ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ, ಬ್ಯಾಕ್‌ಲಾಗ್‌ ಹುದ್ದೆ: ನ್ಯಾಯ ಒದಗಿಸುವ ಭರವಸೆ

Published 25 ಜನವರಿ 2024, 16:30 IST
Last Updated 25 ಜನವರಿ 2024, 16:30 IST
ಅಕ್ಷರ ಗಾತ್ರ

ಬೆಂಗಳೂರು: ಬಡ್ತಿ ಮೀಸಲಾತಿಯ ಗೊಂದಲ ಪರಿಹರಿಸಲು ರಾಜ್ಯ ಸರ್ಕಾರ ‘ಜ್ಯೇಷ್ಠತೆ ಸಂರಕ್ಷಣಾ ಕಾಯ್ದೆ–2017’ ರೂಪಿಸಿದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂದು ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಎದುರು ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘ ಅಳಲು ತೋಡಿಕೊಂಡಿದೆ.

ಸಮಿತಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಗೆ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ ನೇತೃತ್ವದಲ್ಲಿ ಸಂಘದ ನಿಯೋಗ ದಾಖಲೆಗಳ ಸಹಿತ ಮನವಿ ಸಲ್ಲಿಸಿ‌, ‘ಎಸ್‌ಸಿ ಮೀಸಲಾತಿ ಪ್ರಮಾಣ ಶೇ 15ರಿಂದ 17ಕ್ಕೆ. ಎಸ್‌ಟಿ ಮೀಸಲಾತಿ ಪ್ರಮಾಣ ಶೇ 3ರಿಂದ 7ರಷ್ಟು ಹೆಚ್ಚಿಸಿದರೂ ನೌಕರರಿಗೆ ಫಲ ಸಿಗುತ್ತಿಲ್ಲ. ಬ್ಯಾಕ್‌ಲಾಗ್‌ ಹುದ್ದೆಗಳ ಬಗ್ಗೆ ನ. 28ರಂದು ಹೊರಡಿಸಿರುವ ಆದೇಶದಿಂದ ಅನ್ಯಾಯ ಆಗುತ್ತಿದೆ’ ಎಂದು ದೂರಿದೆ.

‘ಮೀಸಲಾತಿಯನ್ನು ವಂಚಿಸಲು ಬಳಸಿಕೊಳ್ಳುತ್ತಿರುವ 1999ರ ಫೆ. 3 ಮತ್ತು ಏಪ್ರಿಲ್‌ 13ರಂದು ಆದೇಶಗಳನ್ನು ಅಡ್ವೊಕೇಟ್ ಜನರಲ್ ಅವರು ನೀಡಿದ್ದ ಅಭಿಪ್ರಾಯದಂತೆ ತಕ್ಷಣ ಹಿಂಪಡೆಯಬೇಕು, ಹೆಚ್ಚಳಗೊಳಿಸಿದ ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ರೋಸ್ಟರ್‌ ಕಡ್ಡಾಯವಾಗಿ ಪಾಲಿಸಬೇಕು, ಬ್ಯಾಕ್‌ ಲಾಗ್‌ ಹುದ್ದೆಗಳನ್ನು ತುಂಬುವಾಗ ‌2015ರ ಮಾರ್ಚ್‌ 4ರ ಆದೇಶವನ್ನು ಪಾಲಿಸಬೇಕು, 100 ರೋಸ್ಟರ್ ಬಿಂದುಗಳ ಆದೇಶದ ನಂತರ ಬ್ಯಾಕ್‌ಲಾಗ್‌ ಹುದ್ದೆಗಳನ್ನು ತುಂಬಲು 2023ರ ನ. 28ರಂದು ಹೊರಡಿಸಿರುವ ಹೊಸ ಆದೇಶವನ್ನು ತಕ್ಷಣದಿಂದ ಹಿಂಪಡೆದು, ಹೊಸ ಆದೇಶ ಹೊರಡಿಸಬೇಕು‌’ ಎಂದು ಸಂಘ ಮನವಿ ಸಲ್ಲಿಸಿದೆ.

‘ಜ್ಯೇಷ್ಠತೆ ಸಂರಕ್ಷಣಾ ಕಾಯ್ದೆ– 2017ನ್ನು ಯಥಾವತ್‌ ಪಾಲಿಸಬೇಕು, ಮೀಸಲಾತಿ ಬಗ್ಗೆ ಗೊಂದಲವಾಗುವ ರೀತಿಯಲ್ಲಿ ಅಭಿಪ್ರಾಯ ನೀಡುವ ಸುತ್ತೋಲೆ ಹೊರಡಿಸುವ ಡಿಪಿಎಆರ್‌ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಬೇಕು, ನಿವೃತ್ತಿಯ ಬಳಿಕವೂ ಡಿಪಿಎಆರ್‌ನಲ್ಲಿ ಸಮಾಲೋಚಕರಾಗಿರುವ ದೇವರಾಜು, ಅಬ್ದುಲ್‌ ಖಾದರ್‌ ಮತ್ತು ರಾಮನಾಥನ್ ಅವರನ್ನು ಮುಖ್ಯಮಂತ್ರಿ ನೀಡಿದ ಸೂಚನೆಯಂತೆ ಕರ್ತವ್ಯದಿಂದ ಕೂಡಲೇ ಬಿಡುಗಡೆ ಮಾಡಬೇಕು’ ಎಂದೂ ಆಗ್ರಹಿಸಿದೆ.

‘ನಮ್ಮ ಮನವಿಯನ್ನು ಆಲಿಸಿದ ಕಲ್ಯಾಣ ಸಮಿತಿಯು ಸಕರಾತ್ಮಕವಾಗಿ ಸ್ಪಂದಿಸಿದೆ. ಸಂಬಂಧಿಸಿದ ಇಲಾಖೆಗಳಿಗೆ ಡಿಪಿಎಆರ್‌ ಮೂಲಕ ನಿರ್ದೇಶನಗಳನ್ನು ನೀಡಲಾಗುವುದೆಂದು ಭರವಸೆ ನೀಡಿದೆ’ ಎಂದು ಚಂದ್ರಶೇಖರಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT