ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ?

Last Updated 21 ಡಿಸೆಂಬರ್ 2014, 19:57 IST
ಅಕ್ಷರ ಗಾತ್ರ

ಬೆಂಗಳೂರು: 2015ರ ಜನವರಿಯಲ್ಲಿ ಬೆಂಗಳೂರಿ­ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುವ ಸಾಧ್ಯತೆ ಇದೆ.

ಮೇ ತಿಂಗಳಿನಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೆಹಲಿಯ ಹೊರಗೆ ನಡೆಯುತ್ತಿರುವ ಮೊದಲ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಇದಾಗಲಿದೆ. ಆಗಸ್ಟ್‌ನಲ್ಲಿ ದೆಹಲಿ­ಯಲ್ಲಿ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆ ನಡೆದಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ­ರಾಗಿ ಅಮಿತ್ ಷಾ ಅವರ ಆಯ್ಕೆಯನ್ನು ಅನುಮೋದಿಸುವು­ದಕ್ಕಾಗಿ ಈ ಸಭೆ ನಡೆದಿತ್ತು.

‘ಕರ್ನಾಟಕವು ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಪ್ರಮುಖ ರಾಜ್ಯ­ವಾಗಿದೆ. ಇಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸುವ ಮೂಲಕ ರಾಜಕೀಯ ಸಂದೇಶ­ವೊಂದನ್ನು ರವಾನಿಸಲು ಅಮಿತ್ ಷಾ ನಿರ್ಧರಿಸಿದ್ದಾರೆ. ಅದಕ್ಕಾಗಿ ಬೆಂಗಳೂರಿ­ನಲ್ಲಿ ಸಭೆ ನಡೆಸಲು ಯೋಚಿಸಿದ್ದಾರೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ, ಹರಿಯಾಣ ವಿಧಾನ­ಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ, ದಕ್ಷಿಣ ಭಾರತದ ಮೇಲೆ ಹಿಡಿತ ಸಾಧಿಸುವ ಯೋಚನೆ­ಯಲ್ಲಿದೆ. ಕರ್ನಾಟಕವನ್ನು ದಕ್ಷಿಣ ಭಾರತ ಪ್ರವೇಶದ ಹೆಬ್ಬಾಗಿಲು ಎಂದು ಬಿಜೆಪಿ ನಾಯಕತ್ವ ಭಾವಿಸಿದೆ. ಅದು ಈ ಯೋಚನೆಗೆ ಪ್ರಮುಖ ಕಾರಣ ಎನ್ನುತ್ತವೆ ಮೂಲಗಳು.

ಈ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರನ್ನು ಸಂಪರ್ಕಿಸಿದಾಗ, ‘ಬೆಂಗಳೂರಿನಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸುವ ಕುರಿತು ಯೋಚಿಸಿರುವ ಬಗ್ಗೆ ನಮಗೆ ಸಂದೇಶ ಬಂದಿದೆ. ಆದರೆ ಅಂತಿಮ ತೀರ್ಮಾನಕ್ಕಾಗಿ ನಾವು ಕಾಯುತ್ತಿದ್ದೇವೆ. 2008ರ ಸೆಪ್ಟೆಂಬರ್‌­ನಲ್ಲಿ ಬೆಂಗಳೂರಿನಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿತ್ತು’ ಎಂದರು.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ­ಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಅವರ ಹೊರತಾಗಿ 245 ಸದಸ್ಯರಿದ್ದಾರೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ವಿವಿಧ ರಾಜ್ಯ ಘಟಕಗಳ ಅಧ್ಯಕ್ಷರು, ಹಿರಿಯ ನಾಯಕರು ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ.

ಪ್ರಮುಖರ ಸಮಿತಿ ಸಭೆ: ಗೋಹತ್ಯೆ ನಿಷೇಧ ಮಸೂದೆಗಳನ್ನು ಹಿಂದಕ್ಕೆ ಪಡೆದಿರುವುದು ಮತ್ತು ಮಠಗಳ ಮೇಲೆ ನಿಯಂತ್ರಣ ಸಾಧಿಸಲು ಮಸೂದೆ ಮಂಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸುವ ಕುರಿತು ಚರ್ಚಿಸಲು ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿ ಸೋಮವಾರ ದೆಹಲಿಯಲ್ಲಿ ಸಭೆ ನಡೆಸಲಿದೆ.

ಪ್ರಮುಖರ ಸಮಿತಿಯ ಸದಸ್ಯರಾದ ಪ್ರಹ್ಲಾದ ಜೋಶಿ, ಅನಂತಕುಮಾರ್, ಡಿ.ವಿ.ಸದಾನಂದ ಗೌಡ, ಬಿ.ಎಸ್‌. ಯಡಿಯೂರಪ್ಪ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸುವುದಕ್ಕಾಗಿ ದೆಹಲಿಯಲ್ಲಿರುತ್ತಾರೆ. ಆದ್ದರಿಂದ ಅಲ್ಲಿಯೇ ಪ್ರಮುಖರ ಸಮಿತಿ (ಕೋರ್ ಕಮಿಟಿ) ಸಭೆ ನಡೆಸಲು ನಿರ್ಧರಿಸಲಾಗಿದೆ.

‘ಗೋಹತ್ಯೆ ನಿಷೇಧಿಸಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ರೂಪಿಸಿದ್ದ ಮಸೂದೆಗಳನ್ನು ಕಾಂಗ್ರೆಸ್ ಸರ್ಕಾರ ಹಿಂದಕ್ಕೆ ಪಡೆ­ದಿದೆ. ನಮ್ಮ ಪಕ್ಷದ ವಿರೋಧದ ನಡುವೆಯೂ ಕಾಂಗ್ರೆಸ್ ಈ ಕ್ರಮ ಕೈಗೊಂಡಿದೆ. ಮಠಗಳ ಮೇಲೆ ನಿಯಂತ್ರಣ ಸಾಧಿ­ಸುವ ಪ್ರಸ್ತಾವದ ಮಸೂದೆಯನ್ನೂ ನಾವು ತೀವ್ರವಾಗಿ ವಿರೋಧಿ­ಸುತ್ತೇವೆ. ರಾಜ್ಯ ಸರ್ಕಾರದ ಈ ಕ್ರಮಗಳ ವಿರುದ್ಧ ಪ್ರಬಲ ಹೋರಾಟ ರೂಪಿಸುವ ಬಗ್ಗೆ ಸಭೆ­ಯಲ್ಲಿ ಚರ್ಚೆ ನಡೆಸಲಾಗುವುದು’ ಎಂದು ಜೋಶಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT