ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಂಘೈನಲ್ಲಿ ಶತಮಾನದಲ್ಲೇ ಅತೀ ಹೆಚ್ಚು ತಾಪಮಾನ ದಾಖಲು

Published 29 ಮೇ 2023, 14:00 IST
Last Updated 29 ಮೇ 2023, 14:00 IST
ಅಕ್ಷರ ಗಾತ್ರ

ಶಾಂಘೈ: ಚೀನಾದ ಶಾಂಘೈನಲ್ಲಿ ಕಳೆದ 100 ವರ್ಷಗಳಲ್ಲೇ ಅತಿ ಹೆಚ್ಚಿನ ತಾಪಮಾನ ಸೋಮವಾರ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಮಧ್ಯಾಹ್ನ 1.09ರ ಸಮಯದಲ್ಲಿ ಶುಯಿಜಿ ಮೆಟ್ರೊ ನಿಲ್ದಾಣದಲ್ಲಿ 36.1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. 100 ವರ್ಷಗಳ ಹಿಂದೆ ಮೇ ತಿಂಗಳಲ್ಲಿ ದಾಖಲಾಗಿದ್ದ ಅತೀ ಹೆಚ್ಚಿನ ತಾಪಮಾನದ ದಾಖಲೆಯನ್ನು ಇದು ಮುರಿದಿದೆ ಎಂದು ಇಲಾಖೆ ಹೇಳಿದೆ.

ಮಧ್ಯಾಹ್ನದ ನಂತರ, ಶಾಂಘೈನ ಕೇಂದ್ರ ಮೆಟ್ರೊ ನಿಲ್ದಾಣದಲ್ಲಿ ತಾಪಮಾನವು 36.7 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಯಿತು ಎಂದು ಹವಾಮಾನ ಇಲಾಖೆ ತಿಳಿಸಿದೆ.

35.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಈ ಹಿಂದಿನ ದಾಖಲೆಯಾಗಿತ್ತು. ಈ ಪ್ರಮಾಣದ ತಾಪಮಾನವು 1876, 1903, 1915 ಮತ್ತು 2018ರಲ್ಲಿ ಒಟ್ಟು ನಾಲ್ಕು ಬಾರಿ ದಾಖಲಾಗಿತ್ತು. 

ಹಸಿರುಮನೆ ಅನಿಲಗಳ ಹೊರಸೂಸುವಿಕೆ ಮತ್ತು ಎಲ್‌ನಿನೊ ಪರಿಣಾಮದಿಂದಾಗಿ ಉಷ್ಣತೆ ಏರಿಕೆಯಾಗುವ ಮೂಲಕ 2023-2027ರ ಅವಧಿಯು ಅತ್ಯಂತ ಬಿಸಿಲಿನ ಅವಧಿಯಾಗಿರಲಿದೆ ಎಂದು ವಿಶ್ವಸಂಸ್ಥೆಯು ಇದೇ ತಿಂಗಳಲ್ಲಿ ಎಚ್ಚರಿಕೆ ನೀಡಿತ್ತು.

ಪ್ಯಾರಿಸ್ ಒಪ್ಪಂದದಲ್ಲಿ ನಿಗದಿಪಡಿಸಿದ, ಹವಾಮಾನ ಬದಲಾವಣೆ ತಗ್ಗಿಸುವ ಅತ್ಯಂತ ಮಹತ್ವಾಕಾಂಕ್ಷೆಯ ಗುರಿ ಸಾಧಿಸುವುದರಿಂದ ಹೊರಗುಳಿದರೆ, ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ತಾಪಮಾನ ಈಗಿರುವುದಕ್ಕಿಂತಲೂ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಎಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT