ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಕೊರತೆಗಳ ನಡುವೆ ಪುಸ್ತಕ ಮೇಳ

Last Updated 9 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಗಂಗಾವತಿ: ಅಖಿಲ ಭಾರತ 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ವಿಶಾಲ ಮೈದಾನದಲ್ಲಿ ಮೈಚಾಚಿರುವ ಪುಸ್ತಕ ಮಳಿಗೆಗಳಲ್ಲಿ ಹಲವು ಕೊರತೆಗಳ ನಡುವೆಯೇ ಶುಕ್ರವಾರ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಆರಂಭವಾಯಿತು.

ಅಕ್ಷರ ಜಾತ್ರೆಯ ಮೊದಲ ದಿನ ಪುಸ್ತಕ ಪ್ರಿಯರ ಸಂಖ್ಯೆ ಕಡಿಮೆ ಎಂದು ಕಂಡುಬಂದರೂ ಉಳಿದೆರಡು ದಿನಗಳಲ್ಲಿ ವಹಿವಾಟು ಜೋರಾಗುತ್ತದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಮಳಿಗೆಗಳ ಸಾಲಿನಲ್ಲಿ ಅವ್ಯವಸ್ಥೆಯ ದೂರುಗಳು ಕೇಳಿಬಂದವು. ಅದರ ನಡುವೆಯೇ ಬೆಳಿಗ್ಗೆ ಪುಸ್ತಕ ಮಾರಾಟ ನಿಧಾನ ಗತಿಯಲ್ಲಿ ಶುರುವಾಯಿತು. ಮಳಿಗೆಗಳತ್ತ ಹೆಜ್ಜೆ ಹಾಕಿದ ಆಸಕ್ತರು ತಮ್ಮ ಅಭಿರುಚಿಯ ಪುಸ್ತಕಗಳತ್ತ ದೃಷ್ಟಿ ಹಾಯಿಸಿದರು. ಒಬ್ಬೊಬ್ಬರಿಗೆ ಒಂದೊಂದು ವಿಷಯದ ಬಗ್ಗೆ ಆಸಕ್ತಿ.

ಕನ್ನಡ ಸಾಹಿತ್ಯ, ವಿಶ್ವಕೋಶ, ನಿಘಂಟುಗಳು, ಶರಣ ಸಾಹಿತ್ಯ, ಧಾರ್ಮಿಕ ಪುಸ್ತಕಗಳು ಕೆಲವು ಮಳಿಗೆಗಳಲ್ಲಿ ಮಾರಾಟವಾದರೆ ಮತ್ತೆ ಕೆಲವು ಅಂಗಡಿಗಳಲ್ಲಿ ಡಾ.ಶಿವರಾಮ ಕಾರಂತರ `ಮೂಕಜ್ಜಿಯ ಕನಸುಗಳು, ಡಿವಿಜಿ ಅವರ `ಮಂಕುತಿಮ್ಮನ ಕಗ್ಗ~, ಕುವೆಂಪು ಅವರ `ಶ್ರೀ ರಾಮಾಯಣ ದರ್ಶನಂ~ ಮುಂತಾದ ಮೇರುಕೃತಿಗಳನ್ನು ಜನರು ತಡಕಾಡುವುದು ಕಂಡುಬಂದಿತು.

ಜತೆಗೆ ಡಾ.ಎಸ್. ಎಲ್. ಭೈರಪ್ಪ, ಸಮ್ಮೇಳನಾಧ್ಯಕ್ಷರ ಕೃತಿಗಳ ಬಗ್ಗೆಯೂ ಜನರು ವಿಚಾರಿಸಿದರು.
`ಜನರು ಮಾಹಿತಿ ಪುಸ್ತಕಗಳು, ಧಾರ್ಮಿಕ ಸಾಹಿತ್ಯದ ಪುಸ್ತಕಗಳನ್ನು ಹೆಚ್ಚಾಗಿ ಕೇಳುತ್ತಾರೆ. ವಿದ್ಯಾರ್ಥಿಗಳಿಗೆ ವಿಜ್ಞಾನದ ಪುಸ್ತಕಗಳು ಬೇಕು~ ಎಂದು ಪುಸ್ತಕ ವ್ಯಾಪಾರಿಯೊಬ್ಬರು ತಿಳಿಸಿದರು.

ಪುಸ್ತಕ ಖರೀದಿಗೆ ಜನರ ಪ್ರತಿಕ್ರಿಯೆ ಹೇಗಿತ್ತು ಎಂಬ ಪ್ರಶ್ನೆಗೆ ಕೆಲವು ಅಂಗಡಿಯವರಿಂದ ನಿರಾಶಾದಾಯಕ ಉತ್ತರವೇ ಬಂದಿತಾದರೂ ಉಳಿದೆರಡು ದಿನಗಳಲ್ಲಿ ವ್ಯಾಪಾರ ಕುದುರಬಹುದು ಎಂಬ ಲೆಕ್ಕಾಚಾರವೂ ಕೇಳಿಬಂದಿತು. ಇನ್ನೂ ಕೆಲವು ಅಂಗಡಿಗಳಲ್ಲಿ ಓದುಗರ ಓಡಾಟ ಗಮನ ಸೆಳೆಯಿತು.

`ಜನರ ಪ್ರತಿಕ್ರಿಯೆ ಚೆನ್ನಾಗಿದೆ. ಸಮ್ಮೇಳನದಲ್ಲಿ ಪುಸ್ತಕ ಕೊಳ್ಳುವುದಕ್ಕಾಗಿಯೇ ಆಸಕ್ತರು ಬರುತ್ತಾರೆ. ಗುಣಮಟ್ಟದ ಪುಸ್ತಕಗಳನ್ನು ಇಟ್ಟರೆ ಜನ ಹುಡುಕಿಕೊಂಡು ಬರುತ್ತಾರೆ~ ಎಂದು ಬೆಂಗಳೂರಿನ ಸಪ್ನ ಬುಕ್‌ಹೌಸ್‌ನ ಆರ್. ಕುಮಾರಸ್ವಾಮಿ ತಿಳಿಸಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಕಾರ್ಯಕ್ರಮದ ನಂತರ ವ್ಯಾಪಾರ ಚುರುಕಾಯಿತು.
ಹಳೆಯ ಪುಸ್ತಕದ ಅಂಗಡಿಗಳಲ್ಲಿ ಉತ್ತಮ ವ್ಯಾಪಾರವಿತ್ತು. `ಜನ ಕಡಿಮೆ ದರದಲ್ಲಿ ಒಳ್ಳೆಯ ಪುಸ್ತಕ ಬಯಸಿ ಬರುತ್ತಾರೆ.

ಬೀಚಿ, ತರಾಸು, ದ.ರಾ. ಬೇಂದ್ರೆ ಅವರ ಕೃತಿಗಳಿಗೆ ಬೇಡಿಕೆಯಿದೆ~ ಎಂದು, ಬಿ.ಎಸ್. ಗೌಡ ಬುಕ್  ಹೌಸ್‌ನ ಮಾಲೀಕ ಬಸವರಾಜೇಗೌಡ ತಿಳಿಸಿದರು.

ಅವ್ಯವಸ್ಥೆ ಬಗ್ಗೆ ಆಕ್ರೋಶ

ಸಮ್ಮೇಳನ ಹಮ್ಮಿಕೊಂಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣ ವಿಶಾಲವಾಗಿದ್ದು ಪುಸ್ತಕ ಮಳಿಗೆಗಳನ್ನು ಹಾಕಲು ಒಳ್ಳೆಯ ಅವಕಾಶ ಇರುವ ಬಗ್ಗೆ ಮೆಚ್ಚುಗೆವ್ಯಕ್ತವಾದರೂ, ಮಳಿಗೆಗಳ ಅವ್ಯವಸ್ಥೆಯ ಬಗ್ಗೆದೂರುಗಳು ವ್ಯಾಪಕವಾಗಿದ್ದವು.

ಸಂಘಟಕರು ರೂ. 1,500 ಶುಲ್ಕ ಪಡೆದಿದ್ದರೂ ಅದಕ್ಕೆ ತಕ್ಕಂತೆ ವ್ಯವಸ್ಥೆಯಾಗಿಲ್ಲ ಎಂಬ ಅಪಸ್ವರ ಕೇಳಿಬಂದಿತು. ಮುಖ್ಯವಾಗಿ ದೂಳುರಹಿತ ವ್ಯವಸ್ಥೆ ಮಾಡಬಹುದಿತ್ತು. ನೆಲಹಾಸು (ಕಾರ್ಪೆಟ್) ಹಾಕಬಹುದಿತ್ತು. ಒಂದೇ ಸೂರಿನಡಿ ಎಲ್ಲ ಮಳಿಗೆಗಳನ್ನೂ ವ್ಯವಸ್ಥೆಗೊಳಿಸಬೇಕಿತ್ತು ಎಂಬ ಮಾತುಗಳು ಬಂದವು.
 
`ಸಮ್ಮೇಳನಕ್ಕೆ ಅದ್ದೂರಿಯಾಗಿ ವೆಚ್ಚ ಮಾಡುವ ಸಂಘಟಕರು ಪುಸ್ತಕ ಮಳಿಗೆಗಳನ್ನು ಬಿಸಿಲು, ದೂಳು ಇಲ್ಲದಂತೆ ಉತ್ತಮ ಪರಿ ಸರದಲ್ಲಿ ವ್ಯವಸ್ಥೆ ಮಾಡಬಹುದಿತ್ತು~ ಎಂದು ಸಾಹಿತಿ, `ಛಂದ ಪುಸ್ತಕ~ ಪ್ರಕಾಶನದ ವಸುಧೇಂದ್ರ ಅಭಿಪ್ರಾಯಪಟ್ಟರು.

ಮಳಿಗೆ ಹಾಕಿದವರು ಟೇಬಲ್‌ಗಳಿಲ್ಲದೆ ಪರದಾಡಿದರು. ಒಂದು ಮಳಿಗೆಗೆ ಒಂದೇ ಟೇಬಲ್, 2 ಕುರ್ಚಿ ನೀಡಲಾಯಿತು. ಕೆಲವು ಅಂಗಡಿಯವರಿಗೆ ಅಷ್ಟೂ ಸಿಗಲಿಲ್ಲ. ಇನ್ನೂ ಕೆಲವರಿಗೆ ತಡವಾಗಿ ದೊರೆತವು. ಇದರಿಂದಾಗಿ ರೂ 100ಕ್ಕೆ ಒಂದು ಟೇಬಲ್‌ನಂತೆ ಹೊರಗಿನಿಂದ ಖರೀದಿಸಿ ತರಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT