ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಜ ಹಟ್ಟಿಹೊಳಿ ಆಪ್ತರಿಂದ ಚೂರಿಯಿಂದ ಹಲ್ಲೆ ಪ್ರಕರಣ: ಬಿಜೆಪಿ ಧರಣಿ

ಆರೋಪಿಗಳ ಮೇಲೆ ಕೊಲೆ ಯತ್ನ ಮೊಕದ್ದಮೆ ಹೂಡಲು ಆಗ್ರಹ
Published 6 ಡಿಸೆಂಬರ್ 2023, 16:48 IST
Last Updated 6 ಡಿಸೆಂಬರ್ 2023, 16:48 IST
ಅಕ್ಷರ ಗಾತ್ರ

ವಿಧಾನಸಭೆ: ಬೆಳಗಾವಿಯ ಬಿಜೆಪಿ ಮುಖಂಡ ಪೃಥ್ವಿಸಿಂಗ್‌ ಅವರ ಮೇಲೆ ವಿಧಾನಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಆಪ್ತರು ಚೂರಿಯಿಂದ ಹಲ್ಲೆ ನಡೆಸಿದರೆನ್ನಲಾದ ಪ್ರಕರಣದ ಪ್ರಸ್ತಾಪ ವಿಧಾನಸಭೆಯಲ್ಲಿ ಕಾವೇರಿದ ವಾತಾವರಣಕ್ಕೆ ಸಾಕ್ಷಿಯಾಯಿತು.

ಅಲ್ಲದೆ, ಬಿಜೆಪಿ ಸದಸ್ಯರ ಧರಣಿಯಿಂದ ಕಲಾಪ ಎರಡು ಬಾರಿ ಮುಂದೂಡಿಕೆಯಾಯಿತು. ಅಂತಿಮವಾಗಿ ಸಭಾಧ್ಯಕ್ಷರ ಕೊಠಡಿಯಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ಮೂಲಕ ಧರಣಿಗೆ ತೆರೆ ಎಳೆಯಲಾಯಿತು.

ಬಿಜೆಪಿ ಬಿ.ವೈ.ವಿಜಯೇಂದ್ರ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ‘ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರ ಸಹೋದರ ಹಟ್ಟಿಹೊಳಿಯ ಆಪ್ತರು ಹಲ್ಲೆ ನಡೆಸಿದ್ದಾರೆ. ಈ ಘಟನೆ ನಡೆದು ಎರಡು ದಿನ ಕಳೆದರೂ ಚೂರಿಯಿಂದ ಇರಿದವರ ಮೇಲೆ ಎಫ್‌ಐಆರ್‌ ದಾಖಲಿಸಿರಲಿಲ್ಲ. ನಮ್ಮ ಒತ್ತಾಯ ಹೆಚ್ಚಾದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಈವರೆಗೂ ಆರೋಪಿಗಳ ಮೇಲೆ ಕೊಲೆ ಯತ್ನದ ಮೊಕದ್ದಮೆ ಹೂಡಿಲ್ಲ’ ಎಂದು ಆರೋಪಿಸಿದರು.

‘ಗೃಹ ಸಚಿವರು ಸದನದಲ್ಲಿ ಇಲ್ಲ. ಅವರು ಬಂದ ಮೇಲೆ ಉತ್ತರ ಕೊಡಿಸುತ್ತೇನೆ’ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರ ಮಾತಿನಿಂದ ಸಮಾಧಾನಗೊಳ್ಳದ ವಿಜಯೇಂದ್ರ ಧರಣಿಗೆ ಮುಂದಾದರು. ಬಿಜೆಪಿಯ ಎಲ್ಲ ಸದಸ್ಯರೂ ಅವರನ್ನು ಹಿಂಬಾಲಿಸಿದರು. ಸಭಾಧ್ಯಕ್ಷರ ಪೀಠದ ಮುಂದಿನ ಸ್ಥಳದಲ್ಲಿ ನಿಂತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ, ‘ಗೃಹ ಸಚಿವರು ಉತ್ತರ ಕೊಡುತ್ತಾರೆ. ಬಿಜೆಪಿ ಸದಸ್ಯರು ನಿಯಮ ಮೀರಿ ವರ್ತಿಸುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡಬಾರದು. ನಾವು ಉತ್ತರ ಕೊಡದೇ ತಪ್ಪಿಸಿಕೊಂಡು ಹೋಗುವುದಿಲ್ಲ’ ಎಂದು ಹೇಳಿದರು. ಇದಕ್ಕೂ ಬಿಜೆಪಿ ಸದಸ್ಯರು ಮಣಿಯದಿದ್ದಾಗ ಸಭಾಧ್ಯಕ್ಷರು, ಇದೇ ವರ್ತನೆ ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಕಲಾಪವನ್ನು ಮುಂದೂಡಿದರು. ಬಿಜೆಪಿ ನಾಯಕರನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಮಾತುಕತೆ ನಡೆಸಿ ಧರಣಿಗೆ ತೆರೆ ಎಳೆಯಲು ಮನವೊಲಿಸುವಲ್ಲಿ ಯಶಸ್ವಿಯಾದರು.

ಪಿಎಸ್‌ಐ ಅಮಾನತ್ತಿಗೆ ಒತ್ತಾಯ

ಬೆಳಗಾವಿ ಪಾಲಿಕೆ ಸದಸ್ಯ ಅಭಿಜಿತ್‌ ಜವಳೇಕರ್ ಅವರ ಮೇಲೆ ಟಿಳಕವಾಡಿ ಪೊಲೀಸರು ದೌರ್ಜನ್ಯ ನಡೆಸಿದ್ದು, ಕಿರುಕುಳ ನೀಡಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಬಿಜೆಪಿಯ ಅಭಯಪಾಟೀಲ ಶೂನ್ಯವೇಳೆಯಲ್ಲಿ ಒತ್ತಾಯಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಈಗ ‘ಗೂಂಡಾರಾಜ್ಯ’ ಆರಂಭವಾಗಿದೆ. ಎಲ್ಲೆಂದರಲ್ಲಿ ಹಲ್ಲೆಗಳು ನಡೆಯುತ್ತಿವೆ. ಬಿಹಾರದ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಬಿಜೆಪಿ ಬಸನಗೌಡ ಯತ್ನಾಳ ಹೇಳಿದಾಗ, ಕಾಂಗ್ರೆಸ್‌ನ ಆಸೀಫ್‌ ಸೇಟ್ ಅವರು ಆಕ್ಷೇಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT