ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡಾನ್: ಬೇಗ ಕರೆಸಿಕೊಳ್ಳಿ, ಕನ್ನಡಿಗರ ಮೊರೆ

Last Updated 20 ಏಪ್ರಿಲ್ 2023, 22:45 IST
ಅಕ್ಷರ ಗಾತ್ರ

ದಾವಣಗೆರೆ: ‘ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್‌ ಕರೆಸಿಕೊಂಡಂತೆಯೇ ಕೇಂದ್ರ ಸರ್ಕಾರ ನಮ್ಮನ್ನೂ ಆದಷ್ಟು ಬೇಗ ವಾಪಸು ಕರೆಸಿಕೊಳ್ಳಲಿದೆ’ ಎಂಬ ಆಶಾಭಾವದೊಂದಿಗೆ ಸುಡಾನ್‌ನ ವಿವಿಧ ನಗರಗಳಲ್ಲಿ ಸಿಲುಕಿರುವ ಭಾರತೀಯರೇನೋ ಕಾಲ ಕಳೆಯುತ್ತಿದ್ದಾರೆ. ಆದರೆ, ದಿನ ಕಳೆದಂತೆ ಅವರ ಆತಂಕ ಹೆಚ್ಚುತ್ತಿದೆ.

ಆಯುರ್ವೇದ ಗಿಡಮೂಲಿಕೆಗಳ ವ್ಯಾಪಾರಕ್ಕೆಂದು ಸುಡಾನ್‌ಗೆ ತೆರಳಿರುವ, ಹಕ್ಕಿಪಿಕ್ಕಿ ಸಮುದಾಯದ ನೂರಾರು ಕನ್ನಡಿಗರ ಸುರಕ್ಷಿತ ವಾಪಸಾತಿಯ ಭರವಸೆ ನೀಡಿದ್ದ ಸರ್ಕಾರಕ್ಕೆ ಇದುವರೆಗೆ ರಕ್ಷಣಾ ಕಾರ್ಯಾಚಣೆ ನಡೆಸಲು ಸಾಧ್ಯವಾಗಿಲ್ಲ.

ಸುಡಾನ್‌ನ ರಾಜಧಾನಿ ಖಾರ್ಟೂಮ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಯ ಅಧಿಕಾರಿಗಳೊಂದಿಗೆ ಗುರುವಾರ ಮಾತನಾಡಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅಲ್ಲಿನ ಸ್ಥಿತಿಗತಿ ಅವಲೋಕಿಸಿದ್ದಾರೆ. ಆದರೆ, ಜೀವ ಉಳಿದರೆ ಸಾಕು ಎಂಬ ಆಶಯದಲ್ಲಿ ದಿನ ದೂಡುತ್ತಿರುವ ಭಾರತೀಯರ ಸುರಕ್ಷಿತ ವಾಪಸಾತಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳೇ ಇವೆ ಎಂದು ತಿಳಿದುಬಂದಿದೆ.

‘ಸಚಿವರು ಮಾಹಿತಿ ಪಡೆದಿರುವ ವಿಷಯ ಸಹಾಯವಾಣಿಯಿಂದ ತಿಳಿದಿದೆ. ನಮ್ಮನ್ನು ಸುರಕ್ಷಿತವಾಗಿರುವ ಅಕ್ಕಪಕ್ಕದ ದೇಶಗಳ ಮೂಲಕವಾದರೂ ಭಾರತಕ್ಕೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಬೇಕಿದೆ’ ಎಂದು ಖಾರ್ಟೂಮ್‌ನಿಂದ 500 ಕಿಲೋಮೀಟರ್‌ ದೂರದಲ್ಲಿರುವ ಅಲ್ಫಾಶೇರ್‌ ನಗರದಲ್ಲಿ ಸಿಲುಕಿರುವ ಚನ್ನಗಿರಿ ತಾಲ್ಲೂಕಿನ ಗೋಪನಾಳ್‌ ಗ್ರಾಮದ ನಂದಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ವಿಮಾನ ನಿಲ್ದಾಣಗಳನ್ನೂ ಸೇನೆ ವಶಕ್ಕೆ ಪಡೆದಿದೆ. ಸುಡಾನ್‌ನೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳ ಮೂಲಕ ಸ್ಥಳಾಂತರಕ್ಕೆ ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಬೇಕು’ ಎಂದು ಮತ್ತೊಬ್ಬ ಸಂತ್ರಸ್ತ ಪ್ರಭು ಆಗ್ರಹಿಸಿದ್ದಾರೆ.

‘ಸಂಘರ್ಷದಿಂದಾಗಿ ಜಿಗುಪ್ಸೆ ಉಂಟಾಗಿದೆ. ಕದನ ವಿರಾಮದ ಮಾತುಕತೆಗಳು ವಿಫಲವಾಗಿದ್ದು, ಜೀವಭಯ ಹೆಚ್ಚಿದೆ. ಅಡುಗೆ ಮಾಡಲು ದಿನಸಿ ಪದಾರ್ಥಗಳು ಸಿಗುತ್ತಿಲ್ಲ. ದಿನಸಿ ಖರೀದಿಸಲು ತೆರಳಿದ ನಮ್ಮವರನ್ನು ವ್ಯಾಪಾರಿಯು ಕಳ್ಳತನದ ಭಯದಿಂದ ಏನನ್ನೂ ಕೊಡದೇ ಹೊರಹಾಕಿದ್ದಾನೆ. ಇದರಿಂದ ನಮಗೆ ದಿಕ್ಕೇ ತೋಚದಂತಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಶೀಘ್ರವೇ ಕರೆಸಿಕೊಳ್ಳಬೇಕು’ ಎಂದೂ ಮನವಿ ಮಾಡಿದ್ದಾರೆ.

‘ನಾವು ಒಂದೇ ಸೂರಿನಡಿ 33 ಜನ ಇದ್ದೇವೆ. ಮದ್ದುಗುಂಡುಗಳ ದಾಳಿ ನಿರಂತರವಾಗಿದೆ. ಅಡುಗೆ ಮಾಡಲು ನೀರಿಲ್ಲದೇ ಪಕ್ಕದ ಮನೆಯವರನ್ನು ಕಾಡಿಬೇಡಿ ಪಡೆದಿದ್ದೇವೆ. ಆಹಾರ, ನೀರು ಇಲ್ಲದೆ ದಿನ, ಜೀವನ ಕಳೆಯುವುದು ಕಷ್ಟಸಾಧ್ಯ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಬುಧವಾರ ಸಂತ್ರಸ್ತ ಕುಟುಂಬಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ.ಮನೋಜ್‌ ರಾಜನ್‌, ‘ಶೀಘ್ರವೇ ಎಲ್ಲರನ್ನೂ ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ ಕರೆತರಲು ಕ್ರಮ ಕೈಗೊಳ್ಳಲಾಗುವುದು’ ಎಂಬ ಭರವಸೆ ನೀಡಿದ್ದರು. ಆದರೆ, ಮತ್ತೆ ಸಂತ್ರಸ್ತರನ್ನು ಸಂಪರ್ಕಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT