ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇರಾನ್ ಸಂಸತ್ ಚುನಾವಣೆ: ಮಹಿಳಾ ಸ್ಪರ್ಧಿಗಳ ಸಂಖ್ಯೆ ದ್ವಿಗುಣ

Published 22 ಫೆಬ್ರುವರಿ 2024, 14:40 IST
Last Updated 22 ಫೆಬ್ರುವರಿ 2024, 14:40 IST
ಅಕ್ಷರ ಗಾತ್ರ

ಟೆಹರಾನ್‌: ಇರಾನ್ ಸಂಸತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಗುರುವಾರ ತಮ್ಮ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

2022ರ ರಾಷ್ಟವ್ಯಾಪಿ ಪ್ರತಿಭಟನೆಗಳ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಆಗ ಉಂಟಾಗಿದ್ದ ಹಿಂಸಾಚಾರದಲ್ಲಿ 22 ವರ್ಷದ ಮಹ್ಸಾ ಅಮೀನಿ ಎನ್ನುವ ಯುವತಿ ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದರು.

ಮಾರ್ಚ್ 1ರಂದು 290 ಸ್ಥಾನಗಳಿಗಾಗಿ ಚುನಾವಣೆ ನಡೆಯುತ್ತಿದ್ದು, ಕಣದಲ್ಲಿ 15,200 ಸ್ಪರ್ಧಿಗಳಿದ್ದಾರೆ ಎಂದು ಸರ್ಕಾರಿ ಟಿವಿ ವರದಿ ಮಾಡಿದೆ.

ಚುನಾಯಿತ ಪ್ರತಿನಿಧಿಗಳ ಅಧಿಕಾರದ ಅವಧಿ ನಾಲ್ಕು ವರ್ಷವಾಗಿದೆ. 2020ರಲ್ಲಿ ಸ್ಪರ್ಧಿಸಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದಾರೆ. 2020ರಲ್ಲಿ ಅತಿ ಕಡಿಮೆ ಮತದಾನ ಪ್ರಮಾಣ (ಶೇ 42) ದಾಖಲಾಗಿತ್ತು.

ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಸ್ಪರ್ಧಿಗಳ ಸಂಖ್ಯೆ ಹೆಚ್ಚಳವಾಗಿರುವುದು ಗಮನಾರ್ಹ. 2020ರಲ್ಲಿ 819 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಈ ಬಾರಿ 1713 ಮಹಿಳೆಯರು ಕಣದಲ್ಲಿದ್ದಾರೆ.

ಮಹಿಳೆಯರು ತಲೆಗೂದಲು ಮತ್ತು ದೇಹ ಮುಚ್ಚುವಂತೆ ತಲೆವಸ್ತ್ರ ಧರಿಸಬೇಕೆನ್ನುವ ಇರಾನ್‌ನ ಕಠಿಣ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಅಲ್ಲಿನ ಪೊಲೀಸರು ಅಮೀನಿಯನ್ನು ಬಂಧಿಸಿ ಸೆರೆವಾಸ ವಿಧಿಸಿತ್ತು. ಪೊಲೀಸ್ ಕಸ್ಟಡಿಯಲ್ಲಿಯೇ ಅಮೀನಿ 2022ರ ಸೆಪ್ಟೆಂಬರ್ 16ರಂದು ಸಾವಿಗೀಡಾಗಿದ್ದರು. ನಂತರ ದೇಶದಾದ್ಯಂತ ಪ್ರತಿಭಟನೆಗಳು ಆರಂಭವಾಗಿ, ಹಿಂಸಾಚಾರ ನಡೆದಿತ್ತು. ಇರಾನ್‌ನ ಮಾನವ ಹಕ್ಕು ಕಾರ್ಯಕರ್ತರ ಪ್ರಕಾರ, ಆ ಹಿಂಸಾಚಾರದಲ್ಲಿ ಸುಮಾರು 500 ಮಂದಿ ಸಾವಿಗೀಡಾಗಿದ್ದರು. 20000ಕ್ಕೂ ಹೆಚ್ಚು ಮಂದಿ ಬಂಧನಕ್ಕೊಳಗಾಗಿದ್ದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT