ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಕಡಲ್ಗಾಲುವೆ ದಾಟುವಾಗ ಐವರ ಸಾವು

Published 23 ಏಪ್ರಿಲ್ 2024, 12:50 IST
Last Updated 23 ಏಪ್ರಿಲ್ 2024, 12:50 IST
ಅಕ್ಷರ ಗಾತ್ರ

ಪ್ಯಾರಿಸ್‌: ಬ್ರಿಟನ್‌ನಲ್ಲಿ ವಲಸಿಗರ ಗಡೀಪಾರು ಮಸೂದೆಗೆ ಒಪ್ಪಿಗೆ ನೀಡಿದ ಕೆಲವೇ ತಾಸುಗಳಲ್ಲಿ ಇಂಗ್ಲಿಷ್‌ ಕಡಲ್ಗಾಲುವೆ ದಾಟುವಾಗ ಐವರು ಮೃತಪಟ್ಟಿದ್ದಾರೆ ಎಂದು ಫ್ರಾನ್ಸ್‌ ಮಾಧ್ಯಮಗಳು ವರದಿ ಮಾಡಿವೆ.

ಉತ್ತರ ಫ್ರಾನ್ಸ್‌ನ ವಿಮೆರಿಯಾಕ್ಸ್‌ ಕಡಲ ತೀರದಲ್ಲಿ ಶವಗಳು ಪತ್ತೆಯಾಗಿವೆ ಎಂದು ‘ದಿ ವಾ ಡು ನೋರ್ಡ್‌’ ಪತ್ರಿಕೆ ವರದಿ ಮಾಡಿದೆ. 

ರಕ್ಷಣಾ ಕಾರ್ಯಕ್ಕೆ ದೋಣಿಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. 

ಸುಮಾರು 100 ವಲಸಿಗರನ್ನು ರಕ್ಷಿಸಲಾಗಿದ್ದು, ಇವರನ್ನು ಫ್ರಾನ್ಸ್‌ ನೌಕಾಪಡೆಯ ಹಡಗಿನಲ್ಲಿ ಬೌಲೋನ್ ಬಂದರಿಗೆ ಕರೆದೊಯ್ಯಲಾಗುತ್ತಿದೆ.

ಕೆಲವು ವಲಸಿಗರನ್ನು ರುವಾಂಡಾಕ್ಕೆ ಕಳುಹಿಸುವ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಅವರ ಇತ್ತೀಚಿನ ಪ್ರಯತ್ನವು ಅಂತಿಮವಾಗಿ ಸಂಸತ್ತಿನಿಂದ ಅನುಮೋದನೆ ಪಡೆದ ಕೆಲವೇ ಗಂಟೆಗಳ ನಂತರ ಈ ಘಟನೆ ಸಂಭವಿಸಿದೆ.

ಬ್ರಿಟನ್‌ ಅನ್ನು ಹೇಗಾದರೂ ತಲುಪಿದರೆ ಅಲ್ಲಿ ಆಶ್ರಯ ಸಿಗುತ್ತದೆ ಎಂಬ ಭರವಸೆಯೊಂದಿಗೆ ತಮ್ಮ ಪ್ರಾಣ ಅಪಾಯಕ್ಕೆ ಒಡ್ಡಿಕೊಂಡು ಸುರಕ್ಷಿತವಲ್ಲದ ದೋಣಿಗಳಲ್ಲಿ ಅಕ್ರಮವಾಗಿ ಪ್ರವೇಶಿಸುವವರನ್ನು ಗಡೀಪಾರು ಮಾಡಲು ಬ್ರಿಟನ್‌ ಸರ್ಕಾರ ಯೋಜಿಸಿದೆ.

ಇಂಗ್ಲಿಷ್‌ ಕಡಲ್ಗಾಲುವೆಯನ್ನು ಅಕ್ರಮವಾಗಿ ದಾಟುವಾಗ ಸುಮಾರು 30 ಸಾವಿರ ಜನರು 2023ರಲ್ಲಿ ಮೃತಪಟ್ಟಿದ್ದಾರೆ ಎಂದು ಬ್ರಿಟನ್‌ ಸರ್ಕಾರದ ಅಂಕಿಅಂಶಗಳು ಹೇಳುತ್ತವೆ.

ಬ್ರಿಟನ್‌ ಸಂಸತ್ತು ತಂದಿರುವ ಈ ಮಸೂದೆಯನ್ನು ಅಮಾನವೀಯ ಮತ್ತು ಕ್ರೌರ್ಯ ಎಂದು ಮಾನವ ಹಕ್ಕುಗಳ ಸಂಘಟನೆಗಳು ಟೀಕಿಸಿವೆ. ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ಮತ್ತು ಯುರೋಪಿನ ಕೌನ್ಸಿಲ್‌, ಬ್ರಿಟನ್‌ ಈ ಮಸೂದೆ ಬಗ್ಗೆ ಮರುಚಿಂತನೆ ಮಾಡಬೇಕು ಎಂದು ಮಂಗಳವಾರ ಒತ್ತಾಯಿಸಿವೆ.

ವಲಸೆ ಮಸೂದೆ ಸ್ವಾಗತಿಸಿದ ಸುನಕ್‌

ಲಂಡನ್‌: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಮಂಗಳವಾರ ತಮ್ಮ ಸರ್ಕಾರದ ವಿವಾದಾತ್ಮಕ ’ರುವಾಂಡಾ ಸುರಕ್ಷತೆ ಮಸೂದೆ’ಯನ್ನು ಸಂಸತ್ತಿನಲ್ಲಿ  ಅಂಗೀಕರಿಸಿರುವುದನ್ನು ಸ್ವಾಗತಿಸಿದ್ದಾರೆ.

ಅಕ್ರಮ ವಲಸಿಗರನ್ನು ವಾಪಸ್‌ ತವರಿಗೆ ಕಳುಹಿಸಲು ಯಾವುದೇ ಅಡ್ಡಿಯಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಈ ಮಸೂದೆ ಅಂಗೀಕಾರವಾಗಿರುವುದನ್ನು ಸುನಕ್‌ ಜಾಗತಿಕ ವಲಸೆಯ ಸಮಸ್ಯೆಯ ನಿರ್ವಹಣೆಯಲ್ಲಿ ಮೂಲಭೂತವಾದ ಮಹತ್ವದ ಬದಲಾವಣೆ ಎಂದು ವಿವರಿಸಿದ್ದಾರೆ.

ಅಕ್ರಮ ವಲಸಿಗರನ್ನು 10ರಿಂದ 12 ವಾರಗಳಲ್ಲಿ ಸ್ಥಳಾಂತರಿಸಲು ವೇಳಾಪಟ್ಟಿ ಹಾಕಿಕೊಂಡಿದ್ದು ಇದಕ್ಕಾಗಿ ಚಾರ್ಟರ್ಡ್‌ ವಿಮಾನಗಳನ್ನು ಸಜ್ಜುಗೊಳಿಸಲಾಗಿದೆ. ಅಜ್ಞಾತ ವಾಯು ನೆಲೆಯಿಂದ ಮೊದಲ ವಿಮಾನ ರುವಾಂಡತ್ತ ಹೊರಡಲಿದೆ.

‘ಈ ಮಸೂದೆಯ ಅಂಗೀಕಾರವು ಕೇವಲ ಒಂದು ಹೆಜ್ಜೆ ಅಷ್ಟೇ ಅಲ್ಲ. ವಲಸೆಯ ಮೇಲಿನ ಜಾಗತಿಕ ಸಮೀಕರಣದಲ್ಲಿ ಮೂಲಭೂತ ಬದಲಾವಣೆಯಾಗಿದೆ’ ಎಂದು ಸುನಕ್ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT