ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಜಾತ್ರೆಗೆ `ಗುಮ್ಮಟ ನಗರಿ' ಅಲಂಕಾರ

Last Updated 2 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ವಿಜಾಪುರ: ಅಕ್ಷರ ಜಾತ್ರೆಗೆ 'ಗುಮ್ಮಟ ನಗರಿ' ಅಂದಗೊಳ್ಳುತ್ತಿದೆ. ರಸ್ತೆಗಳ ಡಾಂಬರೀಕರಣ, ನಗರವನ್ನು ಅಲಂಕಾರಗೊಳಿಸುವ ಕಾಮಗಾರಿಗೆ ಭರದ ಚಾಲನೆ ದೊರೆತಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಈಗ ಡಾಂಬರೀಕರಣ ಕಾಮಗಾರಿಯದ್ದೇ ಸದ್ದು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಕೆಲಸ ನಡೆಯುತ್ತಿದೆ. ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಸಾಗುವ ಮಾರ್ಗದ ಕಾಂಪೌಂಡ್‌ಗಳ ಮೇಲೆ ನುಡಿ ಮುತ್ತು-ಚಿತ್ರ ಬಿಡಿಸುವ ಹಾಗೂ ರಸ್ತೆ ವಿಭಜಕದಲ್ಲಿರುವ ವಿದ್ಯುತ್ ಕಂಬಗಳಿಗೆ ಬಣ್ಣ ಬಳಿಯುವ ಕೆಲಸವೂ ಆರಂಭಗೊಂಡಿದೆ.

'ವಿಜಾಪುರ ನಗರದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳ ಡಾಂಬರೀಕರಣಕ್ಕೆ ರೂ 10 ಕೋಟಿ ಬಿಡುಗಡೆಯಾಗಿದೆ. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ ರೂ 30 ಕೋಟಿ ಹಾಗೂ ಪ್ರವಾಸೋದ್ಯಮ ಇಲಾಖೆ ರೂ 2 ಕೋಟಿ ಸೇರಿ ಒಟ್ಟು ರೂ 42 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಹಾಗೂ ನಗರ ಸೌಂದರ್ಯೀಕರಣ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ' ಎನ್ನುತ್ತಾರೆ  ಶಾಸಕ ಅಪ್ಪು ಪಟ್ಟಣಶೆಟ್ಟಿ.

'ನಗರದಲ್ಲಿ ಒಟ್ಟಾರೆ ಅಂದಾಜು 40 ಕಿ.ಮೀ ರಸ್ತೆ ರಿಪೇರಿ ಮಾಡಲಾಗುತ್ತಿದೆ. ಕಾಮಗಾರಿ ಯುದ್ಧೋಪಾದಿಯಲ್ಲಿ ಸಾಗಿದ್ದು, ಇದೇ 7ರ ವೇಳೆಗೆ ಪೂರ್ಣಗೊಳ್ಳಲಿದೆ' ಎಂದು ಹೇಳಿದರು.

'ಅಗತ್ಯ ಸಿಬ್ಬಂದಿ ಹೊಂದಿಸಿಕೊಂಡು ನಗರದಲ್ಲಿ ಸಂಪೂರ್ಣ ಸ್ವಚ್ಛತಾ ಕೆಲಸ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ' ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಂಗೂಬಾಯಿ ಮಾನಕರ ತಿಳಿಸಿದರು.

'ನಗರದಲ್ಲಿ ಸ್ವಚ್ಛತಾ ಆಂದೋಲನ ಹಮ್ಮಿಕೊಂಡಿದ್ದೇವೆ. ನಗರಸಭೆಯ ಜೊತೆಗೆ ಜಿಲ್ಲೆಯ ಇತರೆ ಪುರಸಭೆಗಳಿಂದ ಕಾರ್ಮಿಕರು, ಪಕ್ಕದ ಜಿಲ್ಲೆಯಿಂದ ಯಂತ್ರೋಪಕರಣ ಪಡೆಯುವ ಯತ್ನ ನಡೆದಿದೆ. ನಗರದ ಶಾಸಕರು-ನಗರಸಭಾ ಸದಸ್ಯರು ನಿತ್ಯ ಬೆಳಿಗ್ಗೆ ಎರಡು ಗಂಟೆ ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸಿ ಜನತೆಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ' ಎನ್ನುತ್ತಾರೆ ವಿಜಾಪುರ ನಗರಸಭೆಯ ಅಧ್ಯಕ್ಷ ಪರಶುರಾಮ ರಜಪೂತ.

`ಪ್ರಮುಖ ರಸ್ತೆಗಳ ವಿಭಜಕಗಳಿಗೆ ಕಪ್ಪು-ಬಿಳಿ ಬಣ್ಣ ಬಳಿಯಲಾಗುತ್ತಿದೆ. ಮಧ್ಯದಲ್ಲಿರುವ ವಿದ್ಯುತ್ ಕಂಬಗಳನ್ನು ಬಣ್ಣದಿಂದ ಅಲಂಕರಿಸುತ್ತಿದ್ದು, ಅವುಗಳಿಗೆ ನಾಡಿನ ಹಿರಿಯ ಸಾಹಿತಿಗಳ ಭಾವಚಿತ್ರದ ಫ್ಲೆಕ್ಸ್ ಅಳವಡಿಸುವ ಚಿಂತನೆ ಇದೆ' ಎಂದು ವಿಜಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭೀಮಾಶಂಕರ ಹದನೂರ ವಿವರಿಸಿದರು.

`ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಸಾಗುವ ಮಾರ್ಗವೂ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬರುವ ಕಾಂಪೌಂಡ್‌ ಗಳಿಗೆ ಹೊಸದಾಗಿ ಬಣ್ಣ ಹಚ್ಚುವಂತೆ ಆಯಾ ಆಸ್ತಿಗಳ ಮಾಲೀಕರು ಹಾಗೂ ಸರ್ಕಾರಿ ಕಚೇರಿಗಳಿಗೆ ಪತ್ರ ಬರೆದು ವಿನಂತಿಸಲಾಗಿತ್ತು. ಅದಕ್ಕೆ ಅವರೆಲ್ಲ ಸ್ಪಂದಿಸಿದ್ದಾರೆ. ಆ ಗೋಡೆಗಳ ಮೇಲೆ ಲೇಖಕರು-ಸಾಹಿತಿಗಳ ನುಡಿ ಮುತ್ತು ಬರೆಸಲಾಗುತ್ತಿದೆ. ಜಿಲ್ಲೆಯ ಪ್ರೇಕ್ಷಣಿಯ ಹಾಗೂ ಐತಿಹಾಸಿಕ ಸ್ಮಾರಕಗಳ ಚಿತ್ರ ಬಿಡಿಸಲಾಗುತ್ತದೆ' ಎಂದು ಈ ಸಮಿತಿಯ ಡಾ.ವಿ.ಎಂ. ಬಾಗಾಯತ ಹೇಳಿದರು.

'ಒಟ್ಟಾರೆ 37 ಕಲಾವಿದರು ಗೋಡೆ ಬರಹ ಕಾರ್ಯದಲ್ಲಿ ನಿರತರಾಗಿದ್ದಾರೆ. 150ಕ್ಕೂ ಹೆಚ್ಚು ಕಡೆ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಲಾಗುತ್ತಿದ್ದು, ಈಗಾಗಲೇ ಶೇ 50ರಷ್ಟು ಕೆಲಸ ಪೂರ್ಣಗೊಂಡಿದೆ' ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT