ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಗ್ಗಂಟಾದ ಪ್ರತಿಮೆ ಸ್ಥಳಾಂತರ ವಿವಾದ

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದ ಮುಂದಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಸ್ಥಳಾಂತರ ಮಾಡದಿದ್ದರೆ `ನಮ್ಮ ಮೆಟ್ರೊ~ ನೆಲದಡಿ ನಿಲ್ದಾಣದ ಕಾಮಗಾರಿ ಸುಮಾರು ಆರು ತಿಂಗಳ ಕಾಲ ವಿಳಂಬವಾಗಲಿದೆ. ಜತೆಗೆ 100 ಕೋಟಿ ರೂಪಾಯಿ ಅಧಿಕ ವೆಚ್ಚ ಬೀಳಲಿದೆ!

ಹೀಗೆ ಹೇಳುತ್ತಿರುವುದು ಬೇರೆ ಯಾರೂ ಅಲ್ಲ; ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಶಿವಶೈಲಂ!

`ಪ್ರತಿಮೆ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಒಂದೆಡೆ ಮೀನಮೇಷ ಎಣಿಸುತ್ತಿದೆ. ಮತ್ತೊಂದಡೆ ಇನ್ನು ಹತ್ತು ದಿನಗಳಲ್ಲಿ ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಮೆಟ್ರೊ ಕಾಮಗಾರಿಯನ್ನೇ ಸ್ಥಗಿತಗೊಳಿಸಬೇಕಾಗುತ್ತದೆ~ ಎಂದು ಶಿವಶೈಲಂ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್. ವಿ.ರಂಗನಾಥ್ ಮತ್ತು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವೆಂಕಟಯ್ಯ ಅವರಿಗೆ ಇದೇ 25ರಂದು ಅವರು ಈ ಪತ್ರ ಬರೆದಿದ್ದಾರೆ.

ಮೆಟ್ರೊ ನೆಲದಡಿ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಾಗಲೇ ವಿಧಾನಸೌಧದ ಪೂರ್ವದಲ್ಲಿನ ಜವಾಹರಲಾಲ್ ನೆಹರು, ಅಂಬೇಡ್ಕರ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗಳನ್ನು ಸ್ಥಳಾಂತರಿಸಲೂ ನಿರ್ಧರಿಸಲಾಗಿತ್ತು.

ಈ ಸಂಬಂಧ ಎರಡು ಆದೇಶಗಳನ್ನೂ ಸರ್ಕಾರ ಹೊರಡಿಸಿದೆ. 2009ರ ಜೂನ್ 4 ಮತ್ತು 2010ರ ಫೆ. 6ರಂದು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದ್ದ ಸರ್ಕಾರ, ಇದೊಂದು ತಾತ್ಕಾಲಿಕ ಸ್ಥಳಾಂತರ. ಮೆಟ್ರೊ ಕಾಮಗಾರಿ ಮುಗಿದ ನಂತರ ಯಥಾಪ್ರಕಾರ ಮೊದಲಿದ್ದ ಜಾಗಗಳಲ್ಲೇ ಈ ಪ್ರತಿಮೆಗಳನ್ನು ಪ್ರತಿಷ್ಠಾಪಿಸುವುದಾಗಿ ಹೇಳಿತ್ತು.

ಆ ಪ್ರಕಾರವೇ ನೆಹರು ಮತ್ತು ಬೋಸ್ ಪ್ರತಿಮೆಗಳ ಸ್ಥಳಾಂತರ ಆಗಿದೆ. ಈಗ ಬಾಕಿ ಇರುವುದು ಅಂಬೇಡ್ಕರ್ ಪ್ರತಿಮೆ. ಇದರ ಸ್ಥಳಾಂತರಕ್ಕೆ ದಲಿತ ಸಂಘರ್ಷ ಸಮಿತಿಯ ಕೆಲ ಮುಖಂಡರು ವಿರೋಧ ವ್ಯಕ್ತಪಡಿಸಿರುವ ಕಾರಣ ಅದು ನೆನೆಗುದಿಗೆ ಬಿದ್ದಿದೆ. ಈ ಕುರಿತು ಹಲವು ಸಂಧಾನ ಸಭೆಗಳನ್ನು ನಡೆಸಿದರೂ ತೀರ್ಮಾನ ತೆಗೆದುಕೊಳ್ಳಲು ಸರ್ಕಾರಕ್ಕೆ ಆಗಿಲ್ಲ.

ಗೊಂದಲಗಳ ನಡುವೆಯೇ ಮೆಟ್ರೊ ಕಾಮಗಾರಿ ಕೂಡ ನಡೆಯುತ್ತಿದ್ದು, ಪ್ರಮುಖ ಹಂತಕ್ಕೆ ಬಂದು ನಿಂತಿದೆ. ಅಂಬೇಡ್ಕರ್ ಪ್ರತಿಮೆ ಸನಿಹದಲ್ಲೇ ಬಂಡೆ ಇದ್ದು, ಅದನ್ನು ತೆಗೆಯುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಬಂಡೆ ಒಡೆಯುವ ಸಂದರ್ಭದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾನಿಯಾಗುವ ಅಪಾಯ ಇದೆ. ಹೀಗಾಗಿ ಅದನ್ನು ತೆರವುಗೊಳಿಸಿ ಎನ್ನುವುದು ಮೆಟ್ರೊ ಮನವಿ. ಪ್ರತಿಮೆ ಸ್ಥಳಾಂತರ ಮಾಡದೆ ಮೆಟ್ರೊ ಕಾಮಗಾರಿ ಸಾಧ್ಯವೇ ಎಂಬುದರ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ತಾಂತ್ರಿಕ ಸಮಿತಿಯನ್ನೂ ಮೆಟ್ರೊ ರಚಿಸಿತ್ತು. ಈ ಸಮಿತಿಯೂ ಪ್ರತಿಮೆ ಸ್ಥಳಾಂತರ ಅನಿವಾರ್ಯ ಎಂದು ವರದಿ ನೀಡಿದೆ. ಇಷ್ಟಾದರೂ ಯಾರೂ ಒಪ್ಪುತ್ತಿಲ್ಲ ಎನ್ನುವುದು ಮೆಟ್ರೊ ಅಳಲು.

ಮೂರು ಪ್ರತಿಮೆಗಳ ಸ್ಥಳಾಂತರ ಸಲುವಾಗಿ ಬಿಎಂಆರ್‌ಸಿಎಲ್ ರಾಜ್ಯ ಸರ್ಕಾರಕ್ಕೆ 94.15 ಲಕ್ಷ ರೂಪಾಯಿ ಸಂದಾಯ ಮಾಡಿದೆ. ಸ್ಥಳಾಂತರದ ಜವಾಬ್ದಾರಿಯನ್ನು ಲೋಕೋಯೋಗಿ ಇಲಾಖೆಗೆ ವಹಿಸಿದೆ. ಆದರೆ, ಎರಡು ಪ್ರತಿಮೆ ಸ್ಥಳಾಂತರಕ್ಕೆ ಒಪ್ಪಿದ ಸರ್ಕಾರ ಅಂಬೇಡ್ಕರ್ ಪ್ರತಿಮೆ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ.
 
ನಷ್ಟ ಹೇಗೆ?: ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ಮಾಡದಿದ್ದರೆ, ಅದಕ್ಕೆ ಹಾನಿಯಾಗದಂತೆ ಹೆಚ್ಚು ನಿಗಾ ವಹಿಸಿ ಕೆಲಸ ಮಾಡಬೇಕಾಗುತ್ತದೆ. ಹೀಗೆ ಮಾಡುವಾಗ ಅದು ವಿಳಂಬ ಕೂಡ ಆಗುತ್ತದೆ. ಆಗುವ ವಿಳಂಬದಿಂದಲೂ ಯೋಜನೆಯ ವೆಚ್ಚ ಹೆಚ್ಚಾಗಿ, ಸುಮಾರು 100 ಕೋಟಿ ರೂಪಾಯಿ ಅಧಿಕ ಹೊರೆ ಬೀಳಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

ಮೆಟ್ರೊ ನೆಲದಡಿ ನಿಲ್ದಾಣ ನಿರ್ಮಾಣಕ್ಕೆ ಖರ್ಚು ಮಾಡುವುದೇ 150 ಕೋಟಿ ರೂಪಾಯಿ. ಇನ್ನು ವಿಳಂಬದಿಂದ ರೂ 100 ಕೋಟಿ ಹೆಚ್ಚಾಗಿ, ಅದರ ಒಟ್ಟು ವೆಚ್ಚ ರೂ 250 ಕೋಟಿಗೆ ಏರಿದರೆ ಗತಿ ಏನು ಈ ಪ್ರಶ್ನೆ ಸರ್ಕಾರವನ್ನೂ ಕಾಡುತ್ತಿದೆ.

ಸಚಿವರು ಏನನ್ನುತ್ತಾರೆ?: ಶಿವಶೈಲಂ ಅವರ ಪತ್ರದ ಬಗ್ಗೆ ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. `ಪ್ರಜಾವಾಣಿ~ ಜತೆ ಮಾತನಾಡಿದ ಅವರು `ಪ್ರತಿಮೆ ಸ್ಥಳಾಂತರ ಮಾಡದೆ ಮೆಟ್ರೊ ನಿಲ್ದಾಣ ನಿರ್ಮಿಸಲು ಸಾಕಷ್ಟು ಅವಕಾಶಗಳಿವೆ. ಆ ಬಗ್ಗೆ ಏಕೆ ಶಿವಶೈಲಂ ಯೋಚಿಸುತ್ತಿಲ್ಲ. ತಾಂತ್ರಿಕ ನೈಪುಣ್ಯ ಬಳಸಿ, ಅಂಬೇಡ್ಕರ್ ಪ್ರತಿಮೆ ಸನಿಹದ ಬಂಡೆ ಒಡೆಯಬಹುದು. ಅದು ಬಿಟ್ಟು ಕೇವಲ ಪ್ರತಿಮೆ ಸ್ಥಳಾಂತರಕ್ಕೇ ಏಕೆ ಪಟ್ಟುಹಿಡಿದಿದ್ದಾರೆ~ ಎಂದು ಅವರು ಪ್ರಶ್ನೆ ಮಾಡಿದರು.

`ಸ್ಥಳಾಂತರ ಮಾಡದೆ ಕಾಮಗಾರಿ ನಡೆಸಲು ಸಾಧ್ಯವೇ ಇಲ್ಲ ಎಂದು ತಾಂತ್ರಿಕವಾಗಿ ಪರಿಣತರು ಹೇಳಿದಾಗ ಮಾತ್ರ ದಲಿತ ಮುಖಂಡರನ್ನು ಸಮಾಧಾನಪಡಿಸಿ, ಕಾಮಗಾರಿಗೆ ಅವಕಾಶ ನೀಡಲಾಗುವುದು. ಅದಕ್ಕೂ ಮುನ್ನವೇ ಸ್ಥಳಾಂತರ ಅಂದರೆ ಅದಕ್ಕೆ ನಾನು ಕೂಡ ಒಪ್ಪಲ್ಲ. ಈ ವಿಷಯದಲ್ಲಿ ದಲಿತ ಮುಖಂಡರ ವಿರೋಧ ಇದೆ~ ಎಂದರು.

ಕಾಮಗಾರಿ ಮುಗಿದ ನಂತರ ಮೊದಲಿದ್ದ ಜಾಗದಲ್ಲೇ ಪ್ರತಿಮೆ ಸ್ಥಾಪಿಸುವ ಸರ್ಕಾರಿ ಆದೇಶದ ಬಗ್ಗೆ ದಲಿತ ಮುಖಂಡರಿಗೆ ವಿಶ್ವಾಸ ಇಲ್ಲವೇ ಎಂದು ಕೇಳಿದ ಪ್ರಶ್ನೆಗೆ `ಎಷ್ಟು ಹೇಳಿದರೂ ಕೇಳುತ್ತಿಲ್ಲ. ನಾನು ಕೂಡ ಅದೇ ಸಮಾಜದ ವ್ಯಕ್ತಿ. ಹೀಗಾಗಿ ಎಲ್ಲವನ್ನೂ ಗೌರವಿಸಬೇಕಾಗಿದೆ. ಸದ್ಯದಲ್ಲೇ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇನೆ~ ಎಂದು ವಿವರಣೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT