ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೌಜನ್ಯ ಕೊಲೆ ಪ್ರಕರಣ: ಸಿಬಿಐಗೆ ಹೈಕೋರ್ಟ್ ನೋಟಿಸ್‌

Published 20 ಫೆಬ್ರುವರಿ 2024, 16:07 IST
Last Updated 20 ಫೆಬ್ರುವರಿ 2024, 16:07 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಆರೋಪ ಪ್ರಕರಣದ ಮರು ತನಿಖೆಗೆ ಆದೇಶಿಸುವಂತೆ ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ಸಿಬಿಐಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಮೃತ ಸೌರ್ಜನ್ಯ ತಂದೆಯೂ ಆದ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಆರ್‌.ಬಾಲಕೃಷ್ಣ, ‘ಪ್ರಕರಣದಿಂದ ಸಂತೋಷ್‌ ರಾವ್‌ ಅವರನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಾಕಿಯಿದೆ. ಮೇಲ್ಮನವಿ ಜೊತೆಗೆ ಈ ಅರ್ಜಿಯನ್ನೂ ವಿಚಾರಣೆಗೆ ನಿಗದಿಪಡಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ರೋಸ್ಟರ್‌ ಅನುಸಾರ ಸೂಕ್ತ ವಿಭಾಗೀಯ ನ್ಯಾಯಪೀಠದ ಮುಂದೆ ಈ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಲು ಮುಖ್ಯ ನ್ಯಾಯಮೂರ್ತಿಗಳಿಂದ ಅನುಮತಿ ಪಡೆಯುವಂತೆ ರಿಜಿಸ್ಟ್ರಿಗೆ ಸೂಚಿಸಿತು.

ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು, ಸಿಐಡಿ ಎಡಿಜಿಪಿ, ಅಪರಾಧ ಮತ್ತು ತಾಂತ್ರಿಕ ಸೇವಗಳ ವಿಭಾಗದ ಎಡಿಜಿಪಿ, ದಕ್ಷಿಣ ಕನ್ನಡ ಪೊಲೀಸ್‌ ವರಿಷ್ಠಾಧಿಕಾರಿ, ಸಿಐಡಿ ಉಪ ಪೊಲೀಸ್‌ ವರಿಷ್ಠಾಧಿಕಾರಿ, ಬೆಳ್ತಂಗಡಿ ಪೊಲೀಸ್‌ ಠಾಣಾಧಿಕಾರಿ ಮತ್ತು ಸಿಬಿಐಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು. ಪ್ರಕರಣದಲ್ಲಿ ಆರೋಪದಿಂದ ಖುಲಾಸೆಯಾಗಿರುವ ಸಂತೋಷ್‌ ರಾವ್‌ ಅವರನ್ನು ಅರ್ಜಿಯಲ್ಲಿ ಹತ್ತನೇ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಲಾಗಿದೆ.

‘ಆರೋಪಿ ಸಂತೋಷ್‌ ರಾವ್‌ ಅವರನ್ನು ಖುಲಾಸೆಗೊಳಿಸಿ ಸೆಷನ್ಸ್‌ ನ್ಯಾಯಾಲಯ 2023ರ ಜೂನ್‌ 16ರಂದು ಆದೇಶಿಸಿದೆ. ಈ ಪ್ರಕರಣದಲ್ಲಿ ನ್ಯಾಯೋಚಿತವಾದ ತನಿಖೆ ನಡೆದಿಲ್ಲ. ಹೀಗಾಗಿ, ಮರು ತನಿಖೆ ನಡೆಸಲು ಆದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಕರಣವೇನು?: ಉಜಿರೆಯ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಸೌಜನ್ಯ 2012ರ ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಮನೆಗೆ ತೆರಳುವ ವೇಳೆ ನಾಪತ್ತೆಯಾಗಿದ್ದರು. ಮರುದಿನ ರಾತ್ರಿ ಧರ್ಮಸ್ಥಳದ ಮಣ್ಣಸಂಕ ಬಳಿ ಸೌಜನ್ಯ ಶವ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT