ಆಸ್ಟ್ರೇಲಿಯಾ ತಲುಪಿದ ಮೋದಿ ಸಿಡ್ನಿ
ಆರು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಆಸ್ಟ್ರೇಲಿಯಾ ತಲುಪಿದರು. ಅಲ್ಲಿಯ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಅವರ ಜೊತೆ ಮೋದಿ ಮಾತುಕತೆ ನಡೆಸಲಿದ್ದಾರೆ. ಬಳಿಕ ಭಾರತೀಯ ಸಮುದಾಯ ಏರ್ಪಡಿಸಿರುವ ಕಾರ್ಯಕ್ರಮವೊಂದರಲ್ಲಿ ಮೋದಿ ಅವರು ಭಾಗವಹಿಸಲಿದ್ದಾರೆ. ಈ ಕುರಿತು ಮೋದಿ ಅವರು ಟ್ವೀಟ್ ಮಾಡಿದ್ದಾರೆ. ‘ಸಿಡ್ನಿಗೆ ಬಂದಿಳಿದೆ. ಇಲ್ಲಿಯ ಭಾರತೀಯ ಸಮುದಾಯವು ಆಪ್ತವಾಗಿ ಸ್ವಾಗತಿಸಿತು. ಮುಂದಿನ ಎರಡು ದಿನಗಳು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದನ್ನು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ. ‘ಕಳೆದ ವರ್ಷ ಭಾರತಕ್ಕೆ ಭೇಟಿ ನೀಡಿ ಆತ್ಮೀಯ ಸ್ವಾಗತ ಸ್ವೀಕರಿಸಿದ್ದೆ. ಈಗ ಅಧಿಕೃತ ಪ್ರವಾಸದ ಕಾರಣ ಆಸ್ಟ್ರೇಲಿಯಾಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ ಆತಿಥ್ಯ ನೀಡಲು ಸಂತಸವಾಗುತ್ತಿದೆ’ ಎಂದು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಅವರು ಹೇಳಿಕೆ ನೀಡಿದ್ದಾರೆ.