ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಬುದ್ಧಾ ಕೊಲೆ ಪ್ರಕರಣ: ತನಿಖೆ ಸಿಐಡಿ ಹೆಗಲಿಗೆ

Published 24 ಜೂನ್ 2024, 15:54 IST
Last Updated 24 ಜೂನ್ 2024, 15:54 IST
ಅಕ್ಷರ ಗಾತ್ರ

ಬೆಂಗಳೂರು: ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಆರ್. ಪ್ರಬುದ್ಧಾ (20) ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಕೆ.ಆರ್.ಸೌಮ್ಯಾ ಅವರು ತಮ್ಮ ಮಗಳ ಸಾವಿನ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲು ಕೋರಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.

‘ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸ್ಥಳೀಯ ಪೊಲೀಸರ ನಡೆ ಸಂಶಯಾಸ್ಪದವಾಗಿದೆ. ಮೇ 15ರಂದು ಕೊಲೆ ನಡೆದಾಗ ಅದನ್ನು ಆತ್ಮಹತ್ಯೆ ಎಂದು ಬಿಂಬಿಸುವ ಕೆಲಸ ಮಾಡಿದ್ದರು. ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾದ ನಂತರ ವರಸೆ ಬದಲಿಸಿದರು. ನಂತರವೂ ಸರಿಯಾಗಿ ತನಿಖೆ ನಡೆಸದೇ ಆರೋಪಿಯನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಆರೋಪಿಯ ತಂದೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲೇ ಮದ್ಯದಂಗಡಿ ನಡೆಸುತ್ತಿದ್ದಾರೆ. ಅವರ ಜತೆ ಸ್ಥಳೀಯ ಪೊಲೀಸರಿಗೆ ಸಂರ್ಪಕವಿದೆ. ಕೊಲೆ ಸಾಕ್ಷ್ಯಗಳನ್ನು ಸರಿಯಾಗಿ ಸಂಗ್ರಹಿಸಲಿಲ್ಲ, ವಿಚಾರಣೆ ನಡೆಸಲಿಲ್ಲ. ಸರ್ಕಾರಿ ವಕೀಲರಿಗೆ ಸೂಕ್ತ ಮಾಹಿತಿ ನೀಡಲಿಲ್ಲ. ಇದರಿಂದ ಆರೋಪಿ 10 ದಿನಗಳಲ್ಲೇ ಜಾಮೀನು ಪಡೆಯಲು ಸಹಕಾರಿಯಾಯಿತು. ಈಗ ನನಗೂ ಜೀವ ಬೆದರಿಕೆ ಇದೆ. ಹಾಗಾಗಿ, ಸಿಐಡಿಗೆ ವಹಿಸಬೇಕು’ ಎಂದು ಮನವಿ ಮಾಡಿದ್ದರು.

ಘಟನೆ ಹಿನ್ನೆಲೆ: ಪದ್ಮನಾಭನಗರ ಬಳಿಯ ಬೃಂದಾವನ ಲೇಔಟ್‌ನ ಮನೆಯೊಂದರಲ್ಲಿ ಮೇ 15ರಂದು ಪ್ರಬುದ್ಧಾ ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಪ್ರಬುದ್ಧಾ ಅವರದ್ದು ಆತ್ಮಹತ್ಯೆ ಎಂಬುದಾಗಿ ಆರಂಭದಲ್ಲಿ ಬಿಂಬಿಸಲಾಗಿತ್ತು. ಸಾವಿನ ಬಗ್ಗೆ ಪೊಲೀಸರಿಗೂ ಆರಂಭದಲ್ಲಿ ಸುಳಿವು ಸಿಕ್ಕಿರಲಿಲ್ಲ. ಆರೋಪಿ, ಪೊಲೀಸರ ದಿಕ್ಕು ತಪ್ಪಿಸುವ ರೀತಿಯಲ್ಲಿ ವ್ಯವಸ್ಥಿತ ಸಂಚು ರೂಪಿಸಿ ಕೃತ್ಯ ಎಸಗಿದ್ದ.

ಕೈ ಹಾಗೂ ಕತ್ತಿನ ಭಾಗದಲ್ಲಿ ಗಾಯವಿದ್ದಿದ್ದರಿಂದ ಇದೊಂದು ಕೊಲೆ ಎಂಬುದಾಗಿ ತಾಯಿ ದೂರು ನೀಡಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಹಲವು ಪುರಾವೆಗಳನ್ನು ಆಧರಿಸಿ ಬಾಲಕನ್ನು ವಶಕ್ಕೆ ಪಡೆದಿದ್ದರು. ₹ 2 ಸಾವಿರ ವಾಪಸು ಕೇಳಿದ್ದಕ್ಕಾಗಿ 14 ವರ್ಷ ವಯಸ್ಸಿನ ಬಾಲಕ ಈ ಕೃತ್ಯ ಎಸಗಿದ್ದ ಎನ್ನುವುದು ಬಯಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT