ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಕುಟುಂಬ, ಎಚ್‌.ಡಿ.ರೇವಣ್ಣ ಕುಟುಂಬ ಬೇರೆ ಬೇರೆ: ಎಚ್.ಡಿ.ಕುಮಾರಸ್ವಾಮಿ

Published 29 ಏಪ್ರಿಲ್ 2024, 8:24 IST
Last Updated 29 ಏಪ್ರಿಲ್ 2024, 8:24 IST
ಅಕ್ಷರ ಗಾತ್ರ

ಶಿವಮೊಗ್ಗ: ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದೆ ಎನ್ನಲಾದ ಪೆನ್‌ಡ್ರೈವ್ ವಿಚಾರದಲ್ಲಿ ನನ್ನೊಬ್ಬನಿಗೇ ಅಲ್ಲ ಇಡೀ ಸಮಾಜಕ್ಕೆ ಮುಜುಗರ ಆಗಿದೆ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಈ ವಿಚಾರದಲ್ಲಿ ದೇವೇಗೌಡರ ಕುಟುಂಬದ ಹೆಸರು ಎಳೆದು ತರಬೇಡಿ ಎಂದು ಕಾಂಗ್ರೆಸ್‌ ಮುಖಂಡರಿಗೆ ತಾಕೀತು ಮಾಡಿದರು.

’ಕಾಂಗ್ರೆಸ್‌ ಮಹಾನುಭಾವರು ನೀವು ಕಳಂಕವಿಲ್ಲದೇ ಬಂದವರಾ? ಇಲ್ಲಿ ದೇವೇಗೌಡರು, ಕುಮಾರಸ್ವಾಮಿ ಹೆಸರು ಯಾಕೆ ತರುತ್ತೀರಿ. ತ‍ಪ್ಪು ಯಾರು ಮಾಡಿದ್ದಾರೋ ಅವರು ಶಿಕ್ಷೆ ಅನುಭವಿಸಬೇಕು ಎಂದು ನಾನೇ ಸ್ಪಷ್ಟಪಡಿಸಿದ್ದೇನಲ್ಲ‘ ಎಂದು ಹರಿಹಾಯ್ದರು.

’ನಮ್ಮ ಕುಟುಂಬವೇ ಬೇರೆ. ಎಚ್‌.ಡಿ.ರೇವಣ್ಣ ಅವರ ಕುಟುಂಬವೇ ಬೇರೆ. ಹಾಸನದಲ್ಲಿ ಅವರು ನಾಲ್ಕು ಜನ ಪ್ರತ್ಯೇಕವಾಗಿ ವಾಸವಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಹೇಳುತ್ತಿದ್ದೇನೆ. ಇಲ್ಲಿ ಕುಟುಂಬದ ಹೆಸರು ತರಬೇಡಿ. ಇದು ವ್ಯಕ್ತಿಯ ಪ್ರಶ್ನೆಯೇ ಹೊರತು ಕುಟುಂಬದ ಪ್ರಶ್ನೆ ಅಲ್ಲ. ವ್ಯಕ್ತಿಯ ಬಗ್ಗೆ ಚರ್ಚೆ ಮಾಡಿಕೊಳ್ಳಿ. ವ್ಯಕ್ತಿಗತವಾಗಿ ಒಬ್ಬೊಬ್ಬರದ್ದು ಒಂದೊಂದು ವರ್ತನೆ ಇರುತ್ತದೆ ಎಂದು ಹೇಳಿದರು.

ಪ್ರಜ್ವಲ್‌ ವಿಚಾರದಲ್ಲಿ ಮಹಿಳೆಯರೊಂದಿಗೆ ತಪ್ಪು ಆಗಿದ್ದರೆ ಅದು ಆಗಬಾರದಿತ್ತು. ಸಮಾಜದಲ್ಲಿ ಇಂತಹದ್ದು ಮತ್ತೆ ನಡೆಯಬಾರದು ಎಂಬುದು ನನ್ನ ಅಭಿಪ್ರಾಯ. ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿ ಆಗಿದ್ದಾಗ, ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಲಕ್ಷಾಂತರ ಮಹಿಳೆಯರು ಕಷ್ಟ–ಸುಖ ಹೇಳಿಕೊಂಡು ನಮ್ಮ ಬಳಿಗೆ ಬಂದಿದ್ದಾರೆ. ಅವರ ಜೊತೆ ಗೌರವಯುತವಾಗಿ ನಡೆದುಕೊಂಡಿದ್ದೇವೆ. ಅವರಿಗೆ ನೆರವು ಕೊಟ್ಟು ಸಂಕಷ್ಟದಿಂದ ಪಾರು ಮಾಡಿದ್ದೇವೆ ಎಂದು ಸ್ಮರಿಸಿದರು.

ಯಾರು ತಪ್ಪು ಮಾಡಿದ್ದರೂ ಈ ನೆಲದ ಕಾನೂನಿಗೆ ತಲೆಬಾಗಲೇಬೇಕು. ಶಿಕ್ಷೆ ಅನುಭವಿಸಬೇಕು. ಹೀಗಾಗಿ ಮುಂದಿನ ವಿಷಯಗಳು ನನಗೆ ಸಂಬಂಧವಿಲ್ಲ. ಎಸ್‌ಐಟಿ ತನಿಖೆ ವಿಚಾರದಲ್ಲಿ ಯಾರ ಮೇಲೂ ಪ್ರಭಾವ ಬೀರುವ ಪ್ರಶ್ನೆಯೇ ಇಲ್ಲ. ಇಲ್ಲಿ ಯಾರನ್ನೂ ವಹಿಸಿಕೊಳ್ಳುವುದಿಲ್ಲ. ಆದರೆ ಪಾರದರ್ಶಕ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಪೆನ್‌ಡ್ರೈವ್‌ ವಿಚಾರ ಪರಿಣಾಮ ಬೀರೊಲ್ಲ ಎಂದು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪಕ್ಷದಿಂದಲೂ ಪ್ರಜ್ವಲ್‌ ರೇವಣ್ಣ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

’ಪೆನ್‌ಡ್ರೈವ್ ವಿಚಾರದಲ್ಲಿ ಎಲ್ಲವೂ ವೈಯಕ್ತಿಕವಾಗಿ ನಡೆದ ಸಂಗತಿಗಳು. ಮೊದಲೇ ನಮ್ಮ ಗಮನಕ್ಕೆ ಬಂದಿದ್ದರೆ ತಪ್ಪಿಸಬಹುದಿತ್ತು. ಮಕ್ಕಳು ಎಲ್ಲಿಗೆ ಹೋಗುತ್ತಾರೆ ಏನು ಮಾಡುತ್ತಾರೆ ಎಂದು ಕಾಯಲು ಆಗುತ್ತದೆಯೇ. ಅದೇ ರೀತಿ ಪ್ರಜ್ವಲ್ ವಿದೇಶಕ್ಕೆ ಹೋಗುವಾಗಲೂ ನನ್ನ ಕೇಳಿ ಹೋಗುತ್ತಾನಾ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಪ್ರಜ್ವಲ್ ಅವರನ್ನು ವಿದೇಶದಿಂದ ವಾಪಸ್ ಕರೆಸಿಕೊಳ್ಳುವ ವಿಚಾರದಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

’ಕುಮಾರಸ್ವಾಮಿ ತಮ್ಮ ಬಳಿ ಇರುವ ಪೆನ್‌ಡ್ರೈವ್ ಬಿಡುಗಡೆ ಮಾಡಲಿ ಎಂದು ಕಾಂಗ್ರೆಸ್‌ನ ಮಹಾನಾಯಕರೊಬ್ಬರು ಹೇಳಿದ್ದಾರೆ. ಶೀಘ್ರ ಅದನ್ನು ಬಿಡುಗಡೆ ಮಾಡುವೆ‘ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

’ಪ್ರಜಾವಾಣಿ‘ ಲೇಖನ ಪ್ರಸ್ತಾಪಿಸಿದ ಎಚ್‌ಡಿಕೆ

ಪ್ರಜಾವಾಣಿಯಲ್ಲಿ ಸೋಮವಾರ ಆಳ–ಅಗಲದಲ್ಲಿ ಹಾಸನದ ಪೆನ್‌ಡ್ರೈವ್‌ ವಿಚಾರದಲ್ಲಿ ಬಂದ ಲೇಖನವನ್ನು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ ಎಚ್‌.ಡಿ.ಕುಮಾರಸ್ವಾಮಿ, ಆ ಲೇಖನದಲ್ಲಿ ಕೆಲವು ತಜ್ಞರ ಸಂದರ್ಶನ ಮಾಡಿದ್ದಾರೆ. ಆ ತಜ್ಞರು ಪ್ರಸ್ತಾಪಿರುವ ವಿಷಯಗಳ ಬಗ್ಗೆಯೇ ನನ್ನದೂ ಕಳವಳ ಹಾಗೂ ಕಾಳಜಿ ಎಂದು ಹೇಳಿದರು.

ಹಾಸನದಲ್ಲಿ ಅಭ್ಯರ್ಥಿ ಒಳ್ಳೆಯ ಲೀಡ್‌ನಲ್ಲಿ ಗೆಲ್ಲುತ್ತಾರೆ. ಅದರಲ್ಲೇನೂ ಸಂಶಯವಿಲ್ಲ. ಆದರೆ ಚುನಾವಣೆಗೆ ಮೂರು ದಿನ ಮುಂಚೆ ಪೆನ್‌ಡ್ರೈವ್ ಬಿಡಲು ಕಾರಣವೇನು? ಬಿಟ್ಟವರು ಯಾರು? ಹಳೆಯ ವಿಷಯಗಳನ್ನು ಈಗ ಏಕೆ ಎತ್ತಿದ್ದಾರೆ ಎಂಬ ಸತ್ಯಾಂಶವೂ ಎಸ್‌ಐಟಿ ತನಿಖೆಯಿಂದ ಹೊರಬರಲಿ..
ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT