ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತ್ವ ಅಲ್ಲಗಳೆದರೆ ಅಸ್ಮಿತೆ ಉಳಿಯದು: ಪ್ರೊ.ವಲೇರಿಯನ್‌ ರೋಡ್ರಿಗಸ್‌ ಪ್ರತಿಪಾದನೆ

Last Updated 2 ಡಿಸೆಂಬರ್ 2018, 16:17 IST
ಅಕ್ಷರ ಗಾತ್ರ

ಮಂಗಳೂರು: ‘ಬಹುತ್ವದಲ್ಲೇ ಭಾರತದ ಅಸ್ಮಿತೆ ಇದೆ. ಬಹುತ್ವವನ್ನು ಅಲ್ಲಗಳೆದು ದೇಶದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ, ರಾಜ್ಯಶಾಸ್ತ್ರಜ್ಞ ಪ್ರೊ.ವಲೇರಿಯನ್‌ ರೋಡ್ರಿಗಸ್‌ ಪ್ರತಿಪಾದಿಸಿದರು.

ನಗರದ ಶಾಂತಿಕಿರಣದಲ್ಲಿ ಭಾನುವಾರ ನಡೆದ ಜನನುಡಿ–2018ರ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ‘ಬಹುತ್ವ ಎಂಬುದು ಧಾರ್ಮಿಕ ಆಚಾರ, ವಿಚಾರಗಳಿಗೆ ಸೀಮಿತವಾದುದಲ್ಲ. ಬಹುಸಂಖ್ಯಾತರ ನೆಲೆಯಲ್ಲಿ ಬಹುತ್ವವನ್ನು ತಿರಸ್ಕರಿಸುವುದರಿಂದ ವಿಭಿನ್ನ ಸಮುದಾಯಗಳ ನಡುವೆ ವೈಷಮ್ಯ ಹೆಚ್ಚುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಬಹುತ್ವವನ್ನು ರಕ್ಷಿಸುವುದಕ್ಕಾಗಿ ಗಟ್ಟಿಯಾದ ಪರ್ಯಾಯಗಳನ್ನು ಕಂಡುಕೊಳ್ಳುವ ಅನಿವಾರ್ಯ ಸ್ಥಿತಿಯನ್ನು ದೇಶ ಈಗ ಎದುರಿಸುತ್ತಿದೆ. ಪ್ರಜಾಪ್ರಭುತ್ವದ ತತ್ವಗಳ ಆಧಾರದಲ್ಲಿ ಅಸ್ಮಿತೆಯ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಬಹುತ್ವವನ್ನು ರಕ್ಷಿಸಬಲ್ಲ ಚಳವಳಿಯನ್ನು ಮುನ್ನಡೆಸಲು ದೇಶಕ್ಕೆ ಒಂದು ಬಲಿಷ್ಠವಾದ ಹೊಸ ರಾಜಕೀಯ ಪಕ್ಷದ ಅಗತ್ಯವೂ ಇದೆ ಎಂದು ಹೇಳಿದರು.

1970ರ ದಶಕದವರೆಗೂ ಜವಾಹರಲಾಲ್‌ ನೆಹರೂ ಅವರ ಪ್ರತಿಪಾದನೆ ಆಧರಿಸಿದ ರಾಷ್ಟ್ರೀಯ ಒಡಂಬಡಿಕೆಯ ನೆರಳಿನಲ್ಲಿ ಭಾರತ ಮುನ್ನಡೆಯಿತು. ಆಗ ಬಹುತ್ವಕ್ಕೆ ಧಕ್ಕೆ ಆಗಲಿಲ್ಲ. ಆದರೆ, 1980ರ ದಶಕದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಹೊಸ ದಾರಿಗಳನ್ನು ಕಂಡುಕೊಂಡು ತನ್ನ ನೆಲೆ ವಿಸ್ತರಿಸಿಕೊಂಡಿತು. ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದ ಒಂದು ಪಕ್ಷ 18 ವರ್ಷಗಳಲ್ಲಿ ದೇಶವ್ಯಾಪಿ ವಿಸ್ತರಣೆ ಹೊಂದಲು ಇದು ವೇದಿಕೆ ಒದಗಿಸಿತು ಎಂದರು.

ದೇಶದ ದುರ್ಗತಿಗೆ ಇಸ್ಲಾಂ ಮತ್ತು ಮುಸ್ಲಿಂ ರಾಜರು ಕಾರಣ ಎಂಬ ಭಾವನೆಯನ್ನು ಆರ್‌ಎಸ್‌ಎಸ್‌ ಜನರ ನಡುವೆ ಬಲವಾಗಿ ಬಿತ್ತಿತು. ಪಾಶ್ಚಿಮಾತ್ಯ ಶಿಕ್ಷಣ ಕ್ರಮದಿಂದ ಭಾರತ ಅಪಾಯಕ್ಕೆ ಸಿಲುಕುತ್ತಿದೆ ಎಂಬ ಭಾವನೆಯನ್ನು ಹರಡಿ, ಅದರ ಬಲದಲ್ಲಿ ವೈದಿಕ ಸಂಸ್ಕೃತಿಯ ಅನುಕರಣೆಗೆ ಎಡೆಮಾಡಿತು. ಜಾತ್ಯತೀತ ರಾಜಕಾರಣ ಪೂರ್ಣವಾಗಿ ಅಲ್ಪಸಂಖ್ಯಾತರ ಪರ ಇರುತ್ತದೆ ಎಂಬ ತಪ್ಪುಕಲ್ಪನೆಯನ್ನು ಹಬ್ಬಿಸಿತು. ಕಾಂಗ್ರೆಸ್‌ ಸರ್ಕಾರ ಅನುಷ್ಠಾನಕ್ಕೆ ತಂದ ಆರ್ಥಿಕ ಉದಾರೀಕರಣವನ್ನು ಹಿಂದುತ್ವದ ಆರ್ಥಿಕತೆಯ ವಿಸ್ತರಣೆಗೆ ಬಳಸಿಕೊಂಡಿತು ಎಂದು ವಿಶ್ಲೇಷಿಸಿದರು.

ಈಗ ದೇಶ ಎದುರಿಸುತ್ತಿರುವ ಸವಾಲುಗಳಿಗೆ ಸಂವಿಧಾನದ ನೆರಳಿನಲ್ಲೇ ಉತ್ತರ ಕಂಡುಕೊಳ್ಳಬೇಕಿದೆ. ಒಕ್ಕೂಟ ವ್ಯವಸ್ಥೆಯನ್ನು ಎಲ್ಲ ಕಾಲದಲ್ಲೂ ಮೇಲಿನಿಂದ ಕೆಳಕ್ಕೆ ಅವಲೋಕಿಸಲಾಗುತ್ತಿದೆ. ಅದನ್ನು ಪುನರ್‌ ವಿಮರ್ಶೆಗೆ ಒಳಪಡಿಸಿ ಕೆಳಗಿನಿಂದ ಮೇಲಕ್ಕೆ ನೋಡಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಂತಹ ದೊಡ್ಡ ಸಂಪತ್ತು ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಇದಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಗಳ ಸೃಷ್ಟಿಸುತ್ತಿದ್ದಾರೆ:

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ ಮಟ್ಟು ಮಾತನಾಡಿ, ‘ದೇಶದ ಎದುರಿಸುತ್ತಿರುವ ಸವಾಲುಗಳಿಗೆ ಕಾರ್ಲ್ ಮಾರ್ಕ್ಸ್, ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್‌ ಮತ್ತು ರಾಮಮನೋಹರ ಲೋಹಿಯಾ ಚಿಂತನೆಗಳಲ್ಲಿ ಪರಿಹಾರವಿದೆ. ಈ ಎಲ್ಲ ತತ್ವಗಳ ಅನುಯಾಯಿಗಳು ಪರಸ್ಪರ ಸಂವಾದದ ಮೂಲಕ ಒಗ್ಗೂಡಿ ನಡೆಯಬೇಕು. ಆದರೆ, ಪ್ರತಿಗಾಮಿ ಶಕ್ತಿಗಳು ಈ ನಾಲ್ಕೂ ಜನರ ಅನುಯಾಯಿಗಳ ನಡುವೆ ಜಗಳ ಸೃಷ್ಟಿಸಿ ಲಾಭ ಪಡೆಯುತ್ತಿದ್ದಾರೆ’ ಎಂದರು.

ಏಕಸಂಸ್ಕೃತಿಯನ್ನು ಪ್ರತಿಪಾದಿಸುವ ರಾಜಕೀಯ ಶಕ್ತಿಗಳನ್ನು ಎದುರಿಸುವ ಶಕ್ತಿ ಇರುವುದು ಎಡಪಕ್ಷಗಳಿಗೆ ಮಾತ್ರ. ಆದರೆ, ಎಡಪಕ್ಷಗಳಿಗೆ ಹೋರಾಟದಲ್ಲಿ ಇರುವ ಅನುಭವ ರಾಜಕಾರಣದಲ್ಲಿ ಇಲ್ಲ. ಕಾಂಗ್ರೆಸ್‌ ಪ್ರಾದೇಶಿಕವಾಗಿ ವಿಸ್ತರಣೆಯಾಗದೇ ಇರುವುದರಿಂದ ಮಿತಿಗಳ ನಡುವೆ ಸಿಲುಕಿದೆ. ಇದು ರಾಜಕೀಯವಾಗಿ ದೇಶವನ್ನು ಅಪಾಯಕ್ಕೆ ತಳ್ಳಿದೆ ಎಂದು ಹೇಳಿದರು.

ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿಯ ಕಾರ್ಯಸೂಚಿಯೇ ಇಲ್ಲ. ನಾಲ್ಕೂವರೆ ವರ್ಷಗಳಲ್ಲಿ ಮಾಡಿದ ಕೆಲಸಗಳ ಪಟ್ಟಿ ನೀಡಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಮತ್ತೆ ಮಂದಿರದ ಹೆಸರಿನಲ್ಲಿ ಜನರನ್ನು ವಂಚಿಸುವ ಕೆಲಸಕ್ಕೆ ಕೈಹಾಕಿದೆ ಎಂದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಘಟಕದ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ಮತ್ತು ಸಿಐಟಿಯು ರಾಜ್ಯ ಮಂಡಳಿ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT