ಬಾಗಲಕೋಟೆ: ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಬಾಗಲಕೋಟೆ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್ಒ) ಎಚ್.ಬಿ. ನಾಯಕ ವಿರುದ್ಧ ನವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನೊಂದ ಮಹಿಳೆಯು ಮಂಗಳವಾರ ಸಂಜೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಡಿಎಫ್ಒ ತಲೆಮರೆಸಿಕೊಂಡಿದ್ದಾರೆ. ಮಹಿಳೆಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲಾಗಿತ್ತು.
ಈ ಮಹಿಳೆ ಬಾದಾಮಿಯಲ್ಲಿ ವಾಸ ವಾಗಿದ್ದು, ಕಚೇರಿ ಕೆಲಸದ ನಿಮಿತ್ತ ಆಗಾಗ ಬಾಗಲಕೋಟೆಯ ನವನಗರದ ಜಿಲ್ಲಾಡಳಿತ ಭವನದಲ್ಲಿರುವ ಸಾಮಾಜಿಕ ಅರಣ್ಯ ವಿಭಾಗದ ಕಚೇರಿಗೆ ಬಂದು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳೆಯ ಪರಿಚಯ ಮಾಡಿಕೊಂಡ ಡಿಎಫ್ಒ, ಆಗಾಗ ಮೊಬೈಲ್ ಕರೆಗಳನ್ನು ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಯು ತಮ್ಮ ಮೊಬೈಲ್ಗೆ ಕರೆ ಮಾಡಿ ಮಾತನಾಡಿರುವುದನ್ನು ನೊಂದ ಮಹಿಳೆ ಧ್ವನಿಮುದ್ರಿಸಿ ಕೊಂಡಿದ್ದು, ಅದನ್ನು ಪೊಲೀಸರಿಗೆ ಸಾಕ್ಷಿಯಾಗಿ ನೀಡಿದ್ದಾರೆ.