ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಸಹಚರರಿಗೆ ಜೈಲು

ದರ್ಶನ್‌ ವಿಚಾರಣಾಧೀನ ಕೈದಿ 6106 * ಆರೋಪಿಗಳ ಮಧ್ಯೆ ಗಲಾಟೆ ಸಾಧ್ಯತೆ–ಪೊಲೀಸರ ಸಂಶಯ
Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾದ ಆರೋಪಿ, ನಟ ದರ್ಶನ್‌ ಸೇರಿ ನಾಲ್ವರು ಆರೋಪಿಗಳನ್ನು ಬಂದೋಬಸ್ತ್‌ನಲ್ಲಿ ಕರೆದೊಯ್ದ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಶನಿವಾರ ಒಪ್ಪಿಸಿದರು.

ಆರೋಪಿಗಳು ಕಾರಾಗೃಹ ತಲುಪುತ್ತಿದ್ದಂತೆ ಜೈಲಿನ ಅಧಿಕಾರಿಗಳು, ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಿ ನಾಲ್ವರನ್ನು ಪ್ರತ್ಯೇಕ ಬ್ಯಾರಕ್‌ಗೆ ಕಳುಹಿಸಿದರು ಎಂದು ಗೊತ್ತಾಗಿದೆ.

ನಂತರ ಎ–2 ದರ್ಶನ್‌ಗೆ ವಿಚಾರಣಾಧೀನ ಕೈದಿ ಸಂಖ್ಯೆ 6,106, ಎ–9 ಧನರಾಜ್‌ ಅಲಿಯಾಸ್‌ ರಾಜುಗೆ 6,107, ಎ–10 ವಿನಯ್‌ಗೆ 6,108 ಹಾಗೂ ಎ–14 ಪ್ರದೋಷ್‌ಗೆ 6,108 ಸಂಖ್ಯೆ ನೀಡಲಾಗಿದೆ. 

2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದ ದರ್ಶನ್, ಇದೀಗ ಕೊಲೆ ಆರೋಪದಡಿ ಮತ್ತೆ ಕಾರಾಗೃಹ ಸೇರಿದರು. ಕೊಲೆ ಪ್ರಕರಣದ ಆರೋಪದಡಿ ದರ್ಶನ್‌ ಅವರನ್ನು ಜೂನ್‌ 12ರಂದು ಮೈಸೂರಿನಲ್ಲಿ ಬಂಧಿಸಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.   

ನ್ಯಾಯಾಲಯಕ್ಕೆ ಹಾಜರು ಪಡಿಸಲು ಆರೋಪಿಗಳನ್ನು ಕರೆತಂದಾಗ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ‘ಡಿ ಬಾಸ್‌’ ಎಂದೂ ಕೆಲವರು ಕೂಗಿದರು. ಕಾರಾಗೃಹಕ್ಕೆ ಹೋಗುವ ಮುನ್ನ ದರ್ಶನ್‌ ಸಹ ಪೊಲೀಸ್‌ ವ್ಯಾನ್‌ ಒಳಗೇ ಕುಳಿತು ಕೈಬೀಸಿ ಮೌನಕ್ಕೆ ಜಾರಿದರು.  

ತುಮಕೂರು ಜೈಲಿಗೆ ಸ್ಥಳಾಂತರಿಸಲು ಕೋರಿಕೆ: ಪ್ರಕರಣದ ಆರೋಪಿಗಳು ಹಾಗೂ ದರ್ಶನ್‌ ಮೇಲೆ ಅಭಿಮಾನ ಇರುವ ವಿಚಾರಣಾಧೀನ ಕೈದಿಗಳ ನಡುವೆ ಜೈಲಿನಲ್ಲಿ ಗಲಾಟೆ ಹಾಗೂ ಹಲ್ಲೆ ನಡೆಯುವ ಸಾಧ್ಯತೆಯಿದೆ. ಆರೋಪಿಗಳನ್ನು ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲು ತನಿಖಾಧಿಕಾರಿಗಳು ಕೋರಿದ್ದರು. ಆ ಮನವಿಗೆ ನ್ಯಾಯಾಲಯದಿಂದ ಪುರಸ್ಕಾರ ಸಿಗಲಿಲ್ಲ.

‘ಆರೋಪಿಗಳು ಪರಸ್ಪರ ಹೇಳಿಕೆ ನೀಡಿದ್ದಾರೆ. ಇದರ ಮಾಹಿತಿ ತಿಳಿದುಕೊಂಡು ಸಹ ಆರೋಪಿಗಳು ಹಲ್ಲೆ ನಡೆಸುವ ಸಾಧ್ಯತೆಯಿದೆ. ಕೊಲೆ ಪ್ರಕರಣ ಮುಚ್ಚಿ ಹಾಕಲು ಶರಣಾಗಲು ಮನವೊಲಿಸಿ ನಾಲ್ವರಿಗೆ ತಲಾ ₹5 ಲಕ್ಷ ನೀಡಲಾಗಿತ್ತು. ಶರಣಾದ ಆರೋಪಿಗಳು ಇತರರ ಹೆಸರು ಬಹಿರಂಗ ಪಡಿಸಿದ್ದರು. ಇದರಿಂದ ಕೊಲೆ ರಹಸ್ಯ ಬಯಲಾಗಿತ್ತು. ಹೀಗಾಗಿ, ಬೇರೆ ಜೈಲಿಗೆ ಕಳುಹಿಸುವಂತೆ ಕೋರಲಾಗಿತ್ತು’ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.

‘‌ಇತರೆ ಕೈದಿಗಳಂತೆಯೇ ಈ ಪ್ರಕರಣದ ಕೈದಿಗಳನ್ನೂ ನೋಡಿಕೊಳ್ಳಲಾಗುವುದು. ಇವರಿಗೆ ವಿಶೇಷ ಸತ್ಕಾರ, ಸೌಲಭ್ಯ ನೀಡುತ್ತಿಲ್ಲ. ಸಹ ಆರೋಪಿಗಳ ನಡುವೆಯೇ ಗಲಾಟೆ ನಡೆಯುವ ಸಾಧ್ಯತೆಯಿದೆ ಎಂಬ ಮಾಹಿತಿಯಿದ್ದು, ಪ್ರತ್ಯೇಕ ಬ್ಯಾರಕ್‌ಗೆ ಹಾಕಲಾಗಿದೆ’ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.

ಶನಿವಾರ ಸಂಜೆ ವೇಳೆಗೆ ಕೇಂದ್ರ ಕಾರಾಗೃಹಕ್ಕೆ ದರ್ಶನ್ ಮತ್ತು ತಂಡವನ್ನು ಕರೆತರುವ ಮಾಹಿತಿ ತಿಳಿದಿದ್ದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಿದ್ದರು. ಬ್ಯಾರಿಕೇಡ್ ಹಾಕಿ ಹೆಚ್ಚಿನ ಜನರು ಸೇರದಂತೆ ನಿಗಾ ವಹಿಸಿದ್ದರು.

ಪ್ರಕರಣದಲ್ಲಿ ಸಾಕ್ಷಿದಾರರಿಗೆ ದರ್ಶನ್‌ ಸಹಚರರು ಬೆದರಿಕೆ ಹಾಕಿದ್ದು, ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ‘ಬೆದರಿಕೆ ಹಾಕಿದವರನ್ನು ಪತ್ತೆ ಮಾಡಲಾಗುತ್ತಿದೆ. ಅಗತ್ಯಬಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ. 

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಆರೋಪಿ ದರ್ಶನ್‌ ಅವರನ್ನು ಕರೆದೊಯ್ದಾಗ ಅಭಿಮಾನಿಗಳು ಕೈಬೀಸಿದರು.  ಪ್ರಜಾವಾಣಿ ಚಿತ್ರ/ ರಂಜು ಪಿ. 
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಆರೋಪಿ ದರ್ಶನ್‌ ಅವರನ್ನು ಕರೆದೊಯ್ದಾಗ ಅಭಿಮಾನಿಗಳು ಕೈಬೀಸಿದರು.  ಪ್ರಜಾವಾಣಿ ಚಿತ್ರ/ ರಂಜು ಪಿ. 

₹40 ಲಕ್ಷ ನೀಡಿದ್ದು ಶಾಸಕರ ಸಂಬಂಧಿ

ದರ್ಶನ್‌ಗೆ ₹40 ಲಕ್ಷ ಸಾಲ ನೀಡಿದ್ದ ಮೋಹನ್‌ರಾಜ್‌ ಅವರು ಬೆಂಗಳೂರು ನಗರದ ಬಿಜೆಪಿಯ ಪ್ರಭಾವಿ ಶಾಸಕರೊಬ್ಬರ ಹತ್ತಿರದ ಸಂಬಂಧಿ ಎಂದು ಗೊತ್ತಾಗಿದೆ. ‘ದರ್ಶನ್‌ ಆಪ್ತ ಹಾಗೂ ಪಾಲಿಕೆ ಮಾಜಿ ಸದಸ್ಯರೂ ಆಗಿರುವ ಮೋಹನ್‌ರಾಜ್‌ ಒಂದು ವಾರದಿಂದ ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು. 

ಸಾಕ್ಷಿದಾರರ ಜೀವಕ್ಕೆ ಅಪಾಯ

‘ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷಿದಾರರ ಹೇಳಿಕೆ ಪಡೆದುಕೊಳ್ಳಲಾಗಿದೆ. ಸಾಕ್ಷಿದಾರರ ಹೆಸರನ್ನು ನಮೂದಿಸಿದರೆ ಅವರ ಜೀವಕ್ಕೆ ಅಪಾಯ ಸಾಧ್ಯತೆಯಿದೆ. ಸಾಕ್ಷಿದಾರರ ಹೆಸರನ್ನು ರಿಮಾಂಡ್‌ ಅರ್ಜಿಯಲ್ಲಿ ನಮೂದಿಸಿಲ್ಲ’ ಎಂದು ತನಿಖಾಧಿಕಾರಿ ತಿಳಿಸಿದರು.

‘ಎಲ್ಲ ಆರೋಪಿಗಳು ‘ವೆಬ್‌ ಆ್ಯಪ್’ ಬಳಸಿರುವುದು ತನಿಖೆಯಿಂದ ದೃಢಪಟ್ಟಿದೆ. ದತ್ತಾಂಶ ನಾಶಪಡಿಸಿದ್ದಾರೆ. ಆರೋಪಿಗಳ ಹೆಸರಿನಲ್ಲೇ ಮತ್ತೆ ಸಿಮ್‌ ಕಾರ್ಡ್‌ ಖರೀದಿಸಿ ಮಾಹಿತಿ ಕಲೆ ಹಾಕಲು ಕೋರ್ಟ್‌ಗೆ ಕೋರಲಾಗಿದೆ. ಕೊಲೆಯಾದ ವ್ಯಕ್ತಿಯ ಮೊಬೈಲ್‌ ಸಹ ಸುಮನಹಳ್ಳಿ ರಾಜಕಾಲುವೆಗೆ ಎಸೆದಿದ್ದು ಅದೇ ಸಂಖ್ಯೆಯ ಹೊಸ ಸಿಮ್‌ ಖರೀದಿಸಿ ಮಾಹಿತಿ ಕಲೆಹಾಕಲು ಅನುಮತಿ ಕೇಳಲಾಗಿದೆ’ ಎಂದು ಹೇಳಿದರು.

‘ದರ್ಶನ್ ಅವರಿಗೆ ಹಣ ನೀಡಿದ್ದ ವ್ಯಕ್ತಿಯ ವಿಚಾರಣೆ ನಡೆಸಬೇಕಿದೆ. ಎಲೆಕ್ಟ್ರಿಕ್‌ ಶಾಕ್‌ ಟಾರ್ಚ್‌ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿರುವುದಾಗಿ ಆರೋಪಿ ಧನರಾಜ್‌ ಬಾಯ್ಬಿಟ್ಟಿದ್ದಾರೆ. ಟಾರ್ಚ್‌ ಖರೀದಿಸಿ ಡಿಜಿಟಲ್‌ ಪೇಮೆಂಟ್ ಮಾಡಲಾಗಿದೆ’ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.

ಮೃತನ ಬಟ್ಟೆ ಬದಲಾವಣೆ: ‘ರೇಣುಕಸ್ವಾಮಿ ಕೊಲೆ ಬಳಿಕ ಅವರ ಬಟ್ಟೆಯನ್ನು ಬದಲಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಮೃತನು ಮೊದಲು ಧರಿಸಿದ್ದ ಬಟ್ಟೆಗಳನ್ನು ಎಸೆದು ಸಾಕ್ಷ್ಯನಾಶ ಪಡಿಸಲಾಗಿದೆ. ಮೃತನ ಪ್ಯಾಂಟ್ ಎಸೆದಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗಿದೆ’ ಎಂದು ಹೇಳಿದರು.

ಜುಲೈ 4ರವರೆಗೆ ನ್ಯಾಯಾಂಗ ಬಂಧನ

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಇತರ ಮೂವರನ್ನು ನಗರದ 24ನೇ ಎಸಿಎಂಎಂ ನ್ಯಾಯಾಲಯ 12 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನ್ಯಾಯಾಧೀಶ ವಿಜಯಕುಮಾರ್ ಎಸ್.ಜಾಟ್ಲಾ ಅವರ ಮುಂದೆ ಶನಿವಾರ ಮಧ್ಯಾಹ್ನ 3.50ಕ್ಕೆ  ಆರೋಪಿಗಳನ್ನು ಹಾಜರು ಪಡಿಸಲಾಯಿತು.

ತನಿಖಾಧಿಕಾರಿ ಎಸಿಪಿ ಎಲ್.ಚಂದನ್ ಕುಮಾರ್ ಪ್ರಕರಣದ ಸಿಡಿಯನ್ನು (ಕೇಸ್ ಡೈರಿ) ಮುಚ್ಚಿದ ಲಕೋಟೆಯಲ್ಲಿ ಹಾಗೂ ಮುಕ್ತ ರಿಮಾಂಡ್ ಅರ್ಜಿಯ ಕಡತವನ್ನು ನ್ಯಾಯಾಧೀಶರಿಗೆ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಾಧೀಶರು 35 ನಿಮಿಷಗಳಲ್ಲಿ ವಿಚಾರಣಾ ಪ್ರಕ್ರಿಯೆ ಪೂರೈಸಿ ಆರೋಪಿಗಳನ್ನು ಜುಲೈ 4ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು. 

ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ಹಾಗೂ ಸಹಾಯಕ ವಕೀಲರಾದ ಸಿ.ಸಚಿನ್ ಹಾಜರಿದ್ದರು.

ಜೀವ ಬೆದರಿಕೆ: ಪ್ರಮುಖ ಆರೋಪಿಗಳಾದ ಎ- 8 ರವಿಶಂಕರ್ ಎ-15 ಕಾರ್ತಿಕ್ ಅಲಿಯಾಸ್ ಕಪ್ಪೆ (27) ಎ-16 ಕೇಶವಮೂರ್ತಿ (27) ಮತ್ತು ಎ-17 ನಿಖಿಲ್ ನಾಯಕ್ (21) ಇವರಿಗೆ ಜೀವ ಬೆದರಿಕೆಯಿದ್ದು ಬೇರೆ ಜೈಲಿಗೆ ಕಳುಹಿಸಲು ಆದೇಶಿಸಬೇಕು ಎಂದು ಪಿ.ಪ್ರಸನ್ನ ಕುಮಾರ್ ಕೋರಿದರು. ಇದಕ್ಕೆ ನ್ಯಾಯಾಧೀಶರು ‘ಈ ವಿಷಯಕ್ಕೆ ಸಂಬಂಧಿಸಿದಂತೆ ತಾವು ಹೇಳುತ್ತಿರುವ ನಾಲ್ವರು ಆರೋಪಿಗಳ‌ ಪರ ವಕೀಲರ ವಾದವನ್ನು ಇದೇ 24ರಂದು ಆಲಿಸಿ ಆದೇಶ ಪ್ರಕಟಿಸುತ್ತೇನೆ’ ಎಂದು ತಿಳಿಸಿ ವಿಚಾರಣೆ ಮುಂದೂಡಿದರು.

ಸಾಕ್ಷಿ ಹೇಳಿಕೆ ದಾಖಲು: ’ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ‌ 20 ಮತ್ತು 21ರಂದು ಐವರು ಸಾಕ್ಷಿಗಳ ಹೇಳಿಕೆಯನ್ನು ಅಪರಾಧ ಪ್ರಕ್ರಿಯಾ ಸಂಹಿತೆ-1973ರ (ಸಿಆರ್‌ಪಿಸಿ) ಕಲಂ 164ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ದಾಖಲು ಮಾಡಿಕೊಳ್ಳಲಾಗಿದೆ. ಇವರಲ್ಲಿ ಕೆಲವರು ಘಟನೆಯ ಪ್ರತ್ಯಕ್ಷ ಸಾಕ್ಷಿಗಳೂ ಇದ್ದಾರೆ’ ಎಂದು ಮೂಲಗಳು ತಿಳಿಸಿವೆ.

ನ್ಯಾಯಾಂಗ ಬಂಧನಕ್ಕೆ ಒಳಗಾದ ಆರೋಪಿಗಳು 

* ಎ–2 ದರ್ಶನ್‌ ಅಲಿಯಾಸ್‌ ಡಿ ಬಾಸ್‌ ಬಿನ್‌ ಲೇಟ್‌ ತೂಗದೀಪ ಶ್ರೀನಿವಾಸ್‌(47)

* ಎ–9 ಡಿ.ಧನರಾಜ್‌ ಅಲಿಯಾಸ್ ರಾಜು ಬಿನ್‌ ದಿನೇಶ್ (27)

* ಎ–10 ವಿ.ವಿನಯ್‌ ಬಿನ್‌ ಲೇಟ್‌ ವೆಂಕಟರೆಡ್ಡಿ (38) * ಎ–14 ಪ್ರದೋಷ್‌ ಬಿನ್‌ ಸುಬ್ಬಾರಾವ್‌ (40)  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT