ನ್ಯೂಯಾರ್ಕ್ (ಪಿಟಿಐ): ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದಿದ್ದ 9/11ರ ಭಯೋತ್ಪಾದನಾ ದಾಳಿಯ ಸಂತ್ರಸ್ತರಿಗೆ ಮೀಸಲಾಗಿರಿಸಿದ್ದ ಲಕ್ಷಾಂತರ ಡಾಲರ್ ನಿಧಿಯನ್ನು ನ್ಯೂಯಾರ್ಕ್ನ ಮಾಜಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಹಲವರು ತಮ್ಮ ಐಷಾರಾಮಿ ಜೀವನಕ್ಕೆ ಬಳಸಿಕೊಂಡು ವಂಚನೆ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.
ಮ್ಯಾನ್ಹಟನ್ನ ಜಿಲ್ಲಾ ಅಟಾರ್ನಿ ಅವರ ಕಚೇರಿ ಮಂಗಳವಾರ ಬಿಡುಗಡೆ ಮಾಡಿರುವ ಆರೋಪಿಗಳ ಪಟ್ಟಿಯಲ್ಲಿ 106 ಜನರನ್ನು ಹೆಸರಿಸಲಾಗಿದೆ. ಇದರಲ್ಲಿ ನ್ಯೂಯಾರ್ಕ್ನ ಮಾಜಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೇರಿದ್ದಾರೆ. ಇವರಲ್ಲಿ ನಾಲ್ವರ ವಿರುದ್ಧ ಭಾರಿ ವಂಚನೆ ಎಸಗಿದ ಆರೋಪ ಹೊರಿಸಲಾಗಿದೆ.
ವಂಚಕರ ತಂಡದ ನೇತೃತ್ವವನ್ನು 83 ವರ್ಷದ ರೇಮಂಡ್ ಲ್ಯಾವೆಲ್ಲೆ ಎಂಬಾತ ಹೊತ್ತಿದ್ದ. ಮೂಲತಃ ವಕೀಲನಾಗಿದ್ದ ರೇಮಂಡ್, ಎಫ್ಬಿಐಯ ಏಜೆಂಟ್ ಆಗಿ ವೃತ್ತಿ ಆರಂಭಿಸಿದ್ದ. ನಸ್ಸಾವು ಕೌಂಟಿಯ ಹಿರಿಯ ಪ್ರಾಸಿಕ್ಯೂಟರ್ ಆಗಿಯೂ ಕಾರ್ಯನಿರ್ವಹಿಸಿದ್ದ ಎಂದು ಹೇಳಿಕೆ ತಿಳಿಸಿದೆ.
ಪಿಂಚಣಿ ಸಲಹೆಗಾರನಾಗಿದ್ದ ಥಾಮಸ್ ಹಾಲೆ (89) ಮತ್ತು ಮಾಜಿ ಪೊಲೀಸ್ ಅಧಿಕಾರಿ ಜೋಸೆಫ್ ಮಿನರ್ವಾ (61) ಅವರೊಂದಿಗೆ ಸೇರಿ ಲ್ಯಾವೆಲ್ಲಾ ಈ ವಂಚನೆ ಎಸಗಿದ್ದಾನೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹಗರಣಕ್ಕೆ ಆಘಾತ ವ್ಯಕ್ತಪಡಿಸಿರುವ ಮ್ಯಾನ್ಹಟನ್ ಅಟಾರ್ನಿ ಜನರಲ್ ಸೈರಸ್ ವಾನ್ಸೆ, ‘ಈ ನಿರ್ಲಜ್ಜತನ ಆಘಾತಕಾರಿ’ ಎಂದು ಹೇಳಿದ್ದಾರೆ.