ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ವೇದಾಂತ ನಾವಿ ಪ್ರಥಮ

Published 10 ಏಪ್ರಿಲ್ 2024, 10:55 IST
Last Updated 10 ಏಪ್ರಿಲ್ 2024, 10:55 IST
ಅಕ್ಷರ ಗಾತ್ರ

ವಿಜಯಪುರ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕಲಾ ವಿಭಾಗ(ಕನ್ನಡ ಮಾಧ್ಯಮ)ದಲ್ಲಿ ವಿಜಯಪುರ ನಗರದ ಎಸ್‌.ಎಸ್‌.  ಪಿ.ಯು ಕಾಲೇಜಿನ ವಿದ್ಯಾರ್ಥಿ ವೇದಾಂತ ಜ್ಞಾನೋಬಾ ನಾವಿ 596 ಅಂಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಬೀಳಗಿ ಗ್ರಾಮದವರಾದ ವೇದಾಂತ ನಾವಿ ವಿಜಯಪುರ ನಗರದ ಶಾಸ್ತ್ರಿನಗರದ  ಡಿ.ದೇವರಾಜ ಅರಸು ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದಲ್ಲಿ ಇದ್ದುಕೊಂಡು ಎಸ್‌.ಎಸ್‌. ಪಿಯು ಕಾಲೇಜಿನಲ್ಲಿ ಓದಿದರು.

‘ರಾಜ್ಯಕ್ಕೆ ಪ್ರಥಮ ಬರುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ, ಖುಷಿಯಾಗಿದೆ. ಓದಿಗಾಗಿ ಹೆಚ್ಚು ಸಮಯ ಮೀಸಲಿಟ್ಟಿರಲಿಲ್ಲ. ಅವಕಾಶ ಸಿಕ್ಕಾಗ ಓದುತ್ತಿದ್ದೆ. ಯಾವುದೇ ಟ್ಯೂಷನ್‌ಗೆ ಹೋಗಿಲ್ಲ, ಪ್ರತಿ ದಿನ ಕಾಲೇಜಿನಲ್ಲಿ ಮಾಡುವ ಪಾಠಗಳನ್ನು ಅಂದಂದೆ ಓದಿಕೊಳ್ಳುತ್ತಿದ್ದೆ’ ಎಂದು ವೇದಾಂತ ತಿಳಿಸಿದರು.

‘ಪದವಿ ಓದಿದ ಬಳಿಕ ಐಎಎಸ್‌, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆದ್ಯತೆ ನೀಡುತ್ತೇನೆ’ ಎಂದು ಹೇಳಿದರು.

‘ಕ್ಷೌರಿಕ ಕೆಲಸ ಮಾಡುತ್ತಿದ್ದ ತಂದೆ ಕೋವಿಡ್‌ ಸಂದರ್ಭದಲ್ಲಿ ತೀರಿಕೊಂಡ ಪರಿಣಾಮ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಯಿತು. ಬಡತನದಲ್ಲೇ ತಾಯಿ, ಅಕ್ಕ ನೀಡಿದ ಸಹಕಾರ ಹಾಗೂ ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನದಿಂದ ಹೆಚ್ಚು ಅಂಕಗಳಿಸಲು ಸಹಾಯವಾಯಿತು’ ಎಂದು ವೇದಾಂತ ತಿಳಿಸಿದರು.

ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವೇದಾಂತ ನಾವಿ ಅವರನ್ನು ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲ್‌ ಅವರು ಸಿಹಿ ತಿನ್ನಿಸಿ, ಸನ್ಮಾನಿಸಿ ಶುಭ ಹಾರೈಸಿದರು.

ಕಲಬೀಳಗಿಯ ಬಂಜಾರ ವಿದ್ಯಾ ವರ್ದಕ ಸಂಘದ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದಿರುವ ವೇದಾಂತ ನಾವಿ ಶೇ 96.96 ರಷ್ಟು ಅಂಕಗಳಿಸಿ, ಉತ್ತಮ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT