ಕಾಬೂಲ್ (ಎಪಿ): ಪೂರ್ವ ಆಫ್ಘಾನಿಸ್ತಾನದಲ್ಲಿ ಭಾನುವಾರ ವಾಲಿಬಾಲ್ ಪಂದ್ಯಾವಳಿ ನಡೆಯುತ್ತಿದ್ದಾಗ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 50 ಜನರು ಮೃತಪಟ್ಟು, 60 ಮಂದಿ ತೀವ್ರ ಗಾಯಗೊಂಡಿದ್ದಾರೆ.
ಪಾಕಿಸ್ತಾನ ಗಡಿಯಲ್ಲಿರುವ ಪಾಕ್ತಿಕ ಪ್ರಾಂತ್ಯದ ಯಾಹ್ಯಾಖೈಲ್ ಜಿಲ್ಲೆಯಲ್ಲಿ ಅಂತರ ಜಿಲ್ಲಾ ವಾಲಿಬಾಲ್ ಪಂದ್ಯಾವಳಿ ನಡೆಯುತ್ತಿದ್ದಾಗ, ಆತ್ಮಾಹುತಿ ಬಾಂಬ್ ದಾಳಿಕೋರನೊಬ್ಬ ಮೋಟಾರ್ಸೈಕಲ್ನೊಂದಿಗೆ ಗುಂಪಿಗೆ ಮುನ್ನುಗ್ಗಿ ತನ್ನನ್ನು ಸ್ಫೋಟಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಪ್ರಾಂತೀಯ ಅಧಿಕಾರಿಗಳು, ಪೊಲೀಸ್ ಮುಖ್ಯಸ್ಥರು ಸೇರಿ ಅಪಾರ ಜನಸಮೂಹ ಸೇರಿತ್ತು. ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ, ಪ್ರಾಂತೀಯ ಗವರ್ನರ್ ಈ ದಾಳಿಯನ್ನು ಖಂಡಿಸಿದ್ದಾರೆ.
ಈ ಬಗ್ಗೆ ತಾಲಿಬಾನ್ ಉಗ್ರರು ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಆಫ್ಘನ್ ಸಂಸತ್ನ ಕೆಳಮನೆ ಸುಮಾರು 12,500 ನ್ಯಾಟೊ ನೇತೃತ್ವ ಪಡೆಗಳಿಗೆ ಮುಂದಿನ ವರ್ಷವೂ ದೇಶದಲ್ಲಿರಲು ಅವಕಾಶ ನೀಡುವ ಒಪ್ಪಂದಕ್ಕೆ ಅಂಗೀಕಾರ ನೀಡಿದ ದಿನವೇ ಈ ದಾಳಿ ನಡೆದಿದೆ.