ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌: ಇಮ್ರಾನ್‌ ಖಾನ್‌ ಇರುವ ಜೈಲಿಗೇ ಪತ್ನಿ ಬೀಬಿ ಸ್ಥಳಾಂತರಕ್ಕೆ ಕೋರ್ಟ್‌ ಆದೇಶ

Published 8 ಮೇ 2024, 13:20 IST
Last Updated 8 ಮೇ 2024, 13:20 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಪತ್ನಿ ಬುಶ್ರಾ ಬೀಬಿ ಅವರನ್ನು, ಇಮ್ರಾನ್‌ ಖಾನ್‌ ಸದ್ಯಕ್ಕೆ ಇರುವ ಅಡಿಯಾಲಾ ಜೈಲಿಗೆ ಸ್ಥಳಾಂತರಿಸುವಂತೆ ಇಸ್ಲಾಮಾಬಾದ್ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ತಮ್ಮನ್ನು ಅಡಿಯಾಲಾ ಜೈಲಿಗೆ ವರ್ಗಾಯಿಸುವಂತೆ ಕೋರಿ ಬೀಬಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕಳೆದ ವಾರ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಮಿಯಾಂಗುಲ್‌ ಹಸನ್ ಔರಂಗಜೇಬ್‌, ತೀರ್ಪನ್ನು ಕಾಯ್ದಿರಿಸಿದ್ದರು. 

ಹೈಕೋರ್ಟ್‌ನ ಈ ಆದೇಶವನ್ನು, ಕಾನೂನು ಹೋರಾಟದಲ್ಲಿ ಬುಶ್ರಾ ಬೀಬಿ ಅವರಿಗೆ ದೊರೆತ ದೊಡ್ಡ ಜಯ ಎಂದೇ ವಿಶ್ಲೇಷಿಸಲಾಗುತ್ತಿದೆ. ಸದ್ಯ ಬೀಬಿ ಅವರ ಖಾಸಗಿ ನಿವಾಸವನ್ನೇ ಸಬ್‌ಜೈಲನ್ನಾಗಿ ಪರಿವರ್ತಿಸಲಾಗಿದ್ದು, ಅಲ್ಲಿಯೇ ಅವರು ಸೆರೆವಾಸದಲ್ಲಿದ್ದಾರೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ 71 ವರ್ಷದ ಬುಶ್ರಾ ಬೀಬಿ ಅವರು, ಇಸ್ಲಾಮಾಬಾದ್‌ ಹೊರವಲಯದ ಬಾನಿಗಾಲಾ ಎಂಬಲ್ಲಿರುವ ಇಮ್ರಾನ್ ಖಾನ್ ಅವರ ಬಂಗ್ಲೆಯಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ.

ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯವೊಂದು ಬುಶ್ರಾ ಬೀಬಿ ಹಾಗೂ ಇಮ್ರಾನ್‌ ಖಾನ್‌ ಅವರಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ಅಮಾನತಿನಲ್ಲಿಟ್ಟಿದೆ.

‘ಇಸ್ಲಾಮ್‌ ಆಚರಣೆಗೆ ವಿರುದ್ಧವಾಗಿ’ ನಡೆದಿರುವ ಮದುವೆ ಪ್ರಕರಣದಲ್ಲಿ ಬೀಬಿ ಅವರು ಜೈಲುವಾಸ ಅನುಭವಿಸುತ್ತಿದ್ದಾರೆ.

‘ಇಮ್ರಾನ್‌ ಸುರಕ್ಷತೆ ಖಾತ್ರಿಪಡಿಸಬೇಕು’: ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಸೇರಿದಂತೆ ಪಾಕಿಸ್ತಾನದಲ್ಲಿ ಸೆರೆವಾಸದಲ್ಲಿರುವ ಎಲ್ಲ ಕೈದಿಗಳ ಸುರಕ್ಷತೆ ಖಾತ್ರಿಪಡಿಸಬೇಕು. ಇದು ಮಹತ್ವದ ವಿಷಯ ಎಂದು ಅಮೆರಿಕ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್‌,‘ಪಾಕಿಸ್ತಾನದ ರಾಜಕೀಯ ಪಕ್ಷಗಳ ನಾಯಕರಿಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು ಹಾಗೂ ಮಾನವ ಹಕ್ಕುಗಳ ಪ್ರಾಮುಖ್ಯ ಎತ್ತಿಹಿಡಿಯಬೇಕು’ ಎಂದರು.

‘ಪಾಕಿಸ್ತಾನದಲ್ಲಿನ ಪ್ರಸಕ್ತ ವಿದ್ಯಮಾನಗಳ ಕುರಿತಂತೆ ಅಲ್ಲಿನ ವಿರೋಧ ಪಕ್ಷಗಳ ನಾಯಕರೊಂದಿಗೆ ಪಾಕಿಸ್ತಾನದಲ್ಲಿನ ಅಮೆರಿಕ ರಾಯಭಾರಿ ಚರ್ಚೆ ನಡೆಸಿದ್ದಾರೆ. ಪಾಕಿಸ್ತಾನ ಸೇರಿದಂತೆ ಜಗತ್ತಿನ ಎಲ್ಲ ಕಡೆಗಳಲ್ಲಿ ಪ್ರತಿಯೊಬ್ಬ ಕೈದಿಯ ಸುರಕ್ಷತೆ ಖಾತ್ರಿಪಡಿಸಬೇಕು ಎಂಬುದು ನಮ್ಮ ಬಯಕೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT