ಇಸ್ಲಾಮಾಬಾದ್ (ಐಎಎನ್ಎಸ್): ಸೇತುವೆ ಕುಸಿದು ಸೇನಾ ರೈಲೊಂದರ ನಾಲ್ಕು ಬೋಗಿಗಳು ಕಾಲುವೆಗೆ ಬಿದ್ದ ಪರಿಣಾಮ ಸೇನಾ ಸಿಬ್ಬಂದಿ ಸೇರಿದಂತೆ 19 ಮಂದಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಗುಜ್ರನ್ವಾಲಾ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ನೀರಿನಿಂದ ಮೂರು ಬೋಗಿಗಳನ್ನು ಪಾಕಿಸ್ತಾನದ ರೈಲ್ವೆ ಸಿಬ್ಬಂದಿ ಹೊರತೆಗೆದಿದ್ದು, ರೈಲ್ವೆ ಎಂಜಿನ್ ಈವರೆಗೂ ಪತ್ತೆಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಶವಗಳನ್ನು ಮೃತ ಕುಟುಂಬಗಳಿಗೆ ಹಸ್ತಾಂತರಿಸಲಾಗಿದ್ದು, ಪಂಜಾಬ್ ಗುಜ್ರನ್ವಾಲಾ ದಂಡು ರೈಲು ನಿಲ್ದಾಣ ದಲ್ಲಿ ಮೃತಪಟ್ಟ ಪ್ರಯಾಣಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಘಟನೆ ಕುರಿತು ತನಿಖೆ ನಡೆಸುವಂತೆ 7 ಜನರನ್ನು ಒಳಗೊಂಡ ಅಧಿಕಾರಿಗಳ ತಂಡವನ್ನು ನೇಮಿಸಲಾಗಿದೆ ಎಂದು ‘ಡಾನ್’ ಶನಿವಾರ ವರದಿ ಮಾಡಿದೆ.
ಅಪಘಾತಕ್ಕೀಡಾದ ರೈಲಿನ 21 ಬೋಗಿಗಳನ್ನು ಹತ್ತಿರದ ರೈಲು ನಿಲ್ದಾಣಕ್ಕೆ ತರಲಾಗಿದ್ದು, ಹಳಿಯನ್ನು ಸರಿಪಡಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.