ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರದ ನಟ ಸಾರ್ವಭೌವ ಚಿಟ್ಟಾಣಿ!

ಕೊನೆಯ ಬಾರಿ ಮುಖಕ್ಕೆ ಬಣ್ಣ ಹಚ್ಚಿ ಗೌರವಿಸಿದ ಯಕ್ಷಪ್ರಿಯರು
Last Updated 4 ಅಕ್ಟೋಬರ್ 2017, 20:09 IST
ಅಕ್ಷರ ಗಾತ್ರ

‘ಪ್ರೀತಿಯ ಸಾವಿಗೆ’ 1960ನೇ ಇಸವಿಯಲ್ಲಿ ಯಕ್ಷರಾಜ ಚಿಟ್ಟಾಣಿ ರಾಮಚಂದ್ರ ಹೆಗಡೆ ತಮ್ಮ ಪ್ರೇಯಸಿಗೆ ಬರೆದ ಮೊದಲ ಪತ್ರದ ಮೊದಲ ಸಾಲು ಇದು. ‘ಅಯ್ಯೋ ಮೊದಲ ಪತ್ರದಲ್ಲಿಯೇ ಸಾವಿನ ಸುದ್ದಿ ಯಾಕೆ ಎಂದು ಅದನ್ನು ಅವರು ‘ಪ್ರೀತಿಯ ಸವಿಗೆ’ ಎಂದು ತಿದ್ದಿದರು. ಈಗ ಸಾವು ಅವರಿಗೆ ಪ್ರಿಯವಾಗಿದೆ. ಅಭಿಮಾನಿಗಳಿಗೆ ಸವಿ ನೆನಪು ಮಾತ್ರ ಉಳಿದಿದೆ.

ಚಿಟ್ಟಾಣಿ ಅವರು ಪ್ರೇಮ ಪತ್ರವನ್ನೂ ಬೇರೆಯವರಿಂದಲೇ ಬರೆಸಿದ್ದರು. ಶಾಲೆಗೆ ಹೋಗಿದ್ದು ಎರಡನೇ ತರಗತಿಯಾದರೂ ಯಕ್ಷಗಾನ ರಂಗದಲ್ಲಿ ಅವರು ಎಂದೆಂದಿಗೂ ರಾಜನಾಗಿಯೇ ಮೆರೆದವರು.

ಅಭಿಜಾತ ಕಲಾವಿದನ ಪ್ರೀತಿಯ ಸವಿ ಮುಂದುವರಿಯಲಿಲ್ಲ. ಅವರ ಪ್ರೀತಿಯ ‘ಸವಿ’ಗೂ ಮೊದಲೇ ಬೇರೆ ಹೆಣ್ಣನ್ನು ಮದುವೆಯಾದರು. ಆದರೆ ಅವರ ಹೃದಯದಲ್ಲಿ ಒಬ್ಬ ಪ್ರಿಯತಮ ನಿರಂತರವಾಗಿ ನೆಲೆಯಾಗಿಬಿಟ್ಟ. ಅದಕ್ಕೇ ಅವರಿಗೆ ವಯಸ್ಸು ಎಂಬತ್ತಾದರೂ ಯಕ್ಷಗಾನ ರಂಗದಲ್ಲಿ ಅವರೇ ಶೃಂಗಾರ ರಾಜ. ಕಾಳಿದಾಸ ಪ್ರಸಂಗದ ಕಲಾಧರನಿಂದ ಆರಂಭವಾದ ಅವರ ಶೃಂಗಾರ ವೈಭವ ಭಸ್ಮಾಸುರ, ಕೀಚಕ, ರಾವಣ, ಸಾಲ್ವ, ರುದ್ರಕೋಪ, ಕಾರ್ತವೀರ್ಯಾರ್ಜುನ ಮುಂತಾದ ಪಾತ್ರಗಳಲ್ಲಿ ಮುಂದುವರಿಯಿತು. ಭಸ್ಮಾಸುರನ ಪಾತ್ರದಲ್ಲಿ ಅವರನ್ನು ಮೀರಿಸುವವರೇ ಇಲ್ಲ. ಈಗಲೂ ಭಸ್ಮಾಸುರ ಎಂದರೆ ಥಟ್ಟನೆ ನೆನಪಾಗುವುದು ಚಿಟ್ಟಾಣಿ ರಾಮಚಂದ್ರ ಹೆಗಡೆ. ಮೋಹಿನಿಯನ್ನು ಕಂಡಾಗ ಅವರು ನೀಡುವ ಪ್ರತಿಕ್ರಿಯೆ ಈಗಲೂ ಇನ್ನೊಬ್ಬ ಕಲಾವಿದನಿಗೆ ಸಿದ್ಧಿಸಿಲ್ಲ.

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಚಿಟ್ಟಾಣಿಯಲ್ಲಿ ಜನಿಸಿದ (18–9–1933) ರಾಮಚಂದ್ರ ಹೆಗಡೆ ಶಾಲೆ ಬದಲಿಗೆ ಗೇರು ಗುಡ್ಡದಲ್ಲಿ ತೆರಳಿ ಯಕ್ಷಗಾನ ಕುಣಿದರು. ಬಾಳೆಗದ್ದೆ ರಾಮಕೃಷ್ಣ ಭಟ್ಟರಲ್ಲಿ ಯಕ್ಷಗಾನವನ್ನು ಕಲಿತಿದ್ದರೂ ಆಗಿನ ಕಾಲದ ಪ್ರಸಿದ್ಧ ಕಲಾವಿದರಾದ ಕೊಂಡದಕುಳಿ ರಾಮ ಹೆಗಡೆ, ಲಕ್ಷ್ಮಣ ಹೆಗಡೆ, ಮೂಡ್ಕಣಿ ನಾರಾಯಣ ಹೆಗಡೆ, ಕರ್ಕಿ ಪರಮಯ್ಯ ಹಾಸ್ಯಗಾರ, ಕೆರೆಮನೆ ಶಿವರಾಮ ಹೆಗಡೆ, ಮೂರೂರು ದೇವರು ಹೆಗಡೆ ಮುಂತದ ಕಲಾವಿದರನ್ನು ನೋಡಿ ಕಲಿತಿದ್ದೇ ಹೆಚ್ಚು.

ಮೂಡ್ಕಣಿ, ಮೂರೂರು, ಗುಂಡುಬಾಳ, ಕೆರೆಮನೆ, ಕೊಳಗಿಬೀಸ, ಅಮೃತೇಶ್ವರಿ, ಸಾಲಿಗ್ರಾಮ, ಪಂಚಲಿಂಗೇಶ್ವರ, ಬಚ್ಚಗಾರ, ಮಾರಿಕಾಂಬ, ಪೆರ್ಡೂರು, ಬಂಗಾರಮಕ್ಕಿ ಮೇಳಗಳಲ್ಲಿ ದುಡಿದ ರಾಮಚಂದ್ರ ಹೆಗಡೆ ಮೇಳದಿಂದ ಮೇಳಕ್ಕೆ ಬೆಳೆದವರು.

ಗದಾಯುದ್ಧದ ಕೌರವ, ಮಾಗದವಧೆಯ ಮಾಗದ, ಕಾರ್ತವೀರ್ಯಾರ್ಜುನ, ಕೀಚಕ, ಭಸ್ಮಾಸುರ, ಕಂಸ, ಘಟೋತ್ಕಜ ಮುಂತಾದ ಪಾತ್ರಗಳಲ್ಲಿ ತಮ್ಮದೇ ಶೈಲಿಯನ್ನು ರೂಢಿಸಿಕೊಂಡಿದ್ದ ಅವರು ಯಕ್ಷಗಾನದಲ್ಲಿ ಸೂಪರ್ ಸ್ಟಾರ್ ಪಟ್ಟವನ್ನು ಅಲಂಕರಿಸಿದವರು. ಕೊನೆಯ ಕ್ಷಣದವರೆಗೂ ಅವರು ಯಕ್ಷತಾರೆಯಾಗಿಯೇ ಮೆರೆದವರು.

ಚಿಟ್ಟಾಣಿ ಅವರದ್ದು ಯಾವುದೇ ವೇಷವಾಗಿರಲಿ. ಅದರ ಪ್ರವೇಶವೇ ಚೆಂದ. ಆರ್ಭಟದ ಭಸ್ಮಾಸುರ, ಕೀಚಕ ಆಗಲಿ, ಭಯದಿಂದ ತತ್ತರಿಸುವ ಗದಾಯುದ್ಧದ ಕೌರವನಾಗಲಿ, ಶೃಂಗಾರ ರಾವಣನಾಗಲಿ, ರುದ್ರಕೋಪನಾಗಲಿ, ಮಾಗಧನಾಗಲಿ ಅವರು ರಂಗಕ್ಕೆ ಬಂದರೆ ಮಿಂಚಿನ ಸಂಚಾರ. ಗದಾಯುದ್ಧದ ಪ್ರಸಂಗದಲ್ಲಿ ‘ಕುರುರಾಯ ಇದನ್ನೆಲ್ಲಾ ಕಂಡು ಸಂತಾಪದಿ ಮರುಗಿ ತನ್ನೆಯ ಭಾಗ್ಯವೆನುತ’ ಎಂಬ ಪದ್ಯಕ್ಕೆ ತಮ್ಮ ಐದಡಿ ಶರೀರವನ್ನು ಒಂದೂವರೆ ಅಡಿಗೆ ಇಳಿಸಿ ‘ಒಳ ಸರಿದ ಒಳ ಸರಿದ’ ಎಂದು ರಂಗದಿಂದ ಹಿಮ್ಮುಖವಾಗಿ ಚಲಿಸುವ ಅವರ ಪರಿ ಇನ್ನು ನೆನಪು ಮಾತ್ರ.

ಕಾರ್ತವೀರ್ಯಾರ್ಜುನ ಪ್ರಸಂಗದಲ್ಲಿ ಎಲ್ಲ ಪ್ರೇಕ್ಷಕರೂ ಕಾಯುತ್ತಿದ್ದುದು ‘ನೀಲಗಗನದೋಳ್ ಮೇಘಗಳು’ ಪದ್ಯಕ್ಕೆ. ಇದಕ್ಕೆ ಚಿಟ್ಟಾಣಿಯವರ ನೃತ್ಯ ಎಂದೆಂದಿಗೂ ಮಾಸದು. ನಿತ್ಯ ನೂತನ. ಎಷ್ಟು ಬಾರಿ ನೋಡಿದರೂ ಚೆಂದ. ನವಿಲು ನೃತ್ಯ, ವನ ವಿಹಾರವನ್ನು ಅವರು ತೋರಿಸುವ ಚಳಕ ಅಭಿಮಾನಿಗಳಲ್ಲಿ ನೆನೆಸಿಕೊಳ್ಳುವಾಗಲೆಲ್ಲಾ ಪುಳಕ. ಮೇಘ, ದುಂಬಿ, ನವಿಲು, ಲತೆ, ಹರಿವ ನದಿ ಎಲ್ಲವೂ ರಂಗದಲ್ಲಿ ಪ್ರತ್ಯಕ್ಷವಾಗುವಂತೆ ಮಾಡುವ ಚಿಟ್ಟಾಣಿ ಪರಿಗೆ ಸೈ ಎನ್ನದವರೇ ಇಲ್ಲ.

ಭಸ್ಮಾಸುರ ಮೋಹಿನಿ ಪ್ರಸಂಗದಲ್ಲಿ ಮೋಹಿನಿಯನ್ನು ಕಂಡಾಗ ಭಸ್ಮಾಸುರ ಜೊಲ್ಲು ಸುರಿಸುವುದನ್ನು ಯಾರು ಎಷ್ಟೇ ಟೀಕಿಸಿದರೂ ಆ ಕ್ಷಣಕ್ಕೆ ಅಭಿನಯವನ್ನು ಮೆಚ್ಚದವರಿಲ್ಲ. ಮೋಹಿನಿಯನ್ನು ಒಮ್ಮೆ, ಆಕಾಶದತ್ತ ಚಂದ್ರನ ಕಡೆಗೆ ಒಮ್ಮೆ ನೋಡುವ ಅವರ ರೀತಿ, ಒಯ್ಯಾರ, ಪ್ರೇಮ ಭಿಕ್ಷೆ ಬೇಡುವ ಕ್ಷಣ ಎಲ್ಲವೂ ಅಮರ. ‘ತರುಣಿಮಣಿಯ ಪಾರ್ವತಿಯ ಹಂಗೇಕೆ ತಾನಿವಳ ಹರ್ಷದಿಂದೊಡಗೂಡಿ’ ಎಂಬ ಪದ್ಯಕ್ಕೆ ಹಾಗೂ ‘ಸದ್ದಿಲ್ಲದೆ ಮದ್ದನರೆವೆ’ ಎನ್ನುವ ಪದ್ಯಕ್ಕೆ ಅವರ ಕುಣಿತ ಅನ್ಯಾದೃಶ.

ಕಂಸನ ಪಾತ್ರದಲ್ಲಿ ಕಂಗೊಳಿಸುತ್ತಿದ್ದ ಚಿಟ್ಟಾಣಿ ಕೀಚಕನಾಗಿ ‘ಇವಳಾವ ಲೋಕದ ಸತಿಯೋ ಮತ್ತೀ ಯುವತಿಯ ಪಡೆದವಳೇನ್ ಪುಣ್ಯವತಿಯೋ’ ಎಂಬ ಪದ್ಯಕ್ಕೆ ಅವರ ನೃತ್ಯ ಚಿರಕಾಲ ನೆನಪಿನಲ್ಲಿ ಉಳಿಯುವಂತಹದು.

ನೂರು ಮಾತಿನಲ್ಲಿ ಹೇಳುವಂತಹದ್ದನ್ನು ಕೇವಲ ಒಂದು ಕಣ್ಣೋಟದಿಂದ ಕೈ ಚಲನೆಯಿಂದ ಭಾವ ಭಂಗಿಯಿಂದ ಹುಬ್ಬು ಕುಣಿಸುವುದರಿಂದ ಹೇಳುತ್ತಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ದೇಹ ಮೇಣದ ದೇಹದಂತೆ ಹೇಗೆ ಬೇಕಾದರೂ ಬಾಗುತ್ತಿತ್ತು. ಹಗಲು ಹೊತ್ತಿನಲ್ಲಿ ಅವರನ್ನು ನೋಡಿದರೆ ‘ಇವರೇನಾ ರಂಗದ ರಾಜ’ ಎಂದು ಹುಬ್ಬೇರಿಸುವಷ್ಟು ಸಣಕಲಾಗಿದ್ದ ಅವರು ರಂಗಕ್ಕೆ ಬಂದರೆ ಮಿಂಚು ಹರಿಸುತ್ತಿದ್ದರು.
ಚಿಟ್ಟಾಣಿ ಅವರು ಯಕ್ಷಗಾನದ ಚೌಕಟ್ಟನ್ನು ಮೀರಿದವರಲ್ಲ. ಯಾವುದೇ ಪಾತ್ರಕ್ಕೂ ಹೊಸ ಅರ್ಥ ಕೊಡಲು ಹಂಬಲಿಸಿದವರೂ ಅಲ್ಲ. ಕೀಚಕ ಕಾಮುಕ ಎಂದರೆ ಕಾಮುಕ ಅಷ್ಟೆ. ಅದಕ್ಕೆ ತಕ್ಕಂತೆಯೇ ಅವರ ಅಭಿನಯ. ಕೌರವ ಕೆಟ್ಟವ ಎಂದರೆ ಕೆಟ್ಟವ ಅಷ್ಟೆ. ಸಾಲ್ವ ಭಗ್ನ ಪ್ರೇಮಿ ಅಷ್ಟೆ. ಭಸ್ಮಾಸುರ ರಾಕ್ಷಸ ಅಷ್ಟೆ. ಯಾವ ಪಾತ್ರವನ್ನು ಪುರಾಣಕ್ಕೆ ಮೀರಿ ಅವರು ಬೆಳೆಸುತ್ತಿರಲಿಲ್ಲ. ಅದಕ್ಕಾಗಿಯೇ ಅವರು ಯಕ್ಷಗಾನವನ್ನು ಗೆಲ್ಲಿಸುತ್ತಿದ್ದರು. ಚಿಟ್ಟಾಣಿ ಅವರ ಇನ್ನೊಂದು ಬಹುಮುಖ್ಯವಾದ ಮತ್ತು ಎಲ್ಲರೂ ಗಮನಿಸಬೇಕಾದ ಗುಣ ಎಂದರೆ ರಂಗಕ್ಕೆ ಬಂದ ಮೇಲೆ ತಮಗೆ ಗೊತ್ತಿದ್ದಷ್ಟನ್ನೂ ಪ್ರದರ್ಶಿಸುತ್ತಿದ್ದ ಕಲಾವಿದ ಅವರು. ಪ್ರೇಕ್ಷಕರನ್ನು ಗಮನಿಸಿ ಅವರಿಗೆ ತಕ್ಕನಾಗಿ ನೃತ್ಯ ಮಾಡುವ, ಕಸರತ್ತು ಪ್ರಯೋಗಿಸುವ ಜಾಯಮನ ಅವರದ್ದಲ್ಲ. ಅದಕ್ಕಾಗಿಯೇ ಅವರು ಪ್ರೇಕ್ಷಕರ ಕಣ್ಮಣಿ ಕಲಾವಿದ.

ಎಲ್ಲ ಕಲಾವಿದರಿಗೆ ಸರ್ಕಾರ ಮಾಸಾಶನ ನೀಡಿದರೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಅವರ ಅಭಿಮಾನಿಗಳೇ ಮಾಸಾಶನ ನೀಡುತ್ತಿದ್ದರು. ಯಕ್ಷಗಾನ ಕ್ಷೇತ್ರಕ್ಕೆ ಮೊದಲ ಬಾರಿಗೆ ಪದ್ಮಶ್ರೀ ಗೌರವ ತಂದುಕೊಟ್ಟ, ವಿದೇಶಗಳಲ್ಲಿಯೂ ಯಕ್ಷಗಾನದ ಸವಿಯನ್ನು ಹಂಚಿದ ಕಲಾವಿದ ಈಗ ಬಾರದ ಲೋಕಕ್ಕೆ ತೆರಳಿದ್ದಾರೆ.

ಯಕ್ಷಗಾನ ಕಲಾಭಿಮಾನಿಗಳಿಗೆ ಸವಿ ಸವಿ ನೆನಪನ್ನು ಉಳಿಸಿ ಹೊರಟಿದ್ದಾರೆ. ನಿರಾಸೆಗೆ ಕಾರಣವಿಲ್ಲ. ಯಕ್ಷಗಾನದ ಸವಿ ಹಂಚಲು ಮಗ ಸುಬ್ರಹ್ಮಣ್ಯ, ಮೊಮ್ಮಗ ಕಾರ್ತೀಕ ಸಿದ್ಧರಾಗಿದ್ದಾರೆ.

ಮೊದಲ ರಾತ್ರಿಯೇ ಯಕ್ಷಗಾನ!

ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಪ್ರೇಮ ಪ್ರಕರಣ ಮನೆಯವರಿಗೆ ಗೊತ್ತಾಗಿ ತಕ್ಷಣವೇ ಕಡತೋಕದ ಮಳ್ಳಜ್ಜಿ ನಾರಾಯಣ ಹೆಗಡೆ ಅವರ ಕಿರಿಯ ಮಗಳು ಸುಶೀಲ ಅವರೊಂದಿಗೆ ಮದುವೆ ಮಾಡಿಬಿಟ್ಟರು. ಮೊದಲ ರಾತ್ರಿಯೇ ಮಾಡಗೇರಿಯಲ್ಲಿ ‘ಕಾಳಿದಾಸ ಚರಿತ್ರೆ’ ಯಕ್ಷಗಾನ. ಚಿಟ್ಟಾಣಿ ಅವರದ್ದು ಕಲಾಧರನ ಪಾತ್ರ. ಮೊದಲ ರಾತ್ರಿ ಕಲಾಧರ ಮಿಂಚಿದ. ಇದಕ್ಕೆ ಪತ್ನಿಯ ವಿರೋಧವೇನೂ ಇರಲಿಲ್ಲ. ಯಾಕೆಂದರೆ ಸುಶೀಲ ಅವರಿಗೂ ಯಕ್ಷಗಾನದಲ್ಲಿ ಆಸಕ್ತಿ ಇತ್ತು. ಸುಶೀಲ ಅವರ ತಂದೆ ಯಕ್ಷಗಾನ ಕಲಾವಿದರಾಗಿದ್ದರು. ಅವರು ಚಿಟ್ಟಾಣಿ ಅವರಿಗೆ ಮದುವೆ ಸಂದರ್ಭದಲ್ಲಿ 48 ಗೆಜ್ಜೆಗಳನ್ನು ನೀಡಿದ್ದರು. ಚಿಟ್ಟಾಣಿ ಅವರು ಕೊನೆಯ ಕಾಲದವರೆಗೂ ಅವುಗಳನ್ನು ಜೋಪಾನ ಮಾಡಿದ್ದರು.

ಸಣ್ಣ ಮಾಣಿ ಸಾಯ್ಲಿ ಪಾಪ!
ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಚಿಕ್ಕಂದಿನಿಂದಲೂ ಯಕ್ಷಗಾನ ನೋಡುವ ತಲುಬು. ಮನೆಯವರ ಕಣ್ಣು ತಪ್ಪಿಸಿ ಯಕ್ಷಗಾನಕ್ಕೆ ಹೋಗುತ್ತಿದ್ದರು. ಯಾರಾದರೂ ಕಂಡುಬಿಟ್ಟರೆ ‘ಸಣ್ಣ ಮಾಣಿ ಸಾಯ್ಲಿ ಪಾಪ’ ಎಂದು ಸುಮ್ಮನಾಗಿ ಬಿಡುತ್ತಿದ್ದರಂತೆ. ರಾತ್ರಿ ನೋಡಿದ ಯಕ್ಷಗಾನ ಹಗಲಿನಲ್ಲಿಯೂ ಮನದಲ್ಲಿಯೇ ಕುಣಿಯುತ್ತಿತ್ತು. ಅದಕ್ಕೇ ಗೇರು ಬೆಟ್ಟವೇ ರಂಗಸ್ಥಳವಾಗಿ ಮೆರೆಯುತ್ತಿತ್ತು. ಮನೆಯವರ ಕಣ್ಣು ತಪ್ಪಿಸಿ ಯಕ್ಷಗಾನ ನೋಡುತ್ತಿದ್ದ ಈ ಸಣ್ ಮಾಣಿ ನಂತರ ಕಣ್ ತಪ್ಪಿಸಿ ವೇಷ ಮಾಡುವುದನ್ನೂ ಕಲಿತ. ಬಾಳೆಗದ್ದೆಯಲ್ಲಿ ನಡೆದ ‘ಶ್ರೀಕೃಷ್ಣ ಪಾರಿಜಾತ’ ಪ್ರಸಂಗದಲ್ಲಿ ಅಗ್ನಿ ಪಾತ್ರ ಮಾಡಿದ್ದ ಚಿಟ್ಟಾಣಿಗೆ ಮನೆಯಲ್ಲಿ ಅಪ್ಪನಿಂದ ಹೊಡೆತ ಬಿದ್ದಿತ್ತು. ಯಕ್ಷಗಾನಕ್ಕೆ ಹೋದರೆ ಕಾಲು ಮುರಿಯುತ್ತೇನೆ ಎಂಬ ಎಚ್ಚರಿಕೆಯೂ ಇತ್ತು. ಆದರೂ ಮನಸ್ಸು ಜಗ್ಗಲಿಲ್ಲ.

ಇನ್ನೊಮ್ಮೆ ಭಾಸ್ಕೇರಿಯಲ್ಲಿ ಚಕ್ರವ್ಯೂಹ ಪ್ರಸಂಗ. ಮನೆಯವರ ಕಣ್ಣು ತಪ್ಪಿಸಿ ಅಲ್ಲಿ ಅಭಿಮನ್ಯು ಪಾತ್ರವನ್ನು ಚಿಟ್ಟಾಣಿ ಮಾಡಿದ್ದರು. ‘ಬೊಪ್ಪನೆ ಬಿಡುಬಿಡು ಚಿಂತೆಯ ರಿಪುಗಳ ಸೊಕ್ಕರಿವೆನು ಬಿಡದೆ’ ಎಂಬ ಪದ್ಯಕ್ಕೆ ಹಾರಿ ಕುಣಿದು ಕುಪ್ಪಳಿಸಿದ ಚಿಟ್ಟಾಣಿ ರಂಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದ್ದರು.

ನಂತರ ಅಭಿಮನ್ಯುವಿನ ಕೈ ಕತ್ತರಿಸಲು ಕರ್ಣ ಹಿಂದಕ್ಕೆ ಬಂದು ಕತ್ತಿ ಎತ್ತಿದ. ಇನ್ನೇನು ಕತ್ತರಿಸಿಯೇ ಬಿಟ್ಟ ಎನ್ನುವಾಗ ಪ್ರೇಕ್ಷಕರ ಮಧ್ಯದಿಂದ ‘ಏ ಬೋಸುಡಿ ಮಗನೆ, ನಮ್ಮನೆ ಮಾಣಿ ಎಂತಕ್ಕಡಿತ್ಯೋ? ಅವ ಎಂತ ಮಾಡಿದ್ನೋ?’ ಎಂಬ ಕೂಗು ಕೇಳಿಬಂತು. ಚಿಟ್ಟಾಣಿ ಅವರಿಗೆ ತಕ್ಷಣ ಗೊತ್ತಾಯಿತು ಇದು ತನ್ನ ದೊಡ್ಡಪ್ಪನ ಮಾತು ಎಂದು. ಚಕ್ರವ್ಯೂಹವನ್ನು ಭೇದಿಸಿ ರಂಗದಿಮದ ಹೊರಕ್ಕೆ ಹಾರಿಬಿಟ್ಟರು. ಅಗ್ನಿ ವೇಷಕ್ಕೆ ಅಪ್ಪನಿಂದ ಹೊಡೆತ ಬಿದ್ದಿತ್ತು. ಈಗ ದೊಡ್ಡಪ್ಪನಿಂದ ಒದೆ ಗ್ಯಾರಂಟಿ ಎಂದು ತಪ್ಪಿಸಿಕೊಳ್ಳಲು ಹವಣಿಸಿದರು. ಆದರೆ ಚೌಕಿ ಮನೆಯಲ್ಲಿ ಅವರನ್ನು ಹಿಡಿದ ದೊಡ್ಡಪ್ಪ ಬಿಗಿದಪ್ಪಿ ‘ಇನ್ನು ಮುಂದೆ ಯಕ್ಷಗಾನ ಮಾಡಲು ಅಡ್ಡಿಲ್ಲೆ’ ಎಂದು ಒಪ್ಪಿಗೆ ಕೊಟ್ಟರು. ಅದೇ ಕ್ಷಣ ಹೊಸ ಧ್ರುವತಾರೆ ಉದಯವಾಯಿತು.

ಪಂಚಭೂತಗಳಲ್ಲಿ ಲೀನವಾದ ಚಿಟ್ಟಾಣಿ

ಹೊನ್ನಾವರ (ಉತ್ತರ ಕನ್ನಡ): ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮಂಗಳವಾರ ವಿಧಿವಶರಾದ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಅಂತ್ಯಕ್ರಿಯೆ, ತಾಲ್ಲೂಕಿನ ಗುಡ್ಡೆಕೇರಿಯಲ್ಲಿ ಬುಧವಾರ ರಾತ್ರಿ ನೆರವೇರಿತು.

ಪುರೋಹಿತ ಅಲೇಖ ಶಿವರಾಮ ಭಟ್ಟ, ಹವ್ಯಕ ಸಂಪ್ರದಾಯಂತೆ ಅಂತ್ಯಕ್ರಿಯೆಯ ಧಾರ್ಮಿಕ ವಿಧಿ–ವಿಧಾನ ನೆರವೇರಿಸಿದರು.

ಚಿಟ್ಟಾಣಿ ಅವರ ತೋಟದ ಮನೆಯ ಸಮೀಪ ನಿರ್ಮಿಸಲು ಉದ್ದೇಶಿಸಿರುವ ರಂಗ ಮಂದಿರದ ಆವಾರದಲ್ಲಿ, ಅವರ ಚಿತೆಗೆ ಹಿರಿಯ ಪುತ್ರ ಸುಬ್ರಹ್ಮಣ್ಯ ಹೆಗಡೆ ಅಗ್ನಿ ಸ್ಪರ್ಶ ಮಾಡಿದರು. ಚಿಟ್ಟಾಣಿ ಅವರ ಪತ್ನಿ ಸುಶೀಲಾ, ಮಕ್ಕಳಾದ ನಾರಾಯಣ ಹೆಗಡೆ, ನರಸಿಂಹ ಹೆಗಡೆ, ಲಲಿತಾ ಹಾಗೂ ಮೊಮ್ಮಕ್ಕಳು, ಬಂಧುಗಳು, ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾಡಳಿತದಿಂದ ಗೌರವ ವಂದನೆ: ಅಂತ್ಯ ಸಂಸ್ಕಾರಕ್ಕೆ ಸುಮಾರು 4 ತಾಸು ಮೊದಲು, ಉಪವಿಭಾಗಾಧಿಕಾರಿ ಎಂ.ಎನ್‌.ಮಂಜುನಾಥ್‌ ಅವರ ನೇತೃತ್ವದಲ್ಲಿ ಪೊಲೀಸರು ಕುಶಾಲು ತೋಪು ಹಾರಿಸಿ ಗೌರವ ವಂದನೆ ಸಲ್ಲಿಸಿದರು. ಬಳಿಕ ಅವರ ಮುಖಕ್ಕೆ ಬಣ್ಣ ಹಚ್ಚುವ ಮೂಲಕ ಯಕ್ಷ ಪ್ರಿಯರಿಂದ ಗೌರವ ಸಲ್ಲಿಕೆಯಾಯಿತು.

ಹೈದರಾಬಾದಿನಲ್ಲಿರುವ ಚಿಟ್ಟಾಣಿ ಅವರ ಮೊಮ್ಮಗಳ ಬರುವಿಕೆಗೆ ಕಾದಿದ್ದರಿಂದ ಅಂತ್ಯ ಸಂಸ್ಕಾರ ಸ್ವಲ್ಪ ವಿಳಂಬವಾಯಿತು.

ಶಾಸಕ ಮಂಕಾಳ ಎಸ್.ವೈದ್ಯ, ತಹಶೀಲ್ದಾರ್‌ ವಿ.ಆರ್.ಗೌಡ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT