ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಾಟ್ಲೆಂಡ್‍ನಲ್ಲಿ ಸಡಗರ, ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಪ್ರಸಾದ ಸಾಲವಾಡಗಿ
Published 15 ನವೆಂಬರ್ 2023, 10:46 IST
Last Updated 15 ನವೆಂಬರ್ 2023, 10:46 IST
ಅಕ್ಷರ ಗಾತ್ರ

ಎಡಿನ್‌ಬರ್ಗ್: ಸ್ಕಾಟ್ಲೆಂಡ್ ರಾಜಧಾನಿ ಎಡಿನ್‌ಬರ್ಗ್‌ನಲ್ಲಿ ನವೆಂಬರ್ 4ರಂದು ಕನ್ನಡಮಯವಾಗಿತ್ತು. ಕನ್ನಡದ ಡಿಂಡಿಮ ಎಲ್ಲೆ ಮೀರಿತ್ತು. ಕನ್ನಡಿಗರಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು. ಮಹಿಳೆಯರು, ಪುರುಷರು ಮತ್ತು ಮಕ್ಕಳು ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದರು. ಜೈ ಕರ್ನಾಟಕ, ಜೈ ಭುವನೇಶ್ವರಿ ಘೋಷಣೆಗಳು ಮೊಳಗಿದವು. ಅಕ್ಷರಶಃ ಕನ್ನಡದ ವಾತಾವರಣ ಸೃಷ್ಟಿಯಾಗಿತ್ತು.

ಕನ್ನಡ ಅಸೋಸಿಯೇಷನ್ ಆಫ್ ಸ್ಕಾಟ್ಕೆಂಡ್ ಸಂಸ್ಥೆಯವರು ಅಚ್ಚುಕಟ್ಟಾಗಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸ್ಕಾಟ್ಲೆಂಡ್‍ನ ಭಾರತದ ರಾಯಭಾರಿ ಬಿಜಯ್ ಸೆಲ್ವರಾಜ ಮಾತನಾಡಿ, ಕನ್ನಡಿಗರ ಅಭಿಮಾನಕ್ಕೆ ಸಾಟಿಯಿಲ್ಲ. ಕಳೆದ ವರ್ಷವೂ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೆ. ಕನ್ನಡಿಗರ ಅತಿಥಿ ಸತ್ಕಾರ, ಗೌರವ ನೀಡುವ ಪದ್ಧತಿ ಅನುಕರಣೀಯ ಎಂದರು.

ಭಾರತದ ಎಲ್ಲ ರಾಜ್ಯದ ಆಚರಣೆಗಳು ವಿಶೇಷ ಮತ್ತು ವಿಭಿನ್ನ. ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಮನ ಸೆಳೆಯುತ್ತದೆ. ಕನ್ನಡ ಭಾಷೆ, ಆಚರಣೆಗಳು, ಸಂಪ್ರದಾಯ, ಉಡುಪು, ತಿನಿಸು ಎಲ್ಲವೂ ನನಗೆ ಇಷ್ಟ ಎಂದರು. ಈಡನ್‍ಬರ್ಗ್ ನಗರದ ಲಾರ್ಡ್ ಪ್ರೋವೋಸ್ಟ್ ಆ್ಯಮಿ ಮಿಕ್ನೀಸ್ ಮೆಕನ್ ಮಾತನಾಡಿ, ಸ್ಕಾಟ್ಲೆಂಡ್‍ನಲ್ಲಿ ಎಲ್ಲ ದೇಶದ, ಎಲ್ಲ ಭಾಷಿಕರ ಆಚರಣೆಗಳಿಗೆ ಅವಕಾಶವಿದೆ. ವಿಶ್ವದ ಎಲ್ಲ ಸಂಪ್ರದಾಯ, ಪರಂಪರೆಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂದರು.

ಶ್ರುತಿ ಪದಕಿ ಮತ್ತು ಸಂತೋಷ ಶೆಟ್ಟಿ ನಿರೂಪಿಸಿದರು. ಸೌಮ್ಯ ಮತ್ತು ಶ್ರುತಿ ಅರವಿಂದ ಸ್ವಾಗತಿಸಿದರು. ಪ್ರಸಾದ ಸಾಲವಾಡಗಿ ವಂದಿಸಿದರು. ಪ್ರಾಯೋಜಕರಾದ ಲೈಫ್ ಲೈನ್, ಮದ್ರಾಸ್ ಕೆಫೆ, ಮಾರ್ಟಗೆಜ್ ಕಾರ್ಟ್, ಕೃಷ್ಣಾ ಸ್ಟೋರ್ಸ್ ಹಾಗೂ ಸ್ಪೈಸ್ ಕಿಚನ್, ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಜಯಭಾರತ ಜನನೀಯ ತನುಜಾತೆ ಜಯಹೇ ಕರ್ನಾಟಕ ಮಾತೆ.. ಸ್ವಾಗತ ಗೀತೆ ಎಲ್ಲರನ್ನು ಮಂತ್ರಮುಗ್ಧಗೊಳಿಸಿತು. ಚಿಕ್ಕಮಕ್ಕಳಿಂದ ಪ್ರದರ್ಶನಗೊಂಡ ಭರತನಾಟ್ಯ ಮೋಹಕವಾಗಿತ್ತು. ‘ಕನ್ನಡದ ಕಲಿ’ ‘ಕಣ್ಮಣಿಯರು’ ಮತ್ತು ‘ನಾನು ಕನ್ನಡತಿ’ ರೂಪಕ ಮನಸೂರೆಗೊಂಡಿತು. ಮಕ್ಕಳು ನೀಡಿದ ಹಿಪ್ ಹ್ಯಾಪ್, ಅಕ್ರೋಬ್ಯಾಟಿಕ್ ನೃತ್ಯ ಅಕರ್ಷಕವಾಗಿತ್ತು. ಪ್ರಿಯಾಂಕಾ, ಅರುಣ ಮತ್ತು ಶ್ರೀಕಾಂತ ವೈವಿಧ್ಯಮಯ ಹಾಡುಗಳನ್ನು ಹಾಡಿ ರಂಜಿಸಿದರು. ಮಹಿಳೆಯರು ಪ್ರದರ್ಶಿಸಿದ ಜಾನಪದ ಮತ್ತು ಶಾಸ್ತ್ರೀಯ ನೃತ್ಯ ಮನಸೂರೆಗೊಂಡಿತು. ಮಕ್ಕಳ ಫ್ಯಾನ್ಸಿ ಡ್ರೆಸ್, ಮಹಿಳೆಯರ ಮಿಶ್ರಿತ ವೈವಿಧ್ಯಮಯ ಚಟುವಟಿಕೆಗಳು, ಧೀರಜ ತಂಡದ ಪ್ರದರ್ಶನ ಮನೋರಂಜನೆ ನೀಡಿತು.

ಕೊನೆಯಲ್ಲಿ ಡಿಜೆ ಶಬ್ದಕ್ಕೆ ಎಲ್ಲರೂ ಕೂಡಿ ನರ್ತಿಸಿದ್ದು ಕನ್ನಡ ಅಭಿಮಾನಕ್ಕೆ ಸಾಕ್ಷಿಯಾಗಿತ್ತು. ಕರ್ನಾಟಕದ ಸಾಂಪ್ರದಾಯಿಕ ಊಟ ಎಲ್ಲರ ಬಾಯಿ ರುಚಿಸಿತು.

ಆಶಾ ಭಾರದ್ವಾಜ್, ವಿಮಲ್ ಡಸೋಜಾ, ಧೀರಜ್ ಮಲ್ಲಪ್ಪ, ಶಿರೀಷ ಕಾಂತಾರಾಜ, ಪಾವನಾ ಸಂಜೀವ, ರಾಧಾಕೃಷ್ಣ ಗಿನ್ನೆಗೌಡ, ನಿರಂಜನ ಗೌಡ, ಬಸವರಾಜ ಯಲ್ಲಾರ್ತಿ, ರಾಜೇಶ ಪಾಟೀಲ, ಸನತ್ ರಾವ್, ಪವನ ಸುಸಲಕುಂಟೆ, ಸುರೇಶ ಚಕ್ರಮಣಿ, ಶಕೀಲ ಅಹ್ಮದ್, ಸುಧೀರ್ ಶಿರಲಕೊಪ್ಪಾ, ದಕ್ಷಿಣ ಮೂರ್ತಿ, ದರ್ಶನ್ ದೊಡ್ಡಮನಿ ಸೇರಿದಂತೆ 250ಕ್ಕೂ ಹೆಚ್ಚು ಕನ್ನಡಿಗರು ಸಂಭ್ರಮದ ರಾಜ್ಯೋತ್ಸವಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT