ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಜಾ: ಇಸ್ರೇಲ್‌ನ 14 ಯೋಧರ ಸಾವು

Published 24 ಡಿಸೆಂಬರ್ 2023, 15:55 IST
Last Updated 24 ಡಿಸೆಂಬರ್ 2023, 15:55 IST
ಅಕ್ಷರ ಗಾತ್ರ

ಟೆಲ್ ಅವೀವ್: ಗಾಜಾಪಟ್ಟಿಯಲ್ಲಿ ಶುಕ್ರವಾರ ಮತ್ತು ಶನಿವಾರ ಇಸ್ರೇಲ್ ಸೇನೆಯ 14 ಯೋಧರನ್ನು ಹಮಾಸ್ ಬಂಡುಕೋರರು ಹತ್ಯೆ ಮಾಡಿದ್ದಾರೆ ಎಂದು ಇಸ್ರೇಲ್ ಭಾನುವಾರ ಆರೋಪಿಸಿದೆ. 

ಈ ಮೂಲಕ ಇಸ್ರೇಲ್ ಸೇನೆಯ ತೀವ್ರ ದಾಳಿಯಿಂದ ಕಂಗೆಟ್ಟಿರುವ ಹೊರತಾಗಿಯೂ, ಹಮಾಸ್ ಬಂಡುಕೋರರು ಪ್ರತಿರೋಧ ವ್ಯಕ್ತಪಡಿಸಿದಂತಾಗಿದೆ. 

ಯೋಧರು ಇದ್ದ ವಾಹನದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. ಉಳಿದ 10 ಯೋಧರು ಪ್ರತ್ಯೇಕ ದಾಳಿಗಳಲ್ಲಿ ಹುತಾತ್ಮರಾಗಿದ್ದಾರೆ. ಈ ಮೂಲಕ ಇಸ್ರೇಲ್–ಹಮಾಸ್ ಬಂಡುಕೋರರ ನಡುವಿನ ಯುದ್ಧದಲ್ಲಿ ಈವರೆಗೆ 153 ಸೈನಿಕರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆಯ ರೇಡಿಯೊ ತಿಳಿಸಿದೆ. 

ಗಾಜಾದ ಎರಡನೇ ಅತಿದೊಡ್ಡ ನಗರವಾಗಿರುವ ಖಾನ್ ಯೂನಿಸ್‌ ಪ್ರದೇಶದಲ್ಲಿ ಹಮಾಸ್ ನಾಯಕರು ಅಡಗಿದ್ದಾರೆ ಎಂಬ ಕಾರಣಕ್ಕೆ ಗಾಜಾದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ದಾಳಿ ಮುಂದುವರಿಸಲಾಗಿದೆ ಎಂದು ಇಸ್ರೇಲ್ ಸೇನೆಯ ವಕ್ತಾರ ತಿಳಿಸಿದ್ದಾರೆ. 

ಈ ನಡುವೆ, ಭಾನುವಾರ ಸಚಿವ ಸಂಪುಟದ ಸಭೆ ನಡೆಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ‘ಈ ಯುದ್ಧಕ್ಕೆ ನಾವು ಹೆಚ್ಚು ಬೆಲೆ ತೆರುವಂತಾಗಿದೆ. ಆದರೆ, ಯುದ್ಧ ಮುಂದುವರಿಸುವುದನ್ನು ಹೊರತುಪಡಿಸಿ, ಬೇರೆ ಆಯ್ಕೆಗಳಿಲ್ಲ. ನಾವು ಗೆಲ್ಲುವವರೆಗೆ, ನಮ್ಮ ಗುರಿ ಮುಟ್ಟುವವರೆಗೆ ನಮ್ಮೆಲ್ಲ ಶಕ್ತಿಗಳನ್ನು ವಿನಿಯೋಗಿಸಿ, ಯುದ್ಧವನ್ನು ಮುಂದುವರಿಸುತ್ತೇವೆ’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT