ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಿಸದೆ ಬಿಡೆವು: ಇಸ್ರೇಲ್‌ಗೆ ಇರಾನ್‌ ಎಚ್ಚರಿಕೆ

Published 2 ಏಪ್ರಿಲ್ 2024, 15:40 IST
Last Updated 2 ಏಪ್ರಿಲ್ 2024, 15:40 IST
ಅಕ್ಷರ ಗಾತ್ರ

ಟೆಹರಾನ್‌: ಡಮಾಸ್ಕಸ್‌ನಲ್ಲಿನ ತನ್ನ ರಾಯಭಾರ ಕಚೇರಿ ಮೇಲೆ ವೈಮಾನಿಕ ದಾಳಿ ನಡೆಸಿ ಏಳು ಮಂದಿ ರೆವಲ್ಯೂಷನರಿ ಗಾರ್ಡ್‌ನ ಇಬ್ಬರು ಬ್ರಿಗೇಡಿಯರ್‌ ಜನರಲ್‌ ಸೇರಿ ಏಳು ಮಂದಿ ಗಾರ್ಡ್‌ಗಳನ್ನು ಹತ್ಯೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಇರಾನ್‌, ಇಸ್ರೇಲ್‌ ಅನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದು ಮಂಗಳವಾರ ಎಚ್ಚರಿಕೆ ನೀಡಿದೆ.

ಇರಾನ್‌ನ ಪರಮೋಚ್ಚ ನಾಯಕ ಅಯಾತ್‌ ಉಲ್ಲಾ ಅಲಿ ಖಮೇನಿ ಇಸ್ರೇಲ್‌ ಅನ್ನು ಖಂಡಿತವಾಗಿಯೂ ಶಿಕ್ಷಿಸದೆ ಬಿಡೆವು ಎಂದು ಪ್ರತಿಜ್ಞೆ ಮಾಡಿದರು.

‘ನಮ್ಮ ವೀರ ಸೇನಾನಿಗಳ ಕೈಯಿಂದ ದುಷ್ಟ ಜಿಯೋನಿಸ್ಟ್ ಆಡಳಿತ ಶಿಕ್ಷಿಸಲಾಗುವುದು. ಈ ಅಪರಾಧ ಮತ್ತು ಇತರ ಅಪರಾಧಗಳ ಬಗ್ಗೆ ಅವರು ವಿಷಾದಿಸುವಂತೆ ನಾವು ಮಾಡುತ್ತೇವೆ’ ಎಂದು ಖಮೇನಿ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.

ಕ್ವಾಡ್ಸ್‌ ಫೋರ್ಸ್ ವಿದೇಶಿ ಕಾರ್ಯಾಚರಣೆ ವಿಭಾಗದ ಇಬ್ಬರು ಕಮಾಂಡರ್‌ಗಳಾದ, ಬ್ರಿಗೇಡಿಯರ್ ಜನರಲ್‌ಗಳಾದ ಮೊಹಮ್ಮದ್ ರೆಜಾ ಜಹೇದಿ ಮತ್ತು ಮೊಹಮ್ಮದ್ ಹಾದಿ ಹಾಜಿ ರಹೀಮಿ ಸೇರಿ ಏಳು ಕ್ರಾಂತಿಕಾರಿ ಗಾರ್ಡ್‌ಗಳನ್ನು ಇಸ್ರೇಲ್‌ ಕೊಂದಿದೆ ಎಂದು ಇರಾನ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ನಡೆದ ಭಾರಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳಲ್ಲದೆ ಇತರ ನಾಲ್ವರು ನಾಗರಿಕರು ಹತರಾಗಿದ್ದು, ಒಟ್ಟು 11 ಮಂದಿ ಸಾವಿಗೀಡಾಗಿದ್ದರು. ಈ ವೈಮಾನಿಕ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಲು ಇಸ್ರೇಲ್‌ ನಿರಾಕರಿಸಿದೆ.

ಈ ದಾಳಿಯಲ್ಲಿ ಇರಾನ್ ರಾಯಭಾರ ಕಚೇರಿಯ ಪಕ್ಕದಲ್ಲಿರುವ ಐದು ಅಂತಸ್ತಿನ ಕಟ್ಟಡವು ನೆಲಸಮವಾಗಿದೆ. ಗಾಜಾ ಯುದ್ಧವು ಶುರುವಾಗಿ ಈಗಾಗಲೇ ಆರು ತಿಂಗಳು ಪೂರ್ಣವಾಗುವ ಹತ್ತಿರದಲ್ಲಿದ್ದು, ಈ ದಾಳಿಯು ಇಸ್ರೇಲ್ ಮತ್ತು ಇರಾನ್ ಮಿತ್ರ ಹಮಾಸ್ ನಡುವಿನ ಗಾಜಾದಲ್ಲಿ ಯುದ್ಧದಿಂದ ಉರಿಯುತ್ತಿರುವ ಮಧ್ಯಪ್ರಾಚ್ಯದ ಉದ್ವಿಗ್ನತೆಗೆ ಮತ್ತಷ್ಟು ಕಿಡಿ ಹಚ್ಚಿದೆ. 

ಇಸ್ರೇಲ್‌ ನಡೆಸಿರುವ ಈ ದಾಳಿಯು ಅಂತರರಾಷ್ಟ್ರೀಯ ನಿಯಮಗಳ ಸ್ಪಷ್ಟ ಉಲ್ಲಂಘನೆ. ಇದು ಖಂಡನೀಯ. ಅವರಿಗೆ ತಕ್ಕ ಉತ್ತರ ನೀಡದೇ ಇರುವುದಿಲ್ಲ

-ಇಬ್ರಾಹಿಂ ರೈಸಿ ಇರಾನ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT