ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ಮಾಜಿ ಪ್ರಧಾನಿ ಜಿಯಾಗೆ ಜೈಲು ಶಿಕ್ಷೆ ದುಪ್ಪಟ್ಟು

ಢಾಕಾ ಹೈಕೋರ್ಟ್‌ನಿಂದ ಅಚ್ಚರಿಯ ತೀರ್ಪು
Last Updated 30 ಅಕ್ಟೋಬರ್ 2018, 18:34 IST
ಅಕ್ಷರ ಗಾತ್ರ

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲಿದಾ ಜಿಯಾ ಅವರಿಗೆ ಅನಾಥಾಶ್ರಮದ ದೇಣಿಗೆ ಹಣ ದುರ್ಬಳಕೆ ಆರೋಪದ ಪ್ರಕರಣದಲ್ಲಿ ವಿಧಿಸಿದ್ದ 5 ವರ್ಷ ಅವಧಿಯ ಶಿಕ್ಷೆಯನ್ನು ಇಲ್ಲಿನ ಹೈಕೋರ್ಟ್‌ 10 ವರ್ಷಕ್ಕೆ ಹೆಚ್ಚಿಸಿ, ಅಚ್ಚರಿಯ ತೀರ್ಪು ನೀಡಿದೆ.

ಭ್ರಷ್ಟಾಚಾರದ ಮತ್ತೊಂದು ಪ್ರಕರಣದಲ್ಲಿ ಜಿಯಾ ಅವರಿಗೆ ನ್ಯಾಯಾಲಯ 7 ವರ್ಷ ಶಿಕ್ಷೆ ವಿಧಿಸಿದ ಮರು ದಿನವೇ ಕೋರ್ಟ್‌ ದುಪ್ಪಟ್ಟು ಶಿಕ್ಷೆ ವಿಧಿಸಿದೆ. ನ್ಯಾಯಮೂರ್ತಿಗಳಾದ ಎಂ.ಎನಾಯೆತುರ್‌ ರಹೀಮ್‌ ಮತ್ತು ಮೊಸ್ತಾಫಿಜುರ್‌ ರೆಹಮಾನ್‌ ಅವರಿದ್ದ ಪೀಠವು ಈ ತೀರ್ಪು ನೀಡಿದೆ.

ಜಿಯಾ ಅನಾಥಶ್ರಮ ಟ್ರಸ್ಟ್‌ ಹೆಸರಿನಲ್ಲಿ ದೇಣಿಗೆ ಪಡೆದು ದುರುಪಯೋಗ ಮಾಡಿಕೊಂಡಿರುವ ಪ್ರಕರಣದಲ್ಲಿ ಖಲಿದಾ ಜಿಯಾ ಅವರಿಗೆ ವಿಧಿಸಿರುವ ಶಿಕ್ಷೆ ಪ್ರಮಾಣ ಹೆಚ್ಚಿಸುವಂತೆ ಭ್ರಷ್ಟಾಚಾರ ವಿರೋಧಿ ಆಯೋಗ(ಎಸಿಸಿ) ಸಲ್ಲಿಸಿದ್ದ ಪುನರ್‌ ಪರಿಶೀಲನಾ ಅರ್ಜಿಯನ್ನು ಪೀಠವು ವಿಚಾರಣೆ ನಡೆಸಿತು.

‘ಈ ತೀರ್ಪಿನ ಅರ್ಥವು ಖಲಿದಾ ಜಿಯಾ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲವೆನ್ನುವುದಾಗಿದೆ’ ಎಂದು ಎಸಿಸಿ ವಕೀಲ ಖುರ್ಷಿದ್‌ ಆಲಂ ಖಾನ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಅನಾಥಾಶ್ರಮದ ದೇಣಿಗೆ ದುರುಪಯೋಗ ಪ್ರಕರಣ ಸಂಬಂಧ ಜಿಯಾ ಅವರಿಗೆ ಢಾಕಾ ನ್ಯಾಯಾಲಯ ಫೆಬ್ರುವರಿ 8ರಂದು 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅವರ ಪುತ್ರ ತಾರಿಖ್‌ ರೆಹಮಾನ್‌ ಮತ್ತು ಇತರ ನಾಲ್ವರು ಆರೋಪಿಗಳಾದ ಕಮಲ್‌ ಉದ್ದಿನ್‌ ಸಿದ್ದಿಕಿ, ಸಲಿಮುಲ್‌, ಶಾರ್ಫುದ್ದಿನ್‌, ಮೊಮಿನುರ್‌ ರೆಹಮಾನ್‌ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ಪ್ರಕಟವಾದಾಗಿನಿಂದಲೂ ಜಿಯಾ ಅವರು ಸೆಂಟ್ರಲ್‌ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಅಕ್ಟೋಬರ್‌ 6ರಿಂದ ಬಂಗಬಂಧು ಶೇಖ್‌ ಮುಜಿಬ್‌ ವೈದ್ಯಕೀಯ ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಾಗಿರುವ ಖಲಿದಾ ಜಿಯಾ ಅವರು, ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT