ಟೆಹ್ರಾನ್ (ಎಪಿ): ಮೂರು ವರ್ಷಗಳ ಕಾಲ ಬಂಧನದಲ್ಲಿದ್ದ ಮಾನವ ಹಕ್ಕು ಹೋರಾಟಗಾರ್ತಿ ನಸ್ರಿನ್ ಸೊತೊದೆ ಅವರನ್ನು ಕೊನೆಗೂ ಇರಾನ್ ಬಿಡುಗಡೆ ಮಾಡಿದೆ.
ಅಧ್ಯಕ್ಷ ಹಸನ್ ರೊಹನಿ ಅವರು ಮುಂದಿನ ವಾರ ನ್ಯೂಯಾರ್ಕ್ ಗೆ ತೆರಳಲಿದ್ದು, ಇದಕ್ಕೂ ಮುನ್ನವೇ ವಕೀಲೆ ನಸ್ರಿನ್ ಅವರನ್ನು ಬಿಡುಗಡೆ ಮಾಡಲಾಗಿದೆ.
ಇರಾನ್ ಒಳಗೆ ಹಾಗೂ ಹೊರಗೆ ಮುಕ್ತವಾತಾವರಣ ಕಲ್ಪಿಸಲಾಗುವುದು ಎಂದು ಹಸನ್ ಅವರು ಅಧ್ಯಕ್ಷರಾದ ಬಳಿಕ ಅಭಯ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇಬ್ಬರು ಮಕ್ಕಳ ತಾಯಿ ನಸ್ರಿನ್ ಅವರನ್ನು 2011ರ ಮಾರ್ಚ್ ನಲ್ಲಿ ಬಂಧಿಸಲಾಗಿತ್ತು.
ಮೊಹಮ್ಮದ್ ಖಟಾಮಿ ಅವಧಿಯಲ್ಲಿ ಉಪವಿದೇಶಾಂಗ ಸಚಿವರಾಗಿದ್ದ ಮೊಸೆನ್ ಅಮಿನ್ ಜದೆ, ವಾಣಿಜ್ಯ ಖಾತೆ ಉಪ ಸಚಿವರಾಗಿದ್ದ ಫೈಜೊಲ್ಲಾ ಅರಬ್ ಸೊರ್ಕಿ ಮತ್ತು ಪತ್ರಕರ್ತೆ ಇಶಾ ಸಹರ್ಕಿಜ್ ಅವರನ್ನೂ ಬಿಡುಗಡೆ ಮಾಡಲಾಗಿದೆ.
ಭದ್ರತೆಗೆ ಅಪಾಯ ತಂದೊಡ್ಡುವ ಆರೋಪದ ಮೇಲೆ 2009ರಲ್ಲಿ ( ವಿವಾದಿತ ಚುನಾವಣೆ ನಡೆದ ಸಂದರ್ಭ) ಇವರನ್ನು ಬಂಧಿಸಲಾಗಿತ್ತು. ‘ಇರಾನ್ ಹೆಚ್ಚು ಮುಕ್ತ ವಾತಾವರಣಕ್ಕೆ ತೆರೆದುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ’ ಎಂದಿದ್ದಾರೆ ರಾಜಕೀಯ ವಿಶ್ಲೇಷಕ ಸರೊಶ್ ಫರ್ಹದಿ.