ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

7,151 ಜನವಸತಿಗಳಲ್ಲಿ ನೀರಿನ ಕ್ಷಾಮ ಸಾಧ್ಯತೆ: ಸಚಿವ ಕೃಷ್ಣ ಬೈರೇಗೌಡ

ಬರದ ಮೇಲಿನ ಚರ್ಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ತರ
Published 11 ಡಿಸೆಂಬರ್ 2023, 16:44 IST
Last Updated 11 ಡಿಸೆಂಬರ್ 2023, 16:44 IST
ಅಕ್ಷರ ಗಾತ್ರ

ವಿಧಾನಸಭೆ: ರಾಜ್ಯದ 223 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, 7,151 ಜನವಸತಿಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಪರಿಸ್ಥಿತಿ ಎದುರಿಸಲು ಈಗಿನಿಂದಲೇ ಸಿದ್ಧತೆ ಆರಂಭಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬರ ಪರಿಸ್ಥಿತಿ ಕುರಿತು ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಗೆ ಸೋಮವಾರ ಉತ್ತರ ನೀಡಿದ ಸಚಿವರು, ‘ಸಮಸ್ಯಾತ್ಮಕ ಜನವಸತಿಗಳನ್ನು ಗುರುತಿಸುವ ಕೆಲಸವನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಾಡಲಾಗಿದೆ. 6,237 ಹಳ್ಳಿಗಳು ಮತ್ತು ನಗರ ಪ್ರದೇಶಗಳ 914 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಬಹುದು ಎಂದು ಅಂದಾಜು ಮಾಡಲಾಗಿದೆ. ಈ ಎಲ್ಲ ಜನವಸತಿಗಳಲ್ಲೂ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಸಿದ್ಧತೆ ಆರಂಭಿಸಲಾಗಿದೆ’ ಎಂದರು.

ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರು ಒದಗಿಸಲು ಸಿದ್ಧತೆ ನಡೆಸಲಾಗಿದೆ. ಇದಕ್ಕಾಗಿ 3,836 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ. ವಿಕೋಪ ಪರಿಹಾರ ನಿಧಿ ಅಡಿಯಲ್ಲಿ ಶಾಸಕರ ನೇತೃತ್ವದ ಕಾರ್ಯಪಡೆಗಳಿಗೆ ಒದಗಿಸುವ ಅನುದಾನದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಅವಕಾಶವಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯುವುದಕ್ಕೂ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಸಹಾಯಕ ಎಂಜಿನಿಯರ್‌ ಮತ್ತು ಗ್ರಾಮಲೆಕ್ಕಿಗರನ್ನು ಒಳಗೊಂಡ ತಂಡವನ್ನು ರಚಿಸಲಾಗುವುದು. ಈ ತಂಡವೇ ನೀರು ಪೂರೈಕೆಯ ಜವಾಬ್ದಾರಿಯನ್ನು ನಿರ್ವಹಿಸಲಿದೆ. ಈ ಅಧಿಕಾರಿಗಳ ತಂಡದ ವರದಿ ಆಧರಿಸಿ 15 ದಿನಗಳಿಗೊಮ್ಮೆ ಬಿಲ್‌ ಪಾವತಿ ಮಾಡಲಾಗುವುದು ಎಂದರು.

ದೇಶದ ಹಲವು ರಾಜ್ಯಗಳಲ್ಲಿ ಬರಗಾಲ ಇದೆ. ಇತರ ರಾಜ್ಯಗಳಿಗಿಂತ ಮೊದಲು ಕರ್ನಾಟಕದಲ್ಲಿ ಬರಪೀಡಿತ ತಾಲ್ಲೂಕುಗಳನ್ನು ಘೋಷಿಸಲಾಗಿದೆ. ರಾಜ್ಯದಲ್ಲಿ 48 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬೆಳೆಹಾನಿ ಸಂಭವಿಸಿದೆ. ಸೆಪ್ಟೆಂಬರ್‌ 22ರಿಂದ ಮೂರು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಡಿ (ಎನ್‌ಡಿಆರ್‌ಎಫ್‌) ₹ 18,171 ಕೋಟಿ ನೆರವು ಕೋರಲಾಗಿತ್ತು. ಕೇಂದ್ರದ ಅಧಿಕಾರಿಗಳ ತಂಡ ಅಧ್ಯಯನ ವರದಿಯನ್ನೂ ನೀಡಿದೆ. ಆದರೆ, ಕೇಂದ್ರ ಸರ್ಕಾರದಿಂದ ಸ್ಪಂದನೆಯೇ ಸಿಕ್ಕಿಲ್ಲ ಎಂದು ದೂರಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯಕ್ಕೆ ನಿಗದಯಾಗಿರುವ 13 ಕೋಟಿ ಮಾನವ ದಿನಗಳನ್ನು ಬರಗಾಲದ ಕಾರಣಕ್ಕೆ 16 ಕೋಟಿ ಮಾನವ ದಿನಗಳಿಗೆ ಹೆಚ್ಚಿಸುವಂತೆ ಕೋರಿರುವ ಬೇಡಿಕೆಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಬರ ಪರಿಹಾರದ ವಿಚಾರದಲ್ಲಿ ಕೇಂದ್ರದ ಕೃಷಿ ಸಚಿವರು ಮತ್ತು ಗೃಹ ಸಚಿವರನ್ನು ಭೇಟಿಮಾಡಲು ಸಮಯಾವಕಾಶ ಕೋರಿ 12 ಪತ್ರ ಬರೆಯಲಾಗಿದೆ. ಆದರೆ, ಭೇಟಿಗೆ ಕಾಲಾವಕಾಶವನ್ನು ನೀಡಿಲ್ಲ ಎಂದು ಪತ್ರಗಳನ್ನು ಪ್ರದರ್ಶಿಸಿದರು.

ಚಿತ್ರದುರ್ಗ ಮತ್ತು ಗದಗ ಜಿಲ್ಲೆಯ ಕೆಲವು ಭಾಗಗಳಲ್ಲಿ ಮೇವಿನ ಕೊರತೆ ಕಾಣಿಸಿಕೊಂಡಿದೆ. ಪರಿಸ್ಥಿತಿ ಉಲ್ಬಣಿಸುವುದನ್ನು ತಡೆಯಲು ಹೊರ ರಾಜ್ಯಕ್ಕೆ ಮೇವು ಸಾಗಾಣಿಕೆ ನಿಷೇಧಿಸಲಾಗಿದೆ. ರೈತರು ಮೇವು ಬೆಳೆಯಲು ಉತ್ತೇಜನ ನೀಡುವುದಕ್ಕಾಗಿ 7.60 ಲಕ್ಷ ಮೇವಿನ ಕಿಟ್‌ಗಳನ್ನು ವಿತರಿಸಲಾಗಿದೆ. ಅಗತ್ಯ ಇರುವ ತಾಲ್ಲೂಕುಗಳಲ್ಲಿ ಗೋಶಾಲೆ ಅಥವಾ ಮೇವಿನ ಬ್ಯಾಂಕ್‌ ಆರಂಭಿಸಲಾಗುವುದು ಎಂದರು.

ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳ ಬಳಿ ₹ 895 ಕೋಟಿ ಅನುದಾನ ಲಭ್ಯವಿದೆ. ಕೇಂದ್ರ ಸರ್ಕಾರವು ಬರ ನಿರ್ವಹಣೆ ವಿಚಾರದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಈಗ ವಿರೋಧ ಪಕ್ಷದವರು ಬರಗಾಲದ ವಿಚಾರವನ್ನು ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

ಸಾಲ ಮರುಪಾವತಿ ಅವಧಿ ವಿಸ್ತರಣೆ

ರೈತರು ಬ್ಯಾಂಕ್‌ಗಳು ಮತ್ತು ಸಹಕಾರ ಸಂಸ್ಥೆಗಳಿಂದ ಪಡೆದಿರುವ ಕೃಷಿ ಸಾಲದ ಮರುಪಾವತಿ ಅವಧಿ ವಿಸ್ತರಣೆಗೆ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ (ಎಸ್‌ಎಲ್‌ಬಿಸಿ) ಮುಖಾಂತರ ನಿರ್ದೇಶನ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಅಲ್ಪಾವಧಿ ಸಾಲವನ್ನು ಮಧ್ಯಮಾವಧಿಗೆ ಮಧ್ಯಮಾವಧಿ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಪರಿವರ್ತಿಸುವಂತೆ ಸೂಚಿಸಲಾಗಿದೆ. ರೈತರಿಗೆ ತೊಂದರೆಯಾಗಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದರು.

ಚಳ್ಳಕೆರೆಯಿಂದ ಪರಿಹಾರ ವಿತರಣೆ

ಈಗಾಗಲೇ ಘೋಷಿಸಿರುವಂತೆ ರೈತರಿಗೆ ₹ 2000ವರೆಗಿನ ಪರಿಹಾರ ವಿತರಣೆಯನ್ನು ಚಳ್ಳಕೆರೆ ತಾಲ್ಲೂಕಿನಿಂದ ಮುಂದಿನ ವಾರದಲ್ಲಿ ಆರಂಭಿಸಲಾಗುವುದು ಎಂದು ಕೃಷ್ಣ ಬೈರೇಗೌಡ ತಿಳಿಸಿದರು. ‘ಈ ಬಾರಿ ತಂತ್ರಾಂಶ ಆಧಾರಿತ ವ್ಯವಸ್ಥೆಯ ಮೂಲಕ ಬರ ಪರಿಹಾರ ವಿತರಿಸಲಾಗುವುದು. ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ನೈಸರ್ಗಿಕ ವಿಕೋಪ ಪರಿಹಾರ ವಿತರಣೆಯಲ್ಲೂ ಅಕ್ರಮಗಳು ನಡೆದಿದ್ದವು. ಬಸವರಾಜ ಬೊಮ್ಮಾಯಿ ಅವರ ಸಹೋದರನ ಜಮೀನಿಗೆ ನೀಡಬೇಕಾದ ಪರಿಹಾರವನ್ನು ಬೇರೊಬ್ಬರಿಗೆ ವಿತರಿಸಲಾಗಿತ್ತು’ ಎಂದರು.

ಕೇಂದ್ರ ಸರ್ಕಾರಕ್ಕೂ ಜವಾಬ್ದಾರಿ ಇದೆ’

‘ಬರ ನಿರ್ವಹಣೆ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲ ಕೇಂದ್ರ ಸರ್ಕಾರಕ್ಕೂ ಜವಾಬ್ದಾರಿ ಇದೆ. ಆದರೆ ನಿಯಮಾನುಸಾರ ನೆರವು ಕೋರಿ ನಾನು ಮತ್ತು ಕಂದಾಯ ಸಚಿವರು ಎಷ್ಟು ಪತ್ರ ಬರೆದರೂ ಕೇಂದ್ರದಿಂದ ಪ್ರತಿಕ್ರಿಯೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿಯೊಬ್ಬರಿಗೆ 150 ದಿನಗಳ ಕೆಲಸ ನೀಡಲು ಅವಕಾಶ ಇದ್ದರೂ ರಾಜ್ಯದ ಮನವಿಯನ್ನು ಪುರಸ್ಕರಿಸಿಲ್ಲ ಎಂದರು. ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳ ಬಳಿ ₹ 900 ಕೋಟಿ ಲಭ್ಯವಿದೆ. ಎಷ್ಟೇ ಹಣ ಖರ್ಚಾದರೂ ನೀರು ಮೇವು ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಜನರಿಗೆ ಉದ್ಯೋಗದ ಕೊರತೆ ಆಗದಂತೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT