ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಡಿಪಿಆರ್ ಕಡತ ನಾಪತ್ತೆ: ಪಿಡಿಒ ವಿರುದ್ಧ ಎಫ್‌ಐಆರ್

ಅನುಕಂಪದ ಸರ್ಕಾರಿ ನೌಕರಿಗೆ ಸಂಬಂಧಪಟ್ಟ ದಾಖಲೆ
Published 24 ಏಪ್ರಿಲ್ 2024, 16:09 IST
Last Updated 24 ಏಪ್ರಿಲ್ 2024, 16:09 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (ಆರ್‌ಡಿಪಿಆರ್) ಪ್ರಧಾನ ಕಚೇರಿಯಲ್ಲಿದ್ದ ಕೆಲ ಕಡತಗಳು ನಾಪತ್ತೆಯಾಗಿದ್ದು, ಈ ಸಂಬಂಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ದಿನೇಶ್‌ಕುಮಾರ್ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಇಲಾಖೆಯ ಅಧೀನ ಕಾರ್ಯದರ್ಶಿ ಬಿ. ನವೀನ್‌ಕುಮಾರ್ ಅವರು ಕಡತ ನಾಪತ್ತೆ ಬಗ್ಗೆ ದೂರು ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಭಾರತೀಪುರ ಕ್ರಾಸ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿನೇಶ್‌ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವಿಧಾನಸೌಧ ಬಳಿಯ ಬಹುಮಹಡಿ ಕಟ್ಟಡದಲ್ಲಿ ಆರ್‌ಡಿಪಿಆರ್ ಪ್ರಧಾನ ಕಚೇರಿ ಇದೆ. 2018ರಲ್ಲಿ ಇಲಾಖೆಯ ಕೆಲ ನೌಕರರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಕಾರಣಕ್ಕಾಗಿ ಅನುಕಂಪದ ಸರ್ಕಾರಿ ಹುದ್ದೆ ನೀಡಲಾಗುತ್ತಿತ್ತು. ಇದಕ್ಕೆ ಸಂಬಂಧಪಟ್ಟಂತೆ ಎರಡು ಪ್ರತ್ಯೇಕ ಕಡತಗಳನ್ನು ಸೃಷ್ಟಿಸಲಾಗಿತ್ತು. ಇದೇ ಕಡತಗಳು ಇದೀಗ ಭೌತಿಕವಾಗಿ ಲಭ್ಯವಿಲ್ಲ. ಎಲ್ಲಿಯೋ ನಾಪತ್ತೆಯಾಗಿರುವುದಾಗಿ ದೂರುದಾರರು ಆರೋಪಿಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘2018ರ ಮೇ 31ರಿಂದ 2024ರ ಏಪ್ರಿಲ್ 7ರವರೆಗಿನ ಅವಧಿಯಲ್ಲಿ ಕಡತಗಳು ನಾಪತ್ತೆಯಾಗಿವೆ. ಈ ಅವಧಿಯಲ್ಲಿ ಇಲಾಖೆಯ ನಿರ್ದೇಶಕರ ಆಪ್ತ ಸಹಾಯಕ ಕಚೇರಿಯಲ್ಲಿ ಆರೋಪಿ ದಿನೇಶ್‌ಕುಮಾರ್ ಕೆಲಸ ಮಾಡುತ್ತಿದ್ದರು. ಜೊತೆಗೆ, ಕಡತಗಳನ್ನು ಇದೇ ಶಾಖೆಯಲ್ಲಿ ಸ್ವೀಕರಿಸಿದ್ದ ಬಗ್ಗೆ ದಾಖಲೆಗಳಿವೆ’ ಎಂದು ಮೂಲಗಳು ಹೇಳಿವೆ.

‘ಕಡತಗಳಿಗಾಗಿ ಹಲವು ದಿನ ಶೋಧಿಸಲಾಗಿತ್ತು. ಆದರೆ, ಕಡತಗಳು ಲಭ್ಯವಾಗಿರಲಿಲ್ಲ. ಈ ಬಗ್ಗೆ ಕಾರಣ ಕೇಳಿ ದಿನೇಶ್‌ಕುಮಾರ್‌ಗೆ ನೋಟಿಸ್ ನೀಡಲಾಗಿತ್ತು. ಇದಕ್ಕೆ ಅವರು ಯಾವುದೇ ಉತ್ತರ ನೀಡಿಲ್ಲ. ಕಡತಗಳ ನಾಪತ್ತೆ ಹಿಂದೆ ಹಲವರ ಕೈವಾಡವಿರುವ ಶಂಕೆ ಇದೆ. ಹೀಗಾಗಿ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸಾರ್ವಜನಿಕ ಸೇವಕರಿಂದ ನಂಬಿಕೆಯ ಉಲ್ಲಂಘನೆ (ಐಪಿಸಿ 409) ಆರೋಪದಡಿ ದಿನೇಶ್‌ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ಪುರಾವೆಗಳನ್ನು ಸಂಗ್ರಹಿಸಿ, ಆರೋಪಿಯನ್ನು ವಿಚಾರಣೆ ನಡೆಸಲಾಗುವುದು’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT