ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಎಸ್‌ಎಲ್‌ ಪುನರುಜ್ಜೀವನಕ್ಕೆ ಸಂಸದ ರಾಘವೇಂದ್ರ ಒತ್ತಾಯ

Published 13 ಜೂನ್ 2023, 20:14 IST
Last Updated 13 ಜೂನ್ 2023, 20:14 IST
ಅಕ್ಷರ ಗಾತ್ರ

ನವದೆಹಲಿ: ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು (ವಿಐಎಸ್‌ಎಲ್) ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರ ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮರೇಂದು ಪ್ರಕಾಶ್‌ ಅವರಿಗೆ ಮಂಗಳವಾರ ಮನವಿ ಮಾಡಿದರು.

ಶಿವಮೊಗ್ಗ ಜಿಲ್ಲೆಯ ವಿಶೇಷವಾಗಿ ಭದ್ರಾವತಿಯ ಆರ್ಥಿಕ ಅಭಿವೃದ್ಧಿ ಮತ್ತು ನೌಕರರ ಹಿತದೃಷ್ಟಿಯಿಂದ ಸ್ಥಾವರವನ್ನು ಮುಚ್ಚುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಸ್ಥಾವರ ಪುನಶ್ಚೇತನ ಮಾಡಲು ಅಗತ್ಯ ಬಂಡವಾಳ ಒದಗಿಸಬೇಕು ಹಾಗೂ ಸ್ಥಗಿತಗೊಂಡಿರುವ ಎಲ್ಲ ಉತ್ಪಾದನಾ ಘಟಕಗಳನ್ನು ಪುನರಾರಂಭಿಸಬೇಕು ಎಂದು ಕೋರಿದರು. 

ಕಂಪನಿಯಲ್ಲಿ ಕಾರ್ಯನಿರ್ವಾಹಕರು ಸೇರಿದಂತೆ ಒಟ್ಟು ಉದ್ಯೋಗಿಗಳ ಸಂಖ್ಯೆ 280 ಎಂದು ಸಂಸದರು ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಇದು ಒಟ್ಟು 1,340 ಗುತ್ತಿಗೆ ಕಾರ್ಮಿಕರನ್ನು ಹೊಂದಿದೆ. 10 ಸಾವಿರ ಕುಟುಂಬಗಳು ನೇರವಾಗಿ ಮತ್ತು ಪರೋಕ್ಷವಾಗಿ ತಮ್ಮ ಜೀವನೋಪಾಯಕ್ಕಾಗಿ ಈ ಉಕ್ಕು ಸ್ಥಾವರವನ್ನು ಅವಲಂಬಿಸಿವೆ ಎಂದು ತಿಳಿಸಿದ್ದಾರೆ.

ಪುನರುಜ್ಜೀವನದ ಭಾಗವಾಗಿ ಈ ಕಾರ್ಖಾನೆಗೆ ಬಳ್ಳಾರಿ ಜಿಲ್ಲೆಯಲ್ಲಿ 140 ಹೆಕ್ಟೇರ್‌ ಕಬ್ಬಿಣದ ಅದಿರು ಗಣಿಗಾರಿಕೆ ನೀಡಲು ಪ್ರಯತ್ನಿಸಲಾಗಿತ್ತು. ಆದರೆ, ದಾವೆಯ ಹಂತಕ್ಕೆ ಹೋಗಿದ್ದರಿಂದ ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯು ಉಕ್ಕು ಸ್ಥಾವರ ಮುಚ್ಚುವ ಪ್ರಕ್ರಿಯೆ ಆರಂಭಿಸಿದೆ. ಇದರ ಬದಲು ಸ್ಥಾವರನನ್ನು ಹೆಚ್ಚು ಕಾರ್ಯಸಾಧ್ಯವಾದ ಘಟಕವಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. 

ಈ ಸಂದರ್ಭದಲ್ಲಿ ಭದ್ರಾವತಿಯ ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್, ವಿಐಎಸ್ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜಗದೀಶ್ ಮತ್ತು ಇತರೆ ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್, ನೌಕರರ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಮತ್ತು ಇತರರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT