ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

1985ರ ಕಾನಿಷ್ಕ ಬಾಂಬ್‌ ದಾಳಿ ಕೃತ್ಯ ತನಿಖೆ ಸಕ್ರಿಯವಾಗಿದೆ –ಕೆನಡಾ ಪೊಲೀಸ್

Published 22 ಜೂನ್ 2024, 15:30 IST
Last Updated 22 ಜೂನ್ 2024, 15:30 IST
ಅಕ್ಷರ ಗಾತ್ರ

ಒಟ್ಟಾವಾ (ಪಿಟಿಐ): ‘ಏರ್‌ ಇಂಡಿಯಾ ವಿಮಾನ 182ರ ಮೇಲೆ 1985ರಲ್ಲಿ ನಡೆದಿದ್ದ ಬಾಂಬ್‌ ದಾಳಿ ಕೃತ್ಯದ ತನಿಖೆಯು ಈಗಲೂ ಸಕ್ರಿಯವಾಗಿದೆ ಮತ್ತು ಪ್ರಗತಿಯಲ್ಲಿದೆ’ ಎಂದು ಕೆನಡಾದ ಪೊಲೀಸರು ತಿಳಿಸಿದ್ದಾರೆ.

‘ಇದು, ಅತ್ಯಂತ ದೀರ್ಘಕಾಲ ಅವಧಿಯ ಹಾಗೂ ಅತ್ಯಂತ ಸಂಕೀರ್ಣವಾದ ಭಯೋತ್ಪಾದನೆ ಕೃತ್ಯದ ತನಿಖೆಯಾಗಿದೆ’ ಎಂದು ಪೊಲೀಸರು ವ್ಯಾಖ್ಯಾನಿಸಿದ್ದಾರೆ. ವಿಮಾನದ ಮೇಲಿನ ಬಾಂಬ್ ದಾಳಿ ಘಟಿಸಿ 39 ವರ್ಷಗಳು ಗತಿಸಿದ ಹಿನ್ನೆಲೆಯಲ್ಲಿ ಪೊಲೀಸರು ಈ ಮಾತು ಹೇಳಿದ್ದಾರೆ.

ಕೆನಡಾದ ಮಾಂಟ್ರಿಯಲ್‌ ಮತ್ತು ನವದೆಹಲಿ ನಡುವಣ ಏರ್‌ ಇಂಡಿಯಾದ ‘ಕಾನಿಷ್ಕಾ 182’ ವಿಮಾನವು ಜೂನ್‌ 23, 1985ರಂದು ಲಂಡನ್‌ನ ಹೀಥ್ರೂ ವಿಮಾನನಿಲ್ದಾಣದಲ್ಲಿ ಭೂಸ್ಪರ್ಶಕ್ಕೆ 45 ನಿಮಿಷ ಮೊದಲು ಸ್ಫೋಟಗೊಂಡಿತ್ತು. ಒಟ್ಟು 329 ಮಂದಿ ಸತ್ತಿದ್ದು, ಇವರಲ್ಲಿ ಹೆಚ್ಚಿನವರು ಭಾರತ ಮೂಲದ ಕೆನಡಾದವರು.  

1984ರಲ್ಲಿ ಸ್ವರ್ಣಮಂದಿರದಲ್ಲಿ ನಡೆದಿದ್ದ ‘ಆಪರೇಷನ್ ಬ್ಲೂಸ್ಟಾರ್‌’ ಕಾರ್ಯಾಚರಣೆಗೆ ಪ್ರತೀಕಾರವಾಗಿ ಸಿಖ್‌ ಉಗ್ರವಾದಿಗಳು ಈ ಬಾಂಬ್‌ ಕೃತ್ಯವನ್ನು ಎಸಗಿದ್ದರು ಎಂದು ಆರೋಪಿಸಲಾಗಿತ್ತು.

ಶುಕ್ರವಾರ ಈ ಕುರಿತು ಹೇಳಿಕೆ ನೀಡಿರುವ ರಾಯಲ್‌ ಕೆನಡಿಯನ್‌ ಮೌಂಟೆಡ್‌ ಪೊಲೀಸ್‌ (ಆರ್‌ಸಿಎಂಪಿ) ಸಹಾಯಕ ಕಮಿಷನರ್‌ ಡೇವಿಡ್‌ ಟೆಬೌಲ್ ಅವರು, ‘ದೇಶದ ಇತಿಹಾಸದಲ್ಲಿಯೇ ಕೆನಡಿಯನ್ನರ ಜೀವಹಾನಿಗೆ ಕಾರಣವಾದ ಅತಿದೊಡ್ಡ ಭಯೋತ್ಪಾದಕ ಕೃತ್ಯ ಇದಾಗಿತ್ತು’ ಎಂದು ಹೇಳಿದ್ದಾರೆ.

‘ಈ ಕೃತ್ಯದ ತನಿಖೆಯು ಸಕ್ರಿಯವಾಗಿದೆ ಮತ್ತು ಪ್ರಗತಿಯಲ್ಲಿದೆ. ಅದರ ಪರಿಣಾಮವು ಕಾಲ ಕಳೆದಂತೆ ಮಾಸುವುದಿಲ್ಲ. ಭವಿಷ್ಯದ ಪೀಳಿಗೆಗಳ ಮೇಲೂ ಅದರ ಪರಿಣಾಮ ಇರುತ್ತದೆ. ಇಂಥ ಕೃತ್ಯಗಳಿಂದ ಜೀವಕಳೆದುಕೊಳ್ಳುವ ಅಮಾಯಕರನ್ನು ಮರೆಯಲಾಗದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT