್ತು ಕುಡಿಯುವ ನೀರು ಪೂರೈಕೆಗಾಗಿ ಅಗತ್ಯವಿರುವಷ್ಟು ಹಣವನ್ನು ಇಡಲಾಗಿದೆ. ಹೊಸ ಕೊಳವೆಬಾವಿಗಳನ್ನು ಕೊರೆಸಲು ಆದೇಶ ನೀಡಲಾಗಿದೆ. ಈ ವರ್ಷ ಮಳೆ ಕಡಿಮೆ ಆಗಿರುವುದರಿಂದ ಮಹಾರಾಷ್ಟ್ರದಲ್ಲೂ ನೀರಿನ ಕೊರತೆ ಇದೆ. ಆದರೂ ಕುಡಿಯುವ ನೀರಿಗಾಗಿ ಮನವಿ ಮಾಡುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT