ವಾಷಿಂಗ್ಟನ್ (ಪಿಟಿಐ): ಅಲ್ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಹತ್ಯೆ ಕಾರ್ಯಾಚರಣೆಯಲ್ಲಿ ಸಿಐಎಗೆ ನೆರವು ನೀಡಿದ ಕಾರಣಕ್ಕಾಗಿ `ದೇಶದ್ರೋಹಿ ಆರೋಪ~ಕ್ಕೊಳಗಾಗಿ ಈಗ ಪಾಕಿಸ್ತಾನ ಜೈಲಿನಲ್ಲಿರುವ ವೈದ್ಯ ಡಾ. ಶಕೀಲ್ ಅಫ್ರಿದಿ ಅವರಿಗೆ ಅಮೆರಿಕದ ನಾಗರಿಕತ್ವ ನೀಡಬೇಕೆಂದು ಇಲ್ಲಿನ ಕಾಂಗ್ರೆಸ್ ಸಂಸದರ ಗುಂಪೊಂದು ಒತ್ತಾಯಿಸಿದೆ.
ಈ ಪಾಕ್ ವೈದ್ಯನಿಗೆ ತಮ್ಮ ದೇಶದ ಪೌರತ್ವ ನೀಡುವಂತೆ ಸೂಚಿಸಿ ಅಮೆರಿಕ ಜನಪ್ರತಿನಿಧಿಗಳ ಸಭೆಯಲ್ಲಿ (ಕೆಳಮನೆ) ಮಸೂದೆಯೊಂದನ್ನು ಮಂಡಿಸಲಾಗಿದೆ ಎಂದು ಕಾಂಗ್ರೆಸ್ಸಿಗ ಡಾನಾ ರೊಹ್ರಾಬಚರ್ ತಿಳಿಸಿದ್ದಾರೆ.
ಈ ಮಸೂದೆಗೆ ಬಿಲ್ ಪೋಸಿ, ಟೆಡ್ ಪೋ, ರೋಸ್ಕೊ ಬಾರ್ಲೆಟ್ ಸೇರಿದಂತೆ ಡಜನ್ಗೂ ಅಧಿಕ ಸಂಸದರು ಸಹಿ ಹಾಕಿರುವುದಾಗಿ ತಿಳಿದುಬಂದಿದೆ.
ಲಾಡೆನ್ ಕಾರ್ಯಾಚರಣೆಯಲ್ಲಿ ಡಾ. ಅಫ್ರಿದಿ ನೆರವಾದುದನ್ನು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಿಯಾನ್ ಪನೆಟ್ಟಾ ಅವರು ಬಹಿರಂಗಪಡಿಸಿದ ನಂತರ ಈ ಒತ್ತಾಯ ಕೇಳಿಬಂದಿದೆ.