ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೀಸಾ ಅವಧಿ ಮುಕ್ತಾಯ: ದೇಶ ತೊರೆಯಲು ಬಾಂಗ್ಲಾ ಮಹಿಳೆಗೆ ಆದೇಶ

Published 19 ಜನವರಿ 2024, 16:26 IST
Last Updated 19 ಜನವರಿ 2024, 16:26 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಪ್ರಜೆಯನ್ನು ಪ್ರೀತಿಸಿ ಮದುವೆಯಾಗಿ ನಂತರ ಆತನಿಂದ ದೂರವಾಗಿದ್ದ ಬಾಂಗ್ಲಾ ಮಹಿಳೆಯ ವೀಸಾ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಆಕೆಯನ್ನು ತಾಯ್ನಾಡಿಗೆ ವಾಪಸು ಕಳುಹಿಸುವಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿಗೆ (ಎಫ್‌ಆರ್‌ಆರ್‌ಒ) ಹೈಕೋರ್ಟ್‌ ನಿರ್ದೇಶಿಸಿದೆ.

ವೀಸಾ ಅವಧಿ ವಿಸ್ತರಿಸಲು ನಿರಾಕರಿಸಿ ನಿರ್ಗಮನ ಪರವಾನಗಿ ನೀಡಿದ್ದ ಎಫ್‌ಆರ್‌ಆರ್‌ಒ ಕ್ರಮವನ್ನು ಪ್ರಶ್ನಿಸಿ ಬಾಂಗ್ಲಾದ ರಕ್ತಿಮಾ ಖಾನುಮ್‌ (46) ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಅರ್ಜಿದಾರರ ವೀಸಾ ಅವಧಿ ಪೂರ್ಣಗೊಂಡಿದ್ದು, ಅದನ್ನು ಸಕ್ಷಮ ಪ್ರಾಧಿಕಾರ ವಿಸ್ತರಿಸಿಲ್ಲ. ದಾಖಲೆಗಳು ಇಲ್ಲದೆ ಭಾರತದ ನೆಲದಲ್ಲಿ ಉಳಿಯಲು ವಿದೇಶಿಯರು ಯಾವುದೇ ಹಕ್ಕನ್ನು ಪ್ರತಿಪಾದಿಸಲಾಗದು’ ಎಂದು ನ್ಯಾಯಪೀಠ ತಿಳಿಸಿದೆ.

ಎಫ್‌ಆರ್‌ಆರ್‌ಒ ಪರ ವಾದ ಮಂಡಿಸಿದ್ದ ಡೆಪ್ಯೂಟಿ ಸಾಲಿಸಿಟರ್‌ ಜನರಲ್ ಶಾಂತಿಭೂಷಣ್‌, ‘ಅರ್ಜಿದಾರರು ನೆಲೆಸಿರುವ ಪ್ರದೇಶ ವ್ಯಾಪ್ತಿಯ ಪೊಲೀಸರು ವೀಸಾ ವಿಸ್ತರಿಸದಂತೆ ಎಫ್ಆರ್‌ಆರ್‌ಒಗೆ ಶಿಫಾರಸು ಮಾಡಿದ್ದಾರೆ. ಸದ್ಯ ಆಕೆಯನ್ನು ಪತಿ ತೊರೆದಿದ್ದಾರೆ. ಭಾರತದಲ್ಲಿನ ಆಕೆಯ ಕಾರ್ಯ ಚಟುವಟಿಕೆ ಸಂಶಯಾಸ್ಪದವಾಗಿದೆ. ಆಕೆ ಭಾರತದಲ್ಲಿಯೇ ಉಳಿಯಲು ಯಾವುದೇ ಸಹಾನುಭೂತಿ ತೋರಿಸಬಾರದು’ ಎಂಬ ಮನವಿಯನ್ನು ನ್ಯಾಯಪೀಠ ಮನ್ನಿಸಿದೆ.

‘ಅವಧಿ ಮೀರಿ ಭಾರತದಲ್ಲಿ ನೆಲೆಸಿರುವ ವಿದೇಶಿಯರನ್ನು ದೇಶದಿಂದ ಹೊರಹಾಕಲು ಕೇಂದ್ರ ಸರ್ಕಾರ ಅಧಿಕಾರ ಹೊಂದಿದೆ. ರಾಷ್ಟ್ರಕ್ಕೆ ಅಪಾಯವಿರುವ ಪ್ರಕರಣಗಳಲ್ಲಿ ಸಹಾನುಭೂತಿ ತೋರಿಸಲಾಗದು. ಅರ್ಜಿದಾರರನ್ನು ದೇಶದಿಂದ ಹೊರಗೆ ಕಳುಹಿಸಲು ಎಫ್‌ಆರ್‌ಆರ್‌ಒ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಪ್ರಕರಣವೇನು? ರಕ್ತಿಮಾ ಖಾನುಮ್‌ (46) ಬಾಂಗ್ಲಾ ದೇಶದವರು. ಭಾರತದ ಜನಾರ್ದನ ರೆಡ್ಡಿ ಅವರನ್ನು ಪ್ರೀತಿಸಿ 2017ರ ಡಿಸೆಂಬರ್ 25ರಂದು ಮದುವೆಯಾಗಿದ್ದರು. ಬಳಿಕ ಜನಾರ್ದನ ರೆಡ್ಡಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಸ್ವಲ್ಪ ಕಾಲ ದಂಪತಿ ಚೆನ್ನೈನಲ್ಲಿ ವಾಸವಾಗಿದ್ದರು. ಭಿನ್ನಾಭಿಪ್ರಾಯ ಉಂಟಾದ ಕಾರಣ ಅವರಿಬ್ಬರೂ ಪ್ರತ್ಯೇಕಗೊಂಡಿದ್ದರು.

2019ರಲ್ಲಿ ರಕ್ತಿಮಾ ಅವರ ಪ್ರವಾಸಿ ವೀಸಾ ಅವಧಿ ಕೊನೆಗೊಂಡಿತ್ತು. ಪ್ರವಾಸಿ ವೀಸಾವಾಗಿ ವೀಸಾವನ್ನು ಪರಿವರ್ತಿಸಿಕೊಂಡಿದ್ದ ಅವರು ಭಾರತಲ್ಲಿಯೇ ನೆಲೆಸಿದ್ದರು. ಈ ಪರಿವರ್ತಿತ ವೀಸಾ ಅವಧಿಯೂ 2022ರ ಆಗಸ್ಟ್ 20ರಂದು ಕೊನೆಗೊಂಡಿತ್ತು. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ರಕ್ತಿಮಾ, ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT