ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Pen Drive case: ಸಂತ್ರಸ್ತೆಯ ಅಪಹರಣ ಆರೋಪಿಗೆ ಜಾಮೀನು

Published 28 ಜೂನ್ 2024, 20:19 IST
Last Updated 28 ಜೂನ್ 2024, 20:19 IST
ಅಕ್ಷರ ಗಾತ್ರ

ಬೆಂಗಳೂರು:ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯನ್ನು ಅಪಹರಿಸಲು ಸಹಕಾರ ನೀಡಿದ ಆರೋಪದಡಿ ಬಂಧನಕ್ಕೊಳಾಗಿರುವ ಆರನೇ ಆರೋಪಿ ಎಚ್.ಟಿ.ಕೀರ್ತಿ; ತಮ್ಮ ತಂದೆಯ ಮರಣೋತ್ತರ ವಿಧಿವಿಧಾನಗಳನ್ನು ನೆರವೇರಿಸಲು (ಅಪರ ಕರ್ಮ) ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಕುರಿತಂತೆ ಆರೋಪಿ ಎಚ್.ಟಿ.ಕೀರ್ತಿ ಸಲ್ಲಿಸಿದ್ದ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ‘ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಸ್.ಕೃಷ್ಣ ದೀಕ್ಷಿತ್ ಅವರು ಶುಕ್ರವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಕೀರ್ತಿ ಅವರ ತಂದೆ ಇದೇ 24ರಂದು ನಿಧನರಾಗಿದ್ದಾರೆ. ಮೃತರಿಗೆ ಕೀರ್ತಿ ಏಕಮಾತ್ರ ಪುತ್ರ. ಹಾಗಾಗಿ, ತಂದೆಯ ಮರಣಾನಂತರದ ಕ್ರಿಯೆಗಳನ್ನು ಪೂರೈಸುವ ಸಲುವಾಗಿ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಮೃತ ಪೋಷಕರ ಅಪರ ಕರ್ಮದಲ್ಲಿ ಭಾಗವಹಿಸಲು ಅನುವು ಮಾಡಿಕೊಡುವುದು ಧಾರ್ಮಿಕ ಹಕ್ಕುಗಳ ಭಾಗವಾಗಿದೆ. ಈ ನಿಟ್ಟಿನಲ್ಲಿ ಅರ್ಜಿದಾರರಿಗೆ ಜುಲೈ 15ರವರೆಗೆ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಲಾಗುತ್ತಿದೆ’ ಎಂದು ಆದೇಶಿಸಿತು.

‘ಅರ್ಜಿದಾರರನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡಬೇಕು. ಆರೋಪಿಯು ₹ 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ನೀಡಬೇಕು. ಮೈಸೂರು ಜಿಲ್ಲೆಯ ಕೆ.ಆರ್.ನಗರದ ಹೊರತಾಗಿ ಬೇರೆಡೆ ಪ್ರವಾಸ ಮಾಡಬಾರದು. ಅಪರ ಕರ್ಮಗಳನ್ನು ನೇರವೇರಿಸಿದ ಬಳಿಕ ಜುಲೈ 15 ಕ್ಕೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಬೇಕು’ ಎಂಬ ಷರತ್ತು ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT