ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡೇ ಇಜ್ತೆಮಾ; ತಾತ್ಕಾಲಿಕ ಗ್ರಾಮ ಸಜ್ಜು

ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಧಾರ್ಮಿಕ ಸಮಾವೇಶ: 2.5 ಲಕ್ಷ ಮಂದಿ ಭಾಗಿ
Last Updated 11 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಬಾಗಲಕೋಟೆ: ಕರ್ನಾಟಕದ ತಬ್ಲೀಗ್ ಜಮಾತ್‌ನ ಆತಿಥ್ಯದಲ್ಲಿ ಫೆಬ್ರುವರಿ 16ರಿಂದ 18ರವರೆಗೆ ನಡೆಯಲಿರುವ ಮುಸ್ಲಿಮ್ ಸಮುದಾಯದ ಅಂತಾ ರಾಷ್ಟ್ರೀಯ ಮಟ್ಟದ ಧಾರ್ಮಿಕ ಸಮಾವೇಶ ‘ಬಡೇ ಇಜ್ತೆಮಾ’ಗೆ (ಆಲಮ್ ತಬಿಲೀಗಿ ಉಮೋಮಿ ಇಜ್ತೆಮಾ)ಸಮೀಪದ ಕಲಾದಗಿಯಲ್ಲಿ 650 ಎಕರೆ ವಿಸ್ತೀರ್ಣದ ತಾತ್ಕಾಲಿಕ ಗ್ರಾಮ ತಲೆಎತ್ತಿದೆ.

‘ಸಮಾವೇಶದ ಸಂಘಟನೆಗೆ ಕಲಾ ದಗಿಯ ಆಜಾದ್ ಬಿಲಾಲ್ ಎಜು ಕೇಶನ್ ಅಂಡ್ ವೆಲ್‌ಫೇರ್‌ ಟ್ರಸ್ಟ್ ಕೈಜೋಡಿಸಿದೆ. ವಿದೇಶದಿಂದ ಹಾಗೂ ದೇಶದ ಎಲ್ಲ ರಾಜ್ಯಗಳಿಂದಲೂ ಸಮುದಾಯದವರು ಬರಲಿದ್ದಾರೆ. ಮಹಿಳೆಯರಿಗೆ ಅವಕಾಶವಿಲ್ಲ. ರಾಜಕಾರಣಿಗಳಿಗೂ ಆಹ್ವಾನ ನೀಡಿಲ್ಲ’ ಎಂದು ವಿಜಯಪುರದ ತಬ್ಲೀಗ್‌ ಜಮಾತ್‌ನ ಮುಖಂಡ ಅಬ್ದುಲ್ ಯಾಸಿನ್‌ ಮೊಮಿನ್ ಹೇಳುತ್ತಾರೆ.

‘ದೆಹಲಿಯ ಹಜರತ್‌ ಮೌಲಾನಾ ಸಾದ್‌ಸಾಬ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಮೂರು ದಿನಗಳ ಕಾಲ 2.5 ಲಕ್ಷ ಜನರಿಗೆ ಊಟ–ವಸತಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೊನೆಯ ದಿನ ಹೆಚ್ಚಿನ ಜನ ಬರುವ ನಿರೀಕ್ಷೆ ಇದೆ. ಸಮಾವೇಶಕ್ಕೆ ಬರುವವರ ದೇಖರೇಕಿಗೆ 17 ಸಾವಿರ ಸ್ವಯಂ ಸೇವಕರು ಸಜ್ಜುಗೊಂಡಿದ್ದಾರೆ’ ಎಂದರು.

‘ಕಳೆದ 20 ದಿನಗಳಿಂದ ತಾತ್ಕಾಲಿಕ ಗ್ರಾಮ ನಿರ್ಮಾಣ ಕಾರ್ಯ ನಡೆದಿದೆ. ರಾಜ್ಯ ಹಾಗೂ ಪಕ್ಕದ ಮಹಾರಾಷ್ಟ್ರದಿಂದ ಸಮುದಾಯದವರು ಸ್ವಯಂ ಪ್ರೇರಿತವಾಗಿ ಬಂದು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ’ ಎಂದು ಆಜಾದ್‌ ಬಿಲಾಲ್‌ ಟ್ರಸ್ಟ್‌ನ ಅಧ್ಯಕ್ಷ ಬಂದೇ ನವಾಜ್‌ ಸೌದಾಗರ ಹೇಳುತ್ತಾರೆ.

‘90 ಎಕರೆ ವ್ಯಾಪ್ತಿಯಲ್ಲಿ ಪೆಂಡಾಲ್ ಹಾಕಲಾಗಿದೆ. 34 ಕಡೆ ಊಟದ ಹಾಲ್‌ಗಳನ್ನು ಮಾಡಲಾಗಿದೆ. ಜೊತೆಗೆ ಪಕ್ಕದ ಪುನರ್ವಸತಿ ಕೇಂದ್ರದ 305 ಎಕರೆ ಜಾಗವನ್ನು ಪಾರ್ಕಿಂಗ್‌ಗಾಗಿ ಬಳಸಿಕೊಳ್ಳಲು ಅನುಮತಿ ಕೇಳಿದ್ದೇವೆ’ ಎನ್ನುತ್ತಾರೆ.

‘ನೀರಿನ ವ್ಯವಸ್ಥೆಗಾಗಿ ತಲಾ 14 ಲಕ್ಷ ಲೀಟರ್ ಸಾಮರ್ಥ್ಯದ ಎಂಟು ಕೊಳಗಳನ್ನು ನಿರ್ಮಿಸಿದ್ದು, 80 ಕಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆರು ಕೊಳವೆ ಬಾವಿಗಳಿಂದ ನಿರಂತರವಾಗಿ ನೀರು ಪೂರೈಕೆಯಾಗಲಿದೆ. 2,500 ಶೌಚಾಲಯ ಸಿದ್ಧಗೊಂಡಿವೆ’ ಎಂದು ಸಂಘಟಕರು ಹೇಳುತ್ತಾರೆ.

ನಾಗರಿಕ ಹಿತರಕ್ಷಣಾ ವೇದಿಕೆ ವಿರೋಧ

ಬಡೇ ಇಜ್ತೆಮಾ ವಿರೋಧಿಸಿ ಹಿಂದೂ ಜಾಗರಣಾ ವೇದಿಕೆ, ವಿಶ್ವಹಿಂದೂ ಪರಿಷತ್ ಬಾಗಲಕೋಟೆಯಲ್ಲಿ ಈಗಾಗಲೇ ನಾಗರಿಕ ಹಿತರಕ್ಷಣಾ ವೇದಿಕೆ ರಚಿಸಿಕೊಂಡು ಸರಣಿ ಪ್ರತಿಭಟನೆ ನಡೆಸಿವೆ. ಜಿಲ್ಲಾಡಳಿತ ಭಾನುವಾರ ಆಯೋಜಿಸಿದ್ಸ ಶಾಂತಿಸಭೆ ಬಹಿಷ್ಕರಿಸಿದ್ದು,ಇಜ್ತೆಮಾ ನಡೆಯುವ ದಿನ ಕಲಾದಗಿಯನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿವೆ.

‘ಕಲಾದಗಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಹಿಂದೂ– ಮುಸ್ಲಿಮರು ಸಾಮರಸ್ಯದಿಂದ ಬದುಕುತ್ತಿದ್ದೇವೆ. ತಬ್ಲೀಗ್ ಜಮಾತ್ ಮೂಲಭೂತವಾದಿ ಸಂಘಟನೆ. ಇಜ್ತೆಮಾಗೆ ಹೊರದೇಶಗಳಿಂದಲೂ ಧಾರ್ಮಿಕ ಮುಖಂಡರು ಬರುತ್ತಿದ್ದಾರೆ. ಅವರು ಯಾರು ಏನು ಎಂಬುದು ಗೊತ್ತಿಲ್ಲ. ಅಲ್ಲಿನ ಪ್ರಚೋದನಕಾರಿ ಭಾಷಣ ಕೇಳಿ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ’ ಎಂದು ಹಿಂದೂ ಜಾಗರಣಾ ವೇದಿಕೆ ಉತ್ತರ ಪ್ರಾಂತ್ಯದ ಕಾರ್ಯದರ್ಶಿ ಅಶೋಕ ಮುತ್ತಿನಮಠ ಪ್ರಶ್ನಿಸುತ್ತಾರೆ.

‘ವಿಶ್ವಾಸ ಗಳಿಸುವ ಮಾರ್ಗ’

‘ಮೊಹಮ್ಮದ್ ಪೈಗಂಬರರು ಯಾವ ರೀತಿ ಜೀವನ ನಡೆಸಲು ಹೇಳಿದ್ದರು ಎಂಬುದನ್ನು ಪ್ರತಿಯೊ ಬ್ಬರಿಗೂ ಮುಟ್ಟಿಸಲು ಇಜ್ತೆಮಾ ಆಯೋಜಿಸಲಾಗಿದೆ. ಸಾಧ್ಯವಾದಷ್ಟು ಸ್ವಚ್ಛವಾಗಿರು ವುದು ಹಾಗೂ ನಾವು ಬದುಕುವ ನೆಲದ ಬಗ್ಗೆ ನಿಷ್ಠೆ ಹೊಂದಿರುವುದು ಮಾತ್ರ ಪೈಗಂಬರರ ವಿಶ್ವಾಸಗಳಿಸಲು ಇರುವ ಮಾರ್ಗ ಎಂಬುದನ್ನು ಹೇಳಿಕೊಡ ಲಾಗುತ್ತದೆ. ಇದೊಂದು ಸಾಮಾನ್ಯ ಮನುಷ್ಯನೊಬ್ಬ ಶರಣನಾಗುವ ಪ್ರಕ್ರಿಯೆ’ ಎಂದು ಸಂಘಟಕಅಬ್ದುಲ್ ಯಾಸಿನ್‌ ಮೊಮಿನ್ ಹೇಳುತ್ತಾರೆ.

ಪೂರ್ವಾಪರ ಪರಿಶೀಲನೆ: ಎಸ್‌ಪಿ

‘ತಬ್ಲೀಗ್ ಕಾನೂನುಬದ್ಧ ನೋಂದಣಿ ಸಂಘಟನೆ. ಪೂರ್ವಾಪರ ಪರಿಶೀಲಿಸಿಯೇ ಅನುಮತಿ ನೀಡಲಾಗಿದೆ. ಜೊತೆಗೆ 30 ಷರತ್ತುಗಳನ್ನು ಹಾಕಿದ್ದೇವೆ. ಇಜ್ತೆಮಾ ಸ್ಥಳದಲ್ಲಿ ಪೊಲೀಸ್ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಅಲ್ಲಿನ ಎಲ್ಲ ಧಾರ್ಮಿಕ ಚಟುವಟಿಕೆಗಳನ್ನು ಇಲಾಖೆಯಿಂದಲೂ ವಿಡಿಯೊ ರೆಕಾರ್ಡಿಂಗ್ ಮಾಡಲಾಗುತ್ತಿದೆ’ ಎನ್ನುತ್ತಾರೆಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್.

‘ದಕ್ಷಿಣಾ ಆಫ್ರಿಕಾ, ಮಲೇಶಿಯಾ, ಮಧ್ಯಪ್ರಾಚ್ಯ ರಾಷ್ಟ್ರಗಳಿಂದ 300 ಮಂದಿ ಬರಲಿದ್ದಾರೆ. ಅವರ ಪೂರ್ವಾಪರ ಪರಿಶೀಲಿಸುವ ಜೊತೆಗೆ ವಲಸೆ ಅಧಿಕಾರಿಗಳಿಗೂ ಅವರ ಬಗ್ಗೆ ಮಾಹಿತಿ ನೀಡಲಾಗಿದೆ. ಯಾವುದೇ ಪ್ರಚೋದನಕಾರಿ ಸಂಗತಿಗೂ ಅಲ್ಲಿ ಅವಕಾಶವಿಲ್ಲ. ಅನಗತ್ಯವಾಗಿ ಶಾಂತಿ– ಸುವ್ಯವಸ್ಥೆ ಕದಡುವವರ ವಿರುದ್ಧವೂ ಕ್ರಮ ನಿಶ್ಚಿತ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT