ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋಳಿಗೆ ತುಪ್ಪ’ದ ಜಾತ್ರೆಯ ಸಂಭ್ರಮ

Last Updated 17 ಜೂನ್ 2014, 19:30 IST
ಅಕ್ಷರ ಗಾತ್ರ

ಕಮಲನಗರ (ಬೀದರ್ ಜಿಲ್ಲೆ):  ಹಬ್ಬಕ್ಕೆ ಹೋಳಿಗೆ ಮಾಡುವುದು ವಾಡಿಕೆ. ಹೋಳಿಗೆ–ತುಪ್ಪದ ರುಚಿ ಸವಿಯುವುದು ಹಬ್ಬದ ವೈಶಿಷ್ಟ್ಯ. ಆದರೆ, ಇಲ್ಲಿಗೆ ಸಮೀಪದ ಖೇಡ್‌ ಗ್ರಾಮದಲ್ಲಿ ಮಂಗಳವಾರ ಜಪಯಜ್ಞ ಪೂಜಾ ಮಹೋತ್ಸವ ಮತ್ತು ನಾವ­ದಗಿಯ ರೇವಪ್ಪಯ್ಯ ಸ್ವಾಮಿ ಗುರು­ಪೂಜಾ ಅಂಗವಾಗಿ ‘ಹೋಳಿಗೆ–ತುಪ್ಪ’ದ್ದೇ ಜಾತ್ರೆ ನಡೆದಿರುವುದು ವಿಶೇಷ.

ಕಾರ ಹುಣ್ಣಿಮೆಯಾದ ಆರನೇ ದಿನದಂದು ಹೋಳಿಗೆ–ತುಪ್ಪದ ಜಾತ್ರೆ ನಡೆಸಲಾಗುತ್ತಿದೆ. 9 ವರ್ಷಗಳಿಂದ ಜರುಗುತ್ತಿರುವ ಈ ಜಾತ್ರೆಗೆ ಕರ್ನಾಟಕ ಅಲ್ಲದೇ ಮಹಾ­ರಾಷ್ಟ್ರ, ಆಂಧ್ರ ಪ್ರದೇಶದಿಂದಲೂ ಜನರು ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಾರೆ. ಬಂದವ­ರಿಗೆಲ್ಲ ಬೆಳಿಗ್ಗೆ­ಯಿಂದ ಇಳಿಹೊತ್ತಿನ­ವರೆಗೂ ಉಂಡಷ್ಟು ಹೋಳಿಗೆ, ಹೋಳಿಗೆಗೆ ಬಟ್ಟಲು ಬಟ್ಟಲು ತುಪ್ಪ ಸುರಿದು ಸಂತೃಪ್ತಿಪಡಿಸುತ್ತಾರೆ ಖೇಡ್‌ ಗ್ರಾಮಸ್ಥರು.

ಈ ಸಲ ಹೈದರಾಬಾದ್‌ನಿಂದ 15 ಕೆ.ಜಿ.ಯ 50 ಡಬ್ಬಿ ತುಪ್ಪ ಹಾಗೂ 900 ಕೆ.ಜಿ. ಕಡಲೆ ಬೇಳೆಯನ್ನು  ದಾಸೋ­ಹಕ್ಕಾಗಿ ತಂದಿರುವುದಾಗಿ ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಗ್ರಾಮದಿಂದ ಮದುವೆಯಾಗಿ ಹೋದ ಮಹಿಳೆಯರು, ಉದ್ಯೋಗ ಅರಸಿ ಹೋದ ಪುರುಷರು ತಪ್ಪದೇ ಜಾತ್ರೆಗೆ ಬರುತ್ತಾರೆ. ಸುಮಾರು 22 ಸಾವಿರ ಭಕ್ತರು ಸೇರಿದ್ದರು ಎಂದು ಅಂದಾಜಿಸಲಾಗಿದೆ.

ಜಾತ್ರೆಯಲ್ಲಿ ವಿಭೂತಿ, ರುದ್ರಾಕ್ಷಿ, ತೆಂಗು, ಕರಿದ ತಿಂಡಿ ತಿನಿಸುಗಳ ಹಾಗೂ ಮಕ್ಕಳ ಆಟಿಕೆಗಳ ಅಂಗಡಿಗಳು ಜನರಿಂದ ತುಂಬಿದ್ದವು.
ಜಾತ್ರೆಗೂ ಮೊದಲು ಐದು ದಿನಗಳ ಕಾಲ ತಡೋಳಾದ ಮೆಹಕರ್‌ ಮಠದ ರಾಜೇಶ್ವರ ಶಿವಾಚಾರ್ಯ, ಗ್ರಾಮಸ್ಥರಿಗೆ ಬೆಳಿಗ್ಗೆ ಇಷ್ಟಲಿಂಗ ಪೂಜೆ, ಜಪ, ಧ್ಯಾನದ ಕುರಿತು ಪ್ರಶಿಕ್ಷಣ ಹಾಗೂ ಸಂಜೆ ವಚನ ಪ್ರವಚನ ನೀಡಿದರು.

ಮಹಾರಾಷ್ಟ್ರದ ಉದಗೀರ್‌ ಚೌಕಿಮಠದ ಷಣ್ಮುಖ­ಸ್ವಾಮಿ ಅವರು ಗ್ರಾಮಸ್ಥರಿಗೆ ಸೂಕ್ತ ಮಾರ್ಗದರ್ಶನ, ಆಚಾರ–ವಿಚಾರ ಪ್ರಚುರ ಪಡಿಸುವ ಕಾರ್ಯ ಕೈಗೊಂಡಿ­ದ್ದಾರೆ. ಜಾತಿ, ಮತ, ವರ್ಗ, ಲಿಂಗ ಭೇದವಿಲ್ಲದೇ ಎಲ್ಲರೂ ಸಮಾನರಾಗಿ ಹರ್ಷದಿಂದ ಪಾಲ್ಗೊಂಡು ಜಾತ್ರೆ ಆಚರಿಸುವುದು ವಿಶೇಷವಾಗಿದೆ.

ಹಿನ್ನೆಲೆ: ಭಾಲ್ಕಿ ತಾಲ್ಲೂಕಿನ ನಾವ ದಗಿಯ ರೇವಪ್ಪಯ್ಯನವರು ಖೇಡ್‌ ಗ್ರಾಮದಲ್ಲಿ ತಪಸ್ಸಿಗೆ ಕುಳಿತ್ತಿದ್ದರು ಎನ್ನಲಾಗಿದೆ. ಅದೇ ಸ್ಥಳದಲ್ಲಿ ಗ್ರಾಮಸ್ಥರು ಅವರ ಭವ್ಯವಾದ ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ.

ರೇವಪ್ಪಯ್ಯ ತಮ್ಮ ಜೀವಿತಾವಧಿಯಲ್ಲಿ ಗುರುಲಿಂಗ ಜಂಗಮರ ಸೇವೆಯ ಸಂಸ್ಕಾರವನ್ನು ನೀಡುತ್ತ ಗ್ರಾಮ ಗ್ರಾಮಗಳಲ್ಲಿ ಹೋಳಿಗೆ–ತುಪ್ಪದ ದಾಸೋಹ ಕಾರ್ಯ ಮಾಡಿ ಸುತ್ತಲಿದ್ದರು ಎನ್ನುವುದು ಪ್ರತೀತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT