ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿ ತಪ್ಪಿದ ಮಲಬಾರ್ ಎಕ್ಸ್‌ಪ್ರೆಸ್‌ ರೈಲು

ಕೇರಳದ ಕೊಚ್ಚಿ ಸಮೀಪದ ಕಾರುಕುಟ್ಟಿ ಬಳಿ ನಡೆದ ಘಟನೆ l ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ
Last Updated 28 ಆಗಸ್ಟ್ 2016, 20:24 IST
ಅಕ್ಷರ ಗಾತ್ರ

ಕೊಚ್ಚಿ/ತಿರುವನಂತಪುರ (ಪಿಟಿಐ): ಮಂಗಳೂರಿಗೆ ಬರುತ್ತಿದ್ದ ಮಲಬಾರ್ ಎಕ್ಸ್‌ಪ್ರೆಸ್‌ ರೈಲಿನ 12 ಬೋಗಿಗಳು ಕೊಚ್ಚಿಯಿಂದ 45 ಕಿ.ಮೀ. ದೂರದಲ್ಲಿರುವ ಕಾರುಕುಟ್ಟಿ ಬಳಿ ಹಳಿ ತಪ್ಪಿದ ಕಾರಣ, ಕೇರಳದಲ್ಲಿ ರೈಲು ಸಂಚಾರಕ್ಕೆ ಅಡಚಣೆ ಆಯಿತು. ಆದರೆ ಈ ಘಟನೆಯಲ್ಲಿ ಅದೃಷ್ಟವಶಾತ್‌ ಯಾರಿಗೂ ಅಪಾಯ ಆಗಿಲ್ಲ.

ಇದೇ ವೇಳೆ, ಚೆನ್ನೈನಿಂದ ತಿರುವನಂತಪುರಕ್ಕೆ ಬರುತ್ತಿದ್ದ ರೈಲು ಅಪಘಾತವಾಗಿರುವ ರೈಲಿಗೆ ಢಿಕ್ಕಿ ಹೊಡೆಯುವ ಅಪಾಯ ಇತ್ತು. ಆದರೆ ಸಕಾಲದಲ್ಲಿ ಸಂದೇಶ ನೀಡಿದ ಕಾರಣಕ್ಕೆ ಅದು ಅಪಘಾತವಾದ ಸ್ಥಳದಿಂದ 300 ಮೀಟರ್‌ ದೂರದಲ್ಲಿ ನಿಂತಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ನಸುಕಿನ 2.55ರ ವೇಳೆಯಲ್ಲಿ ಮಲಬಾರ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳು ಹಳಿ ತಪ್ಪಿದವು. ಆಗಷ್ಟೇ ಅಲುವಾ ನಿಲ್ದಾಣದಿಂದ ಹೊರಟಿದ್ದ  ರೈಲು, ನಿಧಾನವಾಗಿ ಚಲಿಸುತ್ತಿತ್ತು.

ಪ್ರಯಾಣಿಕರಿಗೆ ಅಪಾಯ ಆಗಿಲ್ಲ. ಅವರನ್ನು ತ್ರಿಶ್ಶೂರ್‌ಗೆ ಕರೆದೊಯ್ದು, ಅಲ್ಲಿಂದ ಮುಂದೆ ಪ್ರಯಾಣಿಸಲು ಬೇರೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಕಾರಣದಿಂದಾಗಿ ಎರ್ನಾಕುಳಂ–ತ್ರಿಶ್ಶೂರ್‌ ಮಾರ್ಗದ 21 ರೈಲುಗಳ ಸಂಚಾರ ರದ್ದಾಯಿತು.

ಹಲವು ರೈಲುಗಳನ್ನು ಎರ್ನಾಕುಳಂನಲ್ಲಿಯೇ ನಿಲ್ಲಿಸಲಾಯಿತು. ರೈಲು ಸಂಚಾರ ಸೋಮವಾರದ ವೇಳೆಗೆ ಸಹಜ ಸ್ಥಿತಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಇಲಾಖೆ ಆದೇಶ ನೀಡಿದೆ.

ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಮಂಗಳೂರು:
ತಿರುವನಂತಪುರ ಸೆಂಟ್ರಲ್– ಮಂಗಳೂರು ಎಕ್ಸ್‌ಪ್ರೆಸ್‌ ರೈಲು ಕೇರಳದ ಎರ್ನಾಕುಲಂ ಸಮೀಪದ ಅಂಗಮಾಲಿ– ಕಾರುಕುಟ್ಟಿ ರೈಲ್ವೆ ನಿಲ್ದಾಣಗಳ ನಡುವೆ ಭಾನುವಾರ ನಸುಕಿನಲ್ಲಿ ಹಳಿ ತಪ್ಪಿರುವುದರಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಮಂಗಳೂರಿಗೆ ಬರುವ ಎಂಟು ರೈಲುಗಳನ್ನು ರದ್ದು ಮಾಡಲಾಗಿದೆ.

ಈ ಮಾರ್ಗದಲ್ಲಿ ಸಂಚರಿಸುವ ದಕ್ಷಿಣ ರೈಲ್ವೆಯ 21 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಆರು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಐದು ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಿದ್ದು, ಐದು ರೈಲುಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಐದು ರೈಲುಗಳ ಸಂಚಾರ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದಲ್ಲಿ ರೈಲು ಹಳಿ ತಪ್ಪಿರುವುದರಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಓಡಾಟದಲ್ಲೂ ವ್ಯತ್ಯಯ ಉಂಟಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT