ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಸಭಾ ಚುನಾವಣೆ: ಮೈತ್ರಿ ಕೂಟದಿಂದ ಐದನೇ ಅಭ್ಯರ್ಥಿ?

ಕುಪೇಂದ್ರ ರೆಡ್ಡಿ ಕಣಕ್ಕಿಳಿಸುವ ತಯಾರಿ
Published 2 ಫೆಬ್ರುವರಿ 2024, 22:38 IST
Last Updated 2 ಫೆಬ್ರುವರಿ 2024, 22:38 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ 27ರಂದು ನಡೆಯುವ ಚುನಾವಣೆಯಲ್ಲಿ ಐದನೇ ಅಭ್ಯರ್ಥಿಯಾಗಿ ಜೆಡಿಎಸ್‌ನ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕೆ ಇಳಿಸಲು ಬಿಜೆಪಿ– ಜೆಡಿಎಸ್‌ ಚಿಂತನೆ ನಡೆಸಿವೆ. ಇದರಿಂದ ಚುನಾವಣೆ ರಂಗೇರುವ ಸಾಧ್ಯತೆ ಇದೆ.

ಈಗಿರುವ ವಿವಿಧ ಪಕ್ಷಗಳ ಬಲಾಬಲದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮೂರು ಸ್ಥಾನಗಳು ಮತ್ತು ಬಿಜೆಪಿ ಒಂದು ಸ್ಥಾನವನ್ನು ಅನಾಯಾಸವಾಗಿ ಗೆದ್ದುಕೊಳ್ಳಲು ಸಾಧ್ಯವಿದೆ. ಆಡಳಿತಾರೂಢ ಕಾಂಗ್ರೆಸ್‌ಗೆ ಸಡ್ಡು ಹೊಡೆಯಲು ತೀರ್ಮಾನಿಸಿರುವ ಮಿತ್ರಪಕ್ಷಗಳು ಐದನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ತಯಾರಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿರೋಧಪಕ್ಷದ ನಾಯಕ ಆರ್‌.ಅಶೋಕ ಅವರು ಜೆಡಿಎಸ್ ರಾಜ್ಯಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆ ಮಾತುಕತೆ ನಡೆಸಿದ್ದು, ಒಮ್ಮತದ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕೆ ಇಳಿಸಲು ಎರಡೂ ಪಕ್ಷಗಳ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕೂ ಮೊದಲು ವಿ.ಸೋಮಣ್ಣ ಅವರನ್ನು ಕಣಕ್ಕೆ ಇಳಿಸುವ ಚಿಂತನೆ ನಡೆದಿತ್ತು. ಕಾಂಗ್ರೆಸ್‌ನ ಕೆಲವು ಲಿಂಗಾಯತ ಶಾಸಕರು ಅಡ್ಡಮತದಾನ ಮಾಡಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ, ಸೋಮಣ್ಣ ಅವರು ಆಸಕ್ತಿ ತೋರಿಸಲಿಲ್ಲ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ 135 ಶಾಸಕರ ಬಲವನ್ನು ಹೊಂದಿದೆ. ಬಿಜೆಪಿ 66, ಜೆಡಿಎಸ್‌ 19, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ, ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಮತ್ತು ಪಕ್ಷೇತರರಾದ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್‌ ಮತ್ತು ಗೌರಿಬಿದನೂರು ಶಾಸಕ ಕೆ.ಪಿ.ಪುಟ್ಟಸ್ವಾಮಿ ಇದ್ದಾರೆ. ದರ್ಶನ್, ಲತಾ, ಪುಟ್ಟಸ್ವಾಮಿ ಕಾಂಗ್ರೆಸ್ ಜತೆ ಗುರುತಿಸಿಕೊಂಡವರು. ಜನಾರ್ದನ ರೆಡ್ಡಿ ಸಹ ಆರಂಭದಲ್ಲಿ ಕಾಂಗ್ರೆಸ್ ಜತೆಗಿರುವುದಾಗಿ ಹೇಳಿದ್ದರು. ಇತ್ತೀಚೆಗೆ, ಬಿಜೆಪಿ ಕಡೆ ಒಲವು ತೋರಿದ್ದಾರೆ.

ಒಬ್ಬ ಅಭ್ಯರ್ಥಿಯ ಗೆಲುವಿಗೆ 45 ಮತಗಳು ಬೇಕಾಗುತ್ತವೆ. ಮೈತ್ರಿಕೂಟದ ಅಭ್ಯರ್ಥಿ ಬಿಜೆಪಿಯ 21 ಹೆಚ್ಚುವರಿ ಮತಗಳು, ಜೆಡಿಎಸ್‌ನ 19, ಪಕ್ಷೇತರ 2 ಮತ್ತು ಕೆಆರ್‌ಪಿಪಿ, ಸರ್ವೋದಯ ಕರ್ನಾಟಕದ ತಲಾ ಒಂದು ಮತಗಳನ್ನು ಪಡೆಯಲು ಸಾಧ್ಯವಾದರೆ 44 ಮತಗಳನ್ನು ಪಡೆಯಬಹುದು. ಅಲ್ಲದೇ, ಕಾಂಗ್ರೆಸ್‌ನಲ್ಲಿರುವ ಅಸಮಾಧಾನಿತರಿಗೆ ಗಾಳ ಹಾಕಿ ಇನ್ನೂ ಎರಡು ಅಥವಾ ಮೂರು ಶಾಸಕರಿಂದ ಅಡ್ಡ ಮತದಾನ ಮಾಡಿಸಿದರೆ ಗೆಲುವು ಸಾಧ್ಯ ಎಂಬ ಲೆಕ್ಕಾಚಾರ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT