ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಹಿ ನಕಲು: ಗೃಹ ಇಲಾಖೆಗೆ ವಂಚನೆ!

* ನಕಲಿ ದಾಖಲೆ ಸೃಷ್ಟಿಸಿ ಪಸಾರ’ ಪರವಾನಗಿ * ಎಸಿಪಿ ಡಿಜಿಟಲ್‌ ಸಹಿಯೂ ನಕಲು
Published 24 ಜೂನ್ 2024, 20:30 IST
Last Updated 24 ಜೂನ್ 2024, 20:30 IST
ಅಕ್ಷರ ಗಾತ್ರ

ಬೆಂಗಳೂರು: ಅಪರಾಧ ಹಿನ್ನೆಲೆಯುಳ್ಳ ಮತ್ತು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಖಾಸಗಿ ಭದ್ರತಾ ಏಜೆನ್ಸಿಗಳ ಮಾಲೀಕರು ಪೊಲೀಸ್‌ ಅಧಿಕಾರಿಗಳ ಡಿಜಿಟಲ್‌ ಸಹಿಯನ್ನೇ ನಕಲು ಮಾಡಿ, ನಕಲಿ ಪೊಲೀಸ್‌ ಪರಿಶೀಲನಾ ಪ್ರಮಾಣಪತ್ರ ಸಲ್ಲಿಸಿ ‘ಪಸಾರ’ ಪರವಾನಗಿ ಪಡೆದು ಗೃಹ ಇಲಾಖೆಯನ್ನೇ ವಂಚಿಸುತ್ತಿರುವುದು ಪತ್ತೆಯಾಗಿದೆ.

ಬಿಬಿಎಂಪಿಯ ಹಲವು ಕಚೇರಿಗಳಿಗೆ ಭದ್ರತಾ ಸಿಬ್ಬಂದಿ ಒದಗಿಸುತ್ತಿರುವ ಭುವನೇಶ್ವರಿ ಎಂಟರ್‌ಪ್ರೈಸಸ್ ಎಂಬ ಭದ್ರತಾ ಏಜೆನ್ಸಿಯ ಮಾಲೀಕರು ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಪರಿಶೀಲನಾ ಪ್ರಮಾಣಪತ್ರ ಸೃಷ್ಟಿಸಿ, ಎಸಿ‍ಪಿಯೊಬ್ಬರ ಡಿಜಿಟಲ್‌ ಸಹಿ ನಕಲು ಮಾಡಿ ಖಾಸಗಿ ಭದ್ರತಾ ಏಜೆನ್ಸಿಗಳ ನಿಯಂತ್ರಣ ಕಾಯ್ದೆಯಡಿ (ಪಸಾರ) ಪರವಾನಗಿ ಪಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಈ ಪ್ರಕರಣದ ಬೆನ್ನಲ್ಲೇ ಗೃಹ ಇಲಾಖೆಯ ಅಧೀನದಲ್ಲಿರುವ ‘ಪಸಾರ ನಿಯಂತ್ರಣ ಪ್ರಾಧಿಕಾರ‘ ದಾಖಲೆಗಳ ಪರಿಶೀಲನೆ ಆರಂಭಿಸಿದೆ. ರಾಜಧಾನಿಯ ವ್ಯಾಪ್ತಿಯಲ್ಲಿ ಹಲವು ಖಾಸಗಿ ಭದ್ರತಾ ಏಜೆನ್ಸಿಗಳ ಮಾಲೀಕರು ಇದೇ ರೀತಿ ಗೃಹ ಇಲಾಖೆಯನ್ನು ವಂಚಿಸಿರುವ ಮಾಹಿತಿ ಇಲಾಖೆಗೆ ಲಭಿಸಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಖಾಸಗಿ ಭದ್ರತಾ ಏಜೆನ್ಸಿಗಳ ಮಾಲೀಕರು ಪಸಾರ ಕಾಯ್ದೆಯಡಿ ಗೃಹ ಇಲಾಖೆಯಿಂದ ಪರವಾನಗಿ ಪಡೆಯುವುದು ಕಡ್ಡಾಯ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು, ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿರುವವರಿಗೆ ಪರವಾನಗಿ ವಿತರಿಸುವಂತಿಲ್ಲ.

ಪ್ರಕರಣ ಬಯಲಾದದ್ದು ಹೇಗೆ?: ಭುವನೇಶ್ವರಿ ಎಂಟರ್‌ಪ್ರೈಸಸ್‌ ಮಾಲೀಕ ಗಿರೀಶ್‌ ವಿರುದ್ಧ ಆರಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳು ಇವೆ. ಅದೇ ವ್ಯಕ್ತಿ ಬಿಬಿಎಂಪಿಯ ದಕ್ಷಿಣ, ಪಶ್ಚಿಮ, ಮಹದೇವಪುರ, ಯಲಹಂಕ ಸೇರಿದಂತೆ ಹಲವು ವಲಯಗಳ ವಿವಿಧ ಸರ್ಕಾರಿ ಕಚೇರಿಗಳಿಗೆ ಭದ್ರತಾ ಸಿಬ್ಬಂದಿ ಒದಗಿಸುತ್ತಿದ್ದಾರೆ.

2023ರ ಆಗಸ್ಟ್‌ 24ರಂದು ಸಂಸ್ಥೆಯ ಪಸಾರ ಪರವಾನಗಿ ಅವಧಿ ಅಂತ್ಯಗೊಂಡಿತ್ತು. 2023ರ ನವೆಂಬರ್‌ 28ರಂದು ಗೃಹ ಇಲಾಖೆ ಹೊಸ ಪರವಾನಗಿ ನೀಡಿತ್ತು. ಕ್ರಿಮಿನಲ್‌ ಪ್ರಕರಣಗಳಿದ್ದರೂ ಪಸಾರ ಪರವಾನಗಿ ನೀಡಿರುವ ಕುರಿತು ಚಂದ್ರಶೇಖರ್‌ ಗೌಡ ಎಂಬುವವರು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ದೂರು ಸಲ್ಲಿಸಿದ್ದರು. ದೂರಿನ ಕುರಿತು ತನಿಖೆ ನಡೆಸುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಬಿ. ದಯಾನಂದ ಅವರಿಗೆ ಪತ್ರ ಬರೆದಿದ್ದರು.

ಗುಪ್ತಚರ ವಿಭಾಗದ ಡಿಸಿಪಿ ಪ್ರಾಥಮಿಕ ಹಂತದ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಪೊಲೀಸ್‌ ಐಟಿ ತಂತ್ರಾಂಶದ ಮೂಲಕ ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಿಂದ ಪಡೆದಂತೆ ನಕಲಿ ಪರಿಶೀಲನಾ ಪ್ರಮಾಣಪತ್ರ ಸೃಜಿಸಿ, ಸ್ಪೆಷಲ್‌ ಬ್ರಾಂಚ್‌ ಎಸಿಪಿ ವಿಜಯ್‌ ಹಡಗಲಿ ಅವರ ಡಿಜಿಟಲ್‌ ಸಹಿಯನ್ನು ನಕಲು ಮಾಡಿ ಪಸಾರ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ವರದಿ ಆಧರಿಸಿ ಎಫ್ಐಆರ್‌ ದಾಖಲಿಸಿ, ತನಿಖೆ ನಡೆಸುವಂತೆ ಪಶ್ಚಿಮ ವಿಭಾಗದ ಡಿಸಿಪಿ ಎಸ್‌. ಗಿರೀಶ್‌ ನಿರ್ದೇಶನ ನೀಡಿದ್ದರು. ಜೂನ್‌ 6ರಂದು ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ, ತನಿಖೆ ಆರಂಭಿಸಲಾಗಿದೆ.

ಭುವನೇಶ್ವರಿ ಎಂಟರ್‌ಪ್ರೈಸಸ್‌ಗಾಗಿ ಎ.ವಿ. ಗಿರೀಶ್‌ ಎಂಬ ಹೆಸರಿನಲ್ಲಿ ಜಯನಗರ ಒಂದನೇ ಬ್ಲಾಕ್‌ ವಿಳಾಸ ನೀಡಿ 2018ರಲ್ಲಿ ಪಸಾರ ಪರವಾನಗಿ ಪಡೆಯಲಾಗಿತ್ತು. 2023ರಲ್ಲಿ ನಾಗರಬಾವಿ ವಿಳಾಸ ನೀಡಿ ಗಿರೀಶ ಎ.ವಿ. ಎಂಬ ಹೆಸರಿನಲ್ಲಿ ಪರವಾನಗಿ ಪಡೆಯಲಾಗಿದೆ. ಪೊಲೀಸ್‌ ಪರಿಶೀಲನಾ ಪ್ರಮಾಣಪತ್ರಕ್ಕೆ 15 ಸಂಖ್ಯೆಗಳಿರುತ್ತವೆ. ಅಂಕಿಗಳ ನೋಂದಣಿ ಸಂಖ್ಯೆಗಳಿರುತ್ತವೆ. ಆದರೆ, 2023ರಲ್ಲಿ ಗಿರೀಶ್‌ ಸಲ್ಲಿಸಿದ್ದ ನಕಲಿ ದಾಖಲೆಯಲ್ಲಿ 14 ಅಂಕಿಗಳ ನೋಂದಣಿ ಸಂಖ್ಯೆ ಮಾತ್ರ ಇರುವುದು ತನಿಖೆಯಲ್ಲಿ ಕಂಡುಬಂದಿದೆ.

ಬಿಬಿಎಂಪಿ ಅಧಿಕಾರಿಗಳೂ ಶಾಮೀಲು?

ಭುವನೇಶ್ವರಿ ಎಂಟರ್‌ಪ್ರೈಸಸ್‌ ಮಾಲೀಕರು ಪೊಲೀಸರ ಹೆಸರಿನಲ್ಲೇ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಪರವಾನಗಿ ಪಡೆದಿರುವ ಕುರಿತು ಕೆಲವರು ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಪರವಾನಗಿ ಇಲ್ಲದ ಮೂರು ತಿಂಗಳ ಅವಧಿಗೆ ಬಿಲ್‌ ಪಾವತಿಸದಂತೆಯೂ ಕೋರಿದ್ದರು. ಆದರೆ, ಬಿಬಿಎಂಪಿ ಅಧಿಕಾರಿಗಳು ಈ ಅವಧಿಗೆ ಬಿಲ್‌ ಪಾವತಿಸಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರವಾನಗಿ ಪಡೆದು ಭದ್ರತಾ ಸಿಬ್ಬಂದಿ ಪೂರೈಕೆ ಗುತ್ತಿಗೆ ಪಡೆಯುತ್ತಿರುವವರ ಜತೆ ಬಿಬಿಎಂಪಿ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

‘ತಪ್ಪಿತಸ್ಥರ ವಿರುದ್ಧ ಕ್ರಮ’
‘ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಸಾರ ಪರವಾನಗಿ ಪಡೆದಿರುವವರ ಪತ್ತೆಗೆ ದಾಖಲೆ ಪರಿಶೀಲಿಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT