ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿಗೆ ಸಾಥ್ ನೀಡಲಿರುವ ಟ್ರಂಪ್‌

ಹ್ಯೂಸ್ಟನ್‌ನಲ್ಲಿ ಸೆ.22ರಂದು ‘ಹೌದಿ, ಮೋದಿ!’ l 50 ಸಾವಿರ ಜನ ಭಾಗವಹಿಸುವ ನಿರೀಕ್ಷೆ
Last Updated 16 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ ಮತ್ತು ಅಮೆರಿಕ ನಡುವಣ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸುವ ಉದ್ದೇಶದಿಂದ ಹ್ಯೂಸ್ಟನ್‌ನಲ್ಲಿ ಭಾನುವಾರ (ಸೆ.22) ನಡೆಯಲಿರುವ ‘ಹೌದಿ, ಮೋದಿ!’ ಬೃಹತ್‌ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭಾಗವಹಿಸುವರು.

ಶ್ವೇತಭವನ ಈ ಕುರಿತು ಹೊರಡಿಸಿರುವ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸ್ವಾಗತಿಸಿದ್ದು, ‘ಈ ವಿಶೇಷ ಗೌರವ’ ಉಭಯ ರಾಷ್ಟ್ರಗಳ ನಡುವೆ ಇರುವ ವಿಶೇಷ ಗೆಳೆತನವನ್ನು ಬಿಂಬಿಸಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಅನಿವಾಸಿ ಭಾರತೀಯರು, ಭಾರತೀಯ ಸಂಜಾತರು ಭಾಗವಹಿಸುವ ಈ ಬೃಹತ್ ಸಭೆಯನ್ನು ಟ್ರಂಪ್‌ ಆಡಳಿತದಲ್ಲಿ ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ವೃದ್ಧಿ ಉದ್ದೇಶದಿಂದ ಆಯೋಜಿಸಲಾಗುತ್ತಿದೆ. ವಿಶ್ವದಲ್ಲಿಯೇ ಇತ್ತೀಚಿನ ವರ್ಷಗಳಲ್ಲಿ ಬೃಹತ್‌ ರ‍್ಯಾಲಿಯನ್ನು ಉಭಯ ರಾಷ್ಟ್ರಗಳ ಮುಖಂಡರು ಉದ್ದೇಶಿಸಿ ಮಾತನಾಡುವುದು ಇದೇ ಮೊದಲು.

ಅಮೆರಿಕ ವಿವಿಧೆಡೆ ನೆಲೆಸಿರುವ ಸುಮಾರು 50 ಸಾವಿರ ಭಾರತೀಯ ಅಮೆರಿಕನ್ನರು ಸೆ.22ರಂದು ನಡೆಯಲಿ ರುವ ‘ಹೌದಿ, ಮೋದಿ!’ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ ಹೆಸರು ನೋಂದಣಿ ಮಾಡಿಸಿದ್ದಾರೆ.

ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸ್ಟೀಫನ್‌ ಗ್ರಿಶಂ ಅವರು, ‘ಮೋದಿ ಮತ್ತು ಟ್ರಂಪ್‌ ಜಂಟಿ ರ‍್ಯಾಲಿಯು ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ವೃದ್ಧಿಗೆ ದೊಡ್ಡ ಅವಕಾಶ. ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಕಾರ್ಯತಂತ್ರ ಪಾಲುದಾರಿಕೆ ಇನ್ನಷ್ಟು ಬಲವಾಗಲಿದೆ. ತಮ್ಮ ವಾಣಿಜ್ಯ ಬಾಂಧವ್ಯ ಕುರಿತ ಚರ್ಚೆಗೆ ವೇದಿಕೆ ಆಗಲಿದೆ’ ಎಂದರು.

ಪ್ರಕಟಣೆ ಹೊರಬಿದ್ದ ಒಂದು ಗಂಟೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಸರಣಿ ಟ್ವೀಟ್‌ ಮಾಡಿದ್ದು, ‘ಭಾರತೀಯ ಮೂಲದ ಸಮುದಾಯ ಟ್ರಂಪ್ ಅವರನ್ನು ಸ್ವಾಗತಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದು ತಿಳಿಸಿದರು.

ಅಮೆರಿಕದಲ್ಲಿನ ಭಾರತದ ರಾಯಭಾರಿ ಹರ್ಷವರ್ಧನ್‌ ಶೃಂಗ್ಲಾ ಅವರು, ಕಾರ್ಯಕ್ರಮದಲ್ಲಿ ಟ್ರಂಪ್‌ ಅವರು ಭಾಗವಹಿಸುವುದು ಐತಿಹಾಸಿಕ ಮತ್ತು ಅನಿರೀಕ್ಷಿತ ಎಂದು ಪ್ರತಿಕ್ರಿಯಿಸಿದ್ದಾರೆ. ಇದು, ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯವನ್ನು ಧ್ವನಿಸಲಿದೆ ಎಂದು ತಿಳಿಸಿದ್ದಾರೆ.

ಉಭಯ ನಾಯಕರು 50 ಸಾವಿರದಷ್ಟು ಭಾರತೀಯ ಅಮೆರಿಕರನ್ನು ಮುಖ್ಯವಾಗಿ ಅಮೆರಿಕದ ನಾಗರಿಕರನ್ನು ಉದ್ದೇಶಿಸಿ ಮಾತನಾಡಲಿ
ದ್ದಾರೆ ಎಂದರು. ಉಭಯ ಮುಖಂಡರು ಕಳೆದ ತಿಂಗಳು ಫ್ರಾನ್ಸ್‌ನಲ್ಲಿ ಜಿ7 ಶೃಂಗಸಭೆಯಲ್ಲಿ ಒಟ್ಟಿಗೆ ಮಾತನಾಡಿದ್ದರು.

ಈ ಹಿಂದೆ 2016ರ ಅಕ್ಟೋಬರ್‌ನಲ್ಲಿ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಟ್ರಂಪ್ ಅವರು 5 ಸಾವಿರ ಭಾರತೀಯ ಅಮೆರಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಚುನಾವಣೆ ವರ್ಷದಲ್ಲಿ ಭಾರತೀಯ ಅಮೆರಿಕ ರನ್ನು ಉದ್ದೇಶಿಸಿ ಮಾತನಾಡಿರುವ ಏಕಮಾತ್ರ ನಾಯಕ ಟ್ರಂಪ್‌ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT