ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದೇಶ: ಚುನಾವಣಾ ಕಾರ್ಯಕ್ಕೆ ಸಶಸ್ತ್ರ ಪಡೆ ನಿಯೋಜನೆ

Published 3 ಜನವರಿ 2024, 15:27 IST
Last Updated 3 ಜನವರಿ 2024, 15:27 IST
ಅಕ್ಷರ ಗಾತ್ರ

ಢಾಕಾ : ಬಾಂಗ್ಲಾದೇಶದಲ್ಲಿ ಇದೇ 7ರಂದು ನಡೆಯಲಿರುವ ರಾಷ್ಟ್ರೀಯ ಚುನಾವಣೆಯನ್ನು ಇಲ್ಲಿನ ಪ್ರಮುಖ ವಿರೋಧ ಪಕ್ಷವಾದ ‘ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷ’ (ಬಿಎನ್‌ಪಿ) ಬಹಿಷ್ಕರಿಸಿದ ಬೆನ್ನಲ್ಲೇ, ಮುಕ್ತ, ನ್ಯಾಯ ಸಮ್ಮತ ಮತ್ತು ಶಾಂತಿಯುತ ರೀತಿಯಲ್ಲಿ ಚುನಾವಣೆ ನಡೆಸುವುದಕ್ಕಾಗಿ ಸಶಸ್ತ್ರ ಪಡೆಗಳನ್ನು ಸರ್ಕಾರ ನಿಯೋಜಿಸಿದೆ.

ದೇಶದ ಪ್ರತಿ ಜಿಲ್ಲೆ, ಉಪ ವಿಭಾಗ ಮತ್ತು ಮಹಾನಗರ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳು ನೆಲೆಸಿರಲಿವೆ ಎಂದು ಮಿಲಿಟರಿಯ ಮಾಧ್ಯಮ ವಿಭಾಗ ಮಾಹಿತಿ ನೀಡಿದೆ.

ಸಶಸ್ತ್ರ ಪಡೆಗಳು ಜನವರಿ 3ರಿಂದ 10ರವರೆಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಚುನಾವಣಾ ಆಯೋಗ ಮತ್ತು ಸ್ಥಳೀಯ ಆಡಳಿತಕ್ಕೆ ನೆರವಾಗಲಿವೆ ಎಂದು ಪ್ರಕಟಣೆ ತಿಳಿಸಿದೆ. 

ಸಶಸ್ತ್ರ ಪಡೆಗಳ ಜತೆಗೆ ಕರಾವಳಿ ಪಡೆ, ಗಡಿ ಭದ್ರತಾ ಪಡೆ, ಕ್ಷಿಪ್ರ ಕಾರ್ಯ ಪಡೆ ಸದಸ್ಯರು ಸಹ ಚುನಾವಣಾ ಕಾರ್ಯದಲ್ಲಿ ನೆರವಾಗಲಿದ್ದಾರೆ.

ಪಕ್ಷೇತರ ಹಂಗಾಮಿ ಸರ್ಕಾರ ರಚಿಸಿ, ಅದರ ಮೇಲ್ವಿಚಾರಣೆಯಲ್ಲಿ ನ್ಯಾಯಸಮ್ಮತವಾದ ಚುನಾವಣೆ ನಡೆಸಬೇಕು ಎಂದು ಬಿಎನ್‌ಪಿ ಆಗ್ರಹಿಸಿತ್ತು. ಆದರೆ ಈ ಬೇಡಿಕೆಯನ್ನು ಪ್ರಧಾನಿ ಹಶೇಖ್‌ ಹಸೀನಾ ನೇತೃತ್ವದ ಸರ್ಕಾರ ತಿರಸ್ಕರಿಸಿತ್ತು. ಹಸೀನಾ ಅವರು ಆಡಳಿತಾರೂಢ ಅವಾಮಿ ಲೀಗ್‌ ಅಧ್ಯಕ್ಷರೂ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT