ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಾಡಿನ ‘ಸಂಚಾರಿ ಆಸ್ಪತ್ರೆ’ ಸೂಲಗಿತ್ತಿ ನರಸಮ್ಮ

Last Updated 26 ಡಿಸೆಂಬರ್ 2018, 5:39 IST
ಅಕ್ಷರ ಗಾತ್ರ

ತುಮಕೂರು: ಅದು 1950ರ ದಶಕ. ಪಾವಗಡ ತಾಲ್ಲೂಕಿನ ಕೃಷ್ಣಾಪುರ. ಎರಡೇ ಕಿಲೋಮೀಟರ್ ಅಂತರದಲ್ಲಿ ಆಂಧ್ರಪ್ರದೇಶದ ಗಡಿ. ಗ್ರಾಮದ ಹೊರವಲಯದಲ್ಲಿ ಬುರ‍್ರಕಥೆ ಹೇಳುವ ಪೂಸಲ ಗಂಗಮ್ಮ ಮತ್ತು ಆಕೆಯ ಪತಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದರು.

ಒಮ್ಮೆ ನಡುರಾತ್ರಿ ಗಂಗಮ್ಮನಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆ ರಾತ್ರಿ ಲಾಂದ್ರದ ಬೆಳಕಿನಲ್ಲಿ ನರಸಮ್ಮ, ಗಂಗಮ್ಮನಿಗೆ ಹೆರಿಗೆ ಮಾಡಿಸಿದರು. ದಂಪತಿ ಮುಖದಲ್ಲಿ ಮಂದಹಾಸ. ಇದಕ್ಕೆ ಕೃತಜ್ಞರಾದ ಗಂಗಮ್ಮ, ನರಸಮ್ಮನ ಹುಟ್ಟು, ಬಾಲ್ಯ, ಬದುಕು ಮತ್ತು ಸೂಲಗಿತ್ತಿ ಕಾಯಕದ ಬಗ್ಗೆ ಬುರ‍್ರಕಥೆ ಕಟ್ಟಿ ಹಳ್ಳಿ ಹಳ್ಳಿಗಳಲ್ಲಿ ಹಾಡಿದರು.

ಅದುವರೆಗೆ ಕೃಷ್ಣಾಪುರ ಸೀಮೆಗೆ ಪರಿಚಿತವಾಗಿದ್ದ ನರಸಮ್ಮನ ಸೂಲಗಿತ್ತಿ ಕಾಯಕ, ಪಾವಗಡ ಹಾಗೂ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಹಳ್ಳಿ ಹಳ್ಳಿಗಳಲ್ಲಿ ಮನೆ ಮಾತಾಯಿತು. ಗರ್ಭಿಣಿಯರಿದ್ದ ಮನೆಗಳ ಪೋಷಕರು ಎತ್ತಿನಗಾಡಿ ಕಟ್ಟಿಕೊಂಡು ನರಸಮ್ಮನ ಹುಡುಕಿ ಬಂದರು.

ನರಸಮ್ಮ ಅವರ ಅಜ್ಜಿ ಮರುಗಮ್ಮ (ತಾಯಿಯ ತಾಯಿ) ಸಹ ಸೂಲಗಿತ್ತಿ ಕಾಯಕ ಮಾಡುತ್ತಿದ್ದರು. ಇದನ್ನು ಬಾಲ್ಯದಿಂದ ನೋಡುತ್ತ ಬೆಳೆದರು ನರಸಮ್ಮ. ಪತಿ ಆಂಜನಪ್ಪ ಅವರ ಸೋದರ ಮಾವನ ಹೆಂಡತಿ ಕನುವಕ್ಕನಿಗೆ ಮೊದಲ ಹೆರಿಗೆ ಮಾಡಿಸಿದರು. ಕನುವಕ್ಕ, ನರಸಮ್ಮ ಅವರಿಗಿಂತ ಹಿರಿಯರು. ಆಗ ನರಸಮ್ಮ ಅವರಿಗೆ 22ರ ಪ್ರಾಯ.

ಜಾತಿಯ ಬಾಹುಗಳು ಬಿಗಿಯಾಗಿದ್ದ ಸಮಯದಲ್ಲಿ ದಲಿತ ಸಮುದಾಯದ ನರಸಮ್ಮ ಅವರಿಗೆ ಸೂಲಗಿತ್ತಿ ಕಾಯಕ, ಜಾತಿ ಮೀರಿದ ಗೌರವ ಮತ್ತು ಪ್ರೀತಿ ತಂದುಕೊಟ್ಟಿತು. ಕೃಷ್ಣಾಪುರದಲ್ಲಿ ಅಂದು ಬ್ರಾಹ್ಮಣರ ಸಂಖ್ಯೆ ಹೆಚ್ಚಿತ್ತು. ಆ ಕಾರಣಕ್ಕೆ ‘ಸ್ವಾಮಿಗಳ ಹಳ್ಳಿ’ ಎಂದೂ ಕರೆಯುತ್ತಿದ್ದರು. ಬ್ರಾಹ್ಮಣರ ಮನೆಗಳಲ್ಲಿ ಅವರ ಹೆಣ್ಣು ಮಕ್ಕಳಿಗೆ ಹೆರಿಗೆ ಮಾಡಿಸಿ, ಆರೈಕೆ ಮಾಡಿದರು ನರಸಮ್ಮ. ಶಾಲೆ ಮೆಟ್ಟಿಲು ಹತ್ತದ ಅವರು ಎಲ್ಲ ವರ್ಗದ ಜನರಿಗೆ ಹಳ್ಳಿಗಾಡಿನ ‘ಸಂಚಾರಿ ಆಸ್ಪತ್ರೆ’ಯಾದರು.

ನರಸಮ್ಮ ಅವರ ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಟ್ಟಿದ್ದು ಮತ್ತು ಗಂಡು ಮಕ್ಕಳಿಗೆ ಹೆಣ್ಣು ತಂದಿದ್ದು ಆಂಧ್ರಪ್ರದೇಶದಿಂದ. ಹೆಣ್ಣು ಮಕ್ಕಳ ಮತ್ತು ಸೊಸೆಯರ ಹೆರಿಗೆ ಮಾಡಿಸಲು ಹೋದಾಗ ಸುತ್ತಮುತ್ತಲಿನ ಹಳ್ಳಿಗಳ ಜನರು ತಮ್ಮ ಹೆಣ್ಣು ಮಕ್ಕಳ ಹೆರಿಗೆಗಾಗಿ ನರಸಮ್ಮ ಅವರನ್ನು ಅರಸಿ ಬಂದರು. ಹೀಗೆ ಆಂಧ್ರಪ್ರದೇಶದ ಹಳ್ಳಿಗಳಲ್ಲೂ ನರಸಮ್ಮ ಚಿರಪರಿಚಿತರಾದರು.

ನರಸಮ್ಮ ಈ ಕೆಲಸವನ್ನು ಸೇವೆಯಾಗಿ ಪರಿಗಣಿಸಿದ್ದರು. ಕೃಷ್ಣಾಪುರದ ರೈತರು ರಾಗಿ, ಕಡಲೇಕಾಯಿ, ಜೋಳವನ್ನು ಹೆಚ್ಚು ಬೆಳೆಯುತ್ತಿದ್ದರು. ಸುಗ್ಗಿ ಸಮಯದಲ್ಲಿ ಧಾನ್ಯಗಳನ್ನು ರಾಶಿ ಮಾಡುತ್ತಿದ್ದರು. ಆ ರಾಶಿಯನ್ನು ನರಸಮ್ಮ ಮೊದಲು ಮುಟ್ಟಿ ಪೂಜೆ ಸಲ್ಲಿಸಬೇಕು. ಒಂದು ಮೊರ ಧಾನ್ಯವನ್ನು ಯಾರಿಗಾದರೂ ನೀಡಬೇಕು ಎನ್ನುವ ಆಸೆ ರೈತರದ್ದು. ಅದಕ್ಕೆ ಕಾರಣ ನರಸಮ್ಮ ಕೈಗುಣ ಅತ್ಯುತ್ತಮವಾಗಿದೆ. ಅವರು ಮುಟ್ಟಿದ್ದು ಬಂಗಾರವಾಗುತ್ತದೆ ಎನ್ನುವ ನಂಬಿಕೆ. ನರಸಮ್ಮ ಅವರಿಗೂ ದಾನವಾಗಿ ಧಾನ್ಯಗಳನ್ನು ನೀಡುತ್ತಿದ್ದರು.

ತೀರಾ ಬಡತನದ ಬದುಕು ಸಾಗಿಸುತ್ತಿದ್ದ ನರಸಮ್ಮ, ಕೂಲಿಗೆ ಹೋಗಿದ್ದಾಗ ಹೆರಿಗೆಯ ಕರೆಗಳು ಬಂದರೆ ಕೂಲಿ ಬಿಟ್ಟು ಅತ್ತ ದೌಡಾಯಿಸುತ್ತಿದ್ದರು. ಈ ನಿಷ್ಕಾಮ ಕಾರ್ಯ ಅವರಿಗೆ ಪ್ರಸೂತಿ ಪ್ರವೀಣೆಯ ಸ್ಥಾನ ಕೊಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT