ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ 31 ಸಶಸ್ತ್ರ ಡ್ರೋನ್‌ಗಳ ಮಾರಾಟ; ಅಮೆರಿಕ ಒಪ್ಪಿಗೆ

Published 2 ಫೆಬ್ರುವರಿ 2024, 13:48 IST
Last Updated 2 ಫೆಬ್ರುವರಿ 2024, 13:48 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಂದಾಜು ₹33,165 ಕೋಟಿ ಮೊತ್ತದ 31 ಸಶಸ್ತ್ರ ಡ್ರೋನ್‌ಗಳನ್ನು (ಎಂಕ್ಯು–9ಬಿ) ಭಾರತಕ್ಕೆ ಮಾರಾಟ ಮಾಡಲು ಅಮೆರಿಕ, ಗುರುವಾರ ಅನುಮೋದನೆ ನೀಡಿದೆ. 

ಡ್ರೋನ್‌ ಮಾರಾಟ ಒಪ್ಪಂದವು ಭಾರತದೊಂದಿಗಿನ ತನ್ನ ಪಾಲುದಾರಿಕೆಯಲ್ಲಿ ಅತ್ಯಂತ ಪರಿಣಾಮಕಾರಿಯಾದುದು ಎಂದು ಬಣ್ಣಿಸಿರುವ ಅಮೆರಿಕವು, ಸಶಸ್ತ್ರ ಡ್ರೋನ್‌ಗಳು ಭಾರತದ ಸಾಗರ ಭದ್ರತೆ ಖಾತರಿಪಡಿಸಲಿದೆ ಎಂದು ಹೇಳಿದೆ. 

ಈ ಒಪ್ಪಂದದಡಿ ಅಮೆರಿಕವು 31 ಹೈ ಆಲ್ಟಿಟ್ಯೂಡ್ ಲಾಂಗ್ ಎಂಡ್ಯೂರೆನ್ಸ್ (ಎಚ್‌ಎಎಲ್‌ಇ) ಡ್ರೋನ್‌ಗಳನ್ನು ಭಾರತಕ್ಕೆ ಪೂರೈಸಲಿದೆ. ಇದರಲ್ಲಿ 15 ಸೀಗಾರ್ಡಿಯನ್ ಡ್ರೋನ್‌ಗಳನ್ನು ನೌಕಾಪಡೆಯಲ್ಲಿ ನಿಯೋಜಿಸಲಾಗುತ್ತದೆ. ಭೂ ಸೇನೆ ಮತ್ತು ವಾಯು ಪಡೆಯು ತಲಾ ಎಂಟು ಸ್ಕೈಗಾರ್ಡಿಯನ್ ಡ್ರೋನ್‌ಗಳನ್ನು ಹೊಂದಲಿವೆ. 

‘ಭಾರತದೊಂದಿಗಿನ ಪಾಲುದಾರಿಕೆಯು ನಮ್ಮ ಅತ್ಯಂತ ಪರಿಣಾಮಕಾರಿ ಸಂಬಂಧಗಳಲ್ಲಿ ಒಂದೆನಿಸಿದೆ. ನಾವು ನಮ್ಮ ಪ್ರಮುಖ ಆದ್ಯತೆಗಳ ಮೇಲೆ ಭಾರತದ ಜತೆ ನಿಕಟವಾಗಿ ಕೆಲಸ ಮಾಡುತ್ತೇವೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಡ್ರೋನ್‌ಗಳನ್ನು ಭಾರತಕ್ಕೆ ಯಾವಾಗ ಒದಗಿಸಲಾಗುವುದು ಎನ್ನುವ ಬಗ್ಗೆ ಕಾಲ ಮಿತಿ ನೀಡಲು ಸಾಧ್ಯವಿಲ್ಲ. ಮುಂಬರುವ ತಿಂಗಳುಗಳಲ್ಲಿ ಭಾರತ ಸರ್ಕಾರದೊಂದಿಗೆ ಚರ್ಚಿಸಿ, ಡ್ರೋನ್‌ಗಳ ಪೂರೈಕೆಯ ಬಗ್ಗೆ ಕಾಲಮಿತಿ ನಿಗದಿಪಡಿಸಲಿದ್ದೇವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಈಗ ಮಾರಾಟ ಮಾಡಲಾಗುತ್ತಿರುವ ಡ್ರೋನ್‌ಗಳ ಸಂಪೂರ್ಣ ಮಾಲೀಕತ್ವವನ್ನು ಭಾರತಕ್ಕೆ ನೀಡಲಾಗುವುದು. ಸದ್ಯ ಗುತ್ತಿಗೆಗೆ ಪಡೆದಿರುವ ಎರಡು ಎಂಕ್ಯು–9ಎ ಡ್ರೋನ್‌ಗಳು ಭಾರತದ ಬಳಿಯಿದೆ. ಆ ಸಂಖ್ಯೆಗೆ ಹೋಲಿಸಿದರೆ, ಭಾರತ ಹೊಂದಲಿರುವ ಡ್ರೋನ್‌ಗಳ ಸಂಖ್ಯೆಯಲ್ಲಿ 16 ಪಟ್ಟು ಹೆಚ್ಚಳವಾಗಲಿದೆ’ ಎಂದರು. 

ಇದೇ ತಿಂಗಳು ನಿವೃತ್ತಿಯಾಗಲಿರುವ ಭಾರತೀಯ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಅವರ ಅಧಿಕಾರಾವಧಿ ಹೇಗಿತ್ತು ಎಂಬ ಪ್ರಶ್ನೆಗೆ, ‘ನಾವು ತರಣ್‌ಜಿತ್ ಜೊತೆಗೆ ನಿಕಟ ಸಂಬಂಧವಿಟ್ಟುಕೊಂಡು ಕೆಲಸ ಮಾಡಿದ್ದೇವೆ. ಅವರ ಮುಂದಿನ ಬದುಕಿಗೆ ಶುಭ ಹಾರೈಸುತ್ತೇವೆ. ಅವರ ಸ್ಥಾನವನ್ನು ತುಂಬುವವರನ್ನು ಸ್ವಾಗತಿಸಲು ಎದುರು ನೋಡುತ್ತೇವೆ’ ಎಂದು ಉತ್ತರಿಸಿದರು.

‘ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ನಿಕಟ ಸಂಬಂಧವಿರಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಕೆಲವು ತುರ್ತು ಮತ್ತು ಪ್ರಮುಖ ಆದ್ಯತೆಗಳಲ್ಲಿ ತೊಡಗಿಸಿಕೊಳ್ಳಲು ಇಬ್ಬರೂ ಸಮರ್ಥರಿದ್ದಾರೆ’ ಎಂದು ಮತ್ತೊಂದು ಪ್ರಶ್ನೆಗೆ ಮಿಲ್ಲರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT