ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲು ಲಿಪಿ ಪಡೆದಿದ್ದು ಕನ್ನಡ

ಸಂಶೋಧನೆ ನಡೆದರೆ ಸತ್ಯ ಹೊರಬೀಳಲಿದೆ
Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ
ಧಾರವಾಡ: ‘ಕನ್ನಡದಲ್ಲಿ ಹಲ್ಮಿಡಿ ಶಾಸನವೇ ಮೊದಲು ಎಂಬ ನಂಬಿಕೆ ನನ್ನ ಜೀವಿತ ಕಾಲದಲ್ಲೇ ಅಳಿದು, ಕನ್ನಡ ಅತ್ಯಂತ ಹಳೆಯ ಭಾಷೆ ಎಂಬುದು ಹೊರಬೀಳುವ ವಿಶ್ವಾಸವಿದೆ’ ಎಂದು ಇತಿಹಾಸ ತಜ್ಞ ಷ. ಶೆಟ್ಟರ್ ಹೇಳಿದರು.
 
ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಭಾನುವಾರ ಅವರು ಪ್ರಾಕೃತ -ಸಂಸ್ಕೃತ -ಕನ್ನಡ- ಅನುಸಂಧಾನ ಗೋಷ್ಠಿಯಲ್ಲಿ ಮಾತನಾಡಿದರು.
 
‘ಹಲ್ಮಿಡಿ ಶಾಸನ ಕನ್ನಡದಲ್ಲಿ ಅತಿ ಪುರಾತನವಾದುದು ಎಂಬ ಬಲವಾದ ನಂಬಿಕೆ ಈಗಾಗಲೇ ಮೂಡಿದೆ. ಅದನ್ನು ಕಿತ್ತುಹಾಕಬೇಕಾದರೆ ಅನೇಕ ಮಂದಿ ಸಂಶೋಧಕರು ಪ್ರಯತ್ನ ಪಡಬೇಕಿದೆ. ಏಕೆಂದರೆ ಹಲ್ಮಿಡಿ ಶಾಸನವನ್ನು ಯಾವ ರಾಜ ಕೆತ್ತಿಸಿದ್ದು, ಅದರ ದಿನಾಂಕ ಸೇರಿ ಯಾವುದರ ಇತಿಹಾಸವೂ ಇಲ್ಲ’ ಎಂದರು.
 
ಕನ್ನಡ ಗಂಗರ ಕಾಲದಲ್ಲಿ ಲಿಪಿಯ ರೂಪ ಪಡೆಯಿತು. ಅದು 3ನೇ ಶತಮಾನ ಕಳೆದು 4ನೇ ಶತಮಾನ ಆರಂಭ ಆಗುತ್ತಿದ್ದ ಕಾಲಘಟ್ಟ. ಇದನ್ನು ನಿರೂಪಿಸಬೇಕಾದರೆ ಅನೇಕ ಸಾಕ್ಷ್ಯಗಳನ್ನು ನೀಡಬೇಕಾಗಿದೆ ಎಂದು ಪ್ರತಿಪಾದಿಸಿದರು.
 
ದ್ರಾವಿಡ ಭಾಷೆಗಳಲ್ಲಿ ಕನ್ನಡವೂ ಒಂದು ಎಂಬುದರ ಬಗ್ಗೆ ಯಾವ ವಿವಾದವೂ ಇಲ್ಲ. ಆದರೆ, ಹಿಂದೆ ಸಂಸ್ಕೃತದಂತೆ ದ್ರಾವಿಡ ಭಾಷೆಗೂ ಲಿಪಿ ಇರಲಿಲ್ಲ. ದೇಶದ ಎಲ್ಲ ಭಾಷೆಗಳಿಗಿಂತ ಮೊದಲು ಲಿಪಿ ಪಡೆದುದು ಕನ್ನಡ. ಅದಕ್ಕೆ ಅಶೋಕನ ಕೊಡುಗೆ ಸಾಕಷ್ಟಿದೆ ಎಂದು ಶೆಟ್ಟರ್ ಹೇಳಿದರು.
 
ಮಹಾವೀರ ತನ್ನ ಅನುಯಾಯಿಗಳಿಗೆ ಜನರ ಭಾಷೆಯಲ್ಲಿಯೇ ವ್ಯವಹರಿಸುವಂತೆ ಸೂಚನೆ ನೀಡಿದ್ದ. ಕನ್ನಡದಲ್ಲಿಯೇ ಅನೇಕ ಕೃತಿಗಳು ಬಂದವು. ಮಹಾವೀರನ ಸಂದೇಶವನ್ನೂ ಇಲ್ಲಿಯ ಭಾಷೆಯಲ್ಲೇ ಪಸರಿಸಲಾಯಿತು. ಬುದ್ಧ ಅದೇ ಮಾತನ್ನು ಹೇಳಿದ್ದರೂ ಆತನ ಅನುಯಾಯಿಗಳು ಕನ್ನಡದ ಬದಲು ಸಂಸ್ಕೃತವನ್ನು ಆಯ್ದುಕೊಂಡರು. ಆದರೆ ಸಂಸ್ಕೃತ ಜನಭಾಷೆ ಆಗದ ಕಾರಣ ಬೌದ್ಧ ಧರ್ಮವೂ ಇಲ್ಲಿ ಅಳಿದುಹೋಯಿತು ಎಂದು ವಿವರಿಸಿದರು.
 
ಭಾಷಾ ಸಾಹಿತ್ಯದ ಬಗ್ಗೆ ನಿಮಗೆ ಕುತೂಹಲ ಮೂಡಿದ್ದು ಹೇಗೆ ಎಂದು ಗೋಷ್ಠಿಯ ನಿರ್ದೇಶಕ ಶಾಂತಿನಾಥ ದಿಬ್ಬದ ಅವರು ಪ್ರಶ್ನಿಸಿದಾಗ, ‘ಯಾರೂ ಬರೆಯದ ವಿಷಯ ಕುರಿತು  ಬರೆಯಬೇಕು ಮತ್ತು ಈಗಾಗಲೇ ಬಂದಿರುವ ಸಾಹಿತ್ಯದ ಬಗ್ಗೆ ಅಸಮಾಧಾನ ಇರುವುದರಿಂದ ಸಮಾಧಾನಕ್ಕಾಗಿ ಬರೆಯಬೇಕು ಎಂಬ ವಿಚಾರಗಳು ನನ್ನನ್ನು ಪ್ರೇರೇಪಿಸಿದವು’ ಎಂದು ಶೆಟ್ಟರ್ ಉತ್ತರಿಸಿದರು.
 
**
ಕನ್ನಡ ಸಾಯುವ ಭಾಷೆಯ ಪಟ್ಟಿಯಲ್ಲಿ ಇಲ್ಲ. ಅದು ಮುಂದೆಯೂ ಸಾಯುವ ಭಾಷೆ ಅಲ್ಲ. ಕನ್ನಡಕ್ಕೆ ಏನೂ ಆಗುವುದಿಲ್ಲ.
-ಷ.ಶೆಟ್ಟರ್, ಇತಿಹಾಸ ತಜ್ಞ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT