ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಜಮೀನಿನಲ್ಲಿ ಉಳುಮೆ: ಪ್ರಕರಣ ದಾಖಲಿಸದಂತೆ ಆದೇಶ

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವ ಆರ್‌.ಅಶೋಕ್‌
Last Updated 19 ನವೆಂಬರ್ 2022, 20:40 IST
ಅಕ್ಷರ ಗಾತ್ರ

ಭೀಮನಕೊಲ್ಲಿ (ಮೈಸೂರು ಜಿಲ್ಲೆ): ‘ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನು ಅಥವಾ ಅರಣ್ಯ ಇಲಾಖೆಯ ಜಾಗಗಳಲ್ಲಿ ಉಳುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸದಂತೆ ಈಚೆಗೆ ಆದೇಶಿಸಲಾಗಿದೆ. ವಿಚಾರಣೆಗೆಂದು ಇನ್ನು ರೈತರು ಬೆಂಗಳೂರಿಗೆ ಬರುವಂತಿಲ್ಲ’ ಎಂದು ಕಂದಾಯ ಸಚಿವ ಆರ್.ಅಶೋಕ ಪ್ರಕಟಿಸಿದರು.

ಎಚ್‌.ಡಿ.ಕೋಟೆ ತಾಲ್ಲೂಕಿನ ಭೀಮನಕೊಲ್ಲಿ ಗ್ರಾಮದ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಹಾಗೂ ‘ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ನಗರ ಪ್ರದೇಶದಲ್ಲಿ ಉಳುಮೆ ಮಾಡಿದರೆ ಪ್ರಕರಣ ದಾಖಲಿಸಬಹುದು’ ಎಂದು ಅವರು ಸ್ಪಷ್ಟಪಡಿಸಿದರು.

‘2 ಅಥವಾ 3 ಗುಂಟೆ ಜಾಗದಲ್ಲಿ ಮನೆ ಕಟ್ಟುವ ಪರಿಶಿಷ್ಟರಿಗೆ ಜಿಲ್ಲಾಧಿಕಾರಿ ಮಟ್ಟದಲ್ಲೇ ಭೂಪರಿವರ್ತನೆಗೆ ಅವಕಾಶ ಕೊಡಲಾಗಿದೆ. 7 ದಿನದಲ್ಲಿ ಭೂ ಪರಿವರ್ತನೆಗೆ ನಿಯಮ ರೂಪಿಸಲಾಗುವುದು. ಶೀಘ್ರವೇ ಈ ಪ್ರಸ್ತಾವವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು’ ಎಂದರು.

‘ಜಿಲ್ಲೆಯಲ್ಲಿ 52 ವರ್ಷದಿಂದ ಉಳುಮೆ ಮಾಡಿದವರಿಗೆ ಹಕ್ಕುಪತ್ರ ಕೊಟ್ಟಿಲ್ಲ. ಡೀಮ್ಡ್ ಫಾರೆಸ್ಟ್ ನಿಯಮದಲ್ಲಿ ಬದಲಾವಣೆ ಮಾಡಿದ್ದು, ಉಳುಮೆದಾರರಿಗೇ ಜಮೀನು ಕೊಡಲಾಗುವುದು’ ಎಂದು ತಿಳಿಸಿದರು.

‘ಬೆಂಗಳೂರಿನಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವ 10 ಸಾವಿರ ಪ್ರಕರಣಗಳಲ್ಲಿ ಅವರ ಹೆಸರಿಗೇ (94 ಸಿ) ಹಕ್ಕುಪತ್ರ ಕೊಡಲಾಗುವುದು. ಅದನ್ನು ರಾಜ್ಯದಾದ್ಯಂತ ಜಾರಿಗೊಳಿಸಲಾಗುವುದು‘ ಎಂದು ತಿಳಿಸಿದರು.

‘ಕೋಳಿ ಸಾಕಣೆಯನ್ನೂ ಕೃಷಿ ವ್ಯಾಪ್ತಿಗೆ ತಂದಿರುವುದರಿಂದ ಕೋಳಿ ಫಾರಂ ನಿರ್ಮಿಸಲು ಭೂಪರಿವರ್ತನೆಗೆ ಅಲೆದಾಟದ ಅಗತ್ಯವಿಲ್ಲ. ಅರ್ಜಿದಾರರ ಹೆಸರಿಗೆ ಖಾತೆ ನೋಂದಣಿ ಪ್ರಕ್ರಿಯೆಯ ಅವಧಿಯನ್ನು 7 ದಿನಕ್ಕೆ ಇಳಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT