ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲು ಬಡಿದು ಇಬ್ಬರು ಸಾವು

Published 1 ಜೂನ್ 2023, 15:30 IST
Last Updated 1 ಜೂನ್ 2023, 15:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬಳ್ಳಾರಿ, ಹುಬ್ಬಳ್ಳಿ-ಧಾರವಾಡ ಉತ್ತರ ಕನ್ನಡ, ಗದಗ, ವಿಜಯಪುರ ಜಿಲ್ಲೆಯಲ್ಲಿ ಗುರುವಾರ ಜೋರು ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. 

ಮದುವೆಗೆ ತೆರಳಿದ್ದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕು ಉತ್ತನೂರು ಗ್ರಾಮದ ಶೇಖರಗೌಡ(32) ಮತ್ತು ಬಸವನಗೌಡ (38) ಎಂಬುವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಹೊಸಪೇಟೆ ತಾಲ್ಲೂಕಿನ ಧರ್ಮಸಾಗರ, ಕುರುಗೋಡು ತಾಲ್ಲೂಕಿನ ಕೊಳೂರು ಮದಿರೆ ಮತ್ತು ಸಿರುಗುಪ್ಪ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಂಧ್ರ ಪ್ರದೇಶದ ಆಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎ೦ದು ಶೇಖರಗೌಡ ಸಹೋದರ ಅಯ್ಯನಗೌಡ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನಲ್ಲಿ ಆಲಿಕಲ್ಲು ಮಳೆಗೆ 61.19 ಎಕರೆ ಬಾಳೆಗೆ ಹಾನಿಯಾಗಿದೆ. ತಾಲ್ಲೂಕಿನ ಚಿಕ್ಕಜಾಯಿಗನೂರು, ದೇವಸಮುದ್ರ, ಶಾಂತಿನಗರ, ನೆಲ್ಲೂಡಿ ಸೇರಿ ಕೆಲ ಗ್ರಾಮಗಳಲ್ಲಿ ಹಲವು ಶೆಡ್‍ಗಳಿಗೆ ಹಾಕಿದ ತಗಡುಗಳು ಹಾರಿ ಹೋಗಿವೆ. ಮರ, ವಿದ್ಯುತ್ ಪರಿವರ್ತಕ, ಕಂಬಗಳು ಬಿದ್ದಿವೆ.  ಎಮ್ಮಿಗನೂರು ಗ್ರಾಮದ ತಿಮ್ಮನಕೇರಿ ಕ್ಯಾಂಪ್‍ನಲ್ಲಿ ಭತ್ತದ ಹುಲ್ಲಿನ ಬಣವಿ ಸಿಡಿಲಿಗೆ ಸಂಪೂರ್ಣ ಸುಟ್ಟು ಹೋಗಿದೆ.  

ಕುರುಗೋಡಿನಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ ಸಂಜೆ ಬಿರುಗಾಳಿಗೆ ತಾಲ್ಲೂಕಿನ ಗುತ್ತಿಗನೂರು ಗ್ರಾಮದಲ್ಲಿ 20ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ. ನಾಲ್ಕು ಬೇವಿನಮರಗಳು ನೆಲಕ್ಕುರುಳಿವೆ.

ಧಾರವಾಡ ಜಿಲ್ಲೆಯಲ್ಲಿ ಗುಡುಗು ಮಿಂಚಿನ ಆರ್ಭಟವೂ ಇತ್ತು. ಹುಬ್ಬಳ್ಳಿ ನಗರ ಸೇರಿದಂತೆ ವಿವಿಧೆಡೆ ಬುಧವಾರ ತಡರಾತ್ರಿ ಎರಡು ಗಂಟೆ ರಭಸದ ಮಳೆಯಾಯಿತು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಜೊಯಿಡಾ, ಕಾರವಾರ, ಅಂಕೋಲಾದಲ್ಲಿ ಮಳೆಯಾಗಿದೆ.  

ವಿಜಯಪುರ ಜಿಲ್ಲೆ ಬಬಲೇಶ್ವರದಲ್ಲಿ ಬಿರುಗಾಳಿಗೆ ತಾಲ್ಲೂಕಿನ ಕನಮುಚನಾಳ ಸರ್ಕಾರಿ ಪ್ರೌಢ ಶಾಲೆಯ ಕಾಂಪೌಂಡ್‌ ಮತ್ತು ಮರಗಳು ನೆಲಕ್ಕುರುಳಿದೆ. ಮೈಸೂರು ನಗರದಲ್ಲೂ ಕೆಲ ಹೊತ್ತು ಮಳೆ ಸುರಿಯಿತು. 

ಬಸವನಗೌಡ
ಬಸವನಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT